ಎಂಎಸ್ ಧೋನಿ ಐಪಿಎಲ್‌ನಿಂದಲೂ ನಿವೃತ್ತಿಯಾಗುವ ಮೂಲಕ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಧೋನಿಯ 07 ಜರ್ಸಿ ನಂಬರ್ ಯಾರಿಗೆ ಸಿಗಲಿದೆ? ಜರ್ಸಿ ನಂಬರ್ ಹಿಂದಿನ ಸೀಕ್ರೆಟ್ ಏನು?

ಬೆಂಗಳೂರು (ನ.21) ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಐಪಿಎಲ್‌ನಿಂದ ನಿವೃತ್ತಿ ಹೇಳಿದ್ದಾರೆ. ಚನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿರುವ ಧೋನಿ 2027ರ ಐಪಿಎಲ್ ಟೂರ್ನಿಯಲ್ಲಿ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಧೋನಿ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಇದೀಗ ಧೋನಿಯ 07 ಜರ್ಸಿ ನಂಬರ್ ಯಾರಿಗೆ ಸಿಗಲಿದೆ. ಈ ಜರ್ಸಿ ನಂಬರ್ ಪಡೆಯುವ ಅದೃಷ್ಠವಂತ ಯಾರು ಅನ್ನೋ ಚರ್ಚೆಗಳು ಶುರುವಾಗಿದೆ. ಅಸಲಿಗೆ 07 ಜರ್ಸಿ ನಂಬರ್ ಭಾರತದಲ್ಲಿ ಇನ್ಯಾರಿಗೂ ಪಡೆಯಲು ಸಾಧ್ಯವಿಲ್ಲ.

ಧೋನಿ ಜೊತೆಗೆ 07 ಜರ್ಸಿ ನಂಬರ್ ಕೂಡ ನಿವೃತ್ತಿ

ಧೋನಿ ಜರ್ಸಿ ನಂಬರ್ ಭಾರತದಲ್ಲಿ ಯಾರೂ ಪಡೆಯಲು ಸಾಧ್ಯವಿಲ್ಲ. ಧೋನಿ ಜೊತೆಗೆ 07 ಜರ್ಸಿ ಕೂಡ ನಿವೃತ್ತಿಯಾಗಿದೆ. ಎಂಎಸ್ ಧೋನಿ ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ನಾಯಕ. ಐಸಿಸಿಯ ಮೂರು ಮಾದರಿ ಟ್ರೋಫಿ ಗೆಲ್ಲಿಸಿದ ನಾಯಕ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿದ ನಾಯಕ ಧೋನಿ. ಇನ್ನು ಐಪಿಎಲ್ ಟೂರ್ನಿಯಲ್ಲಿ 5 ಟ್ರೋಫಿ ಗೆಲ್ಲಿಸಿದ ನಾಯಕ. ಧೋನಿ ಕೊಡುಗೆ ಪರಿಗಣಿಸಿದ ಬಿಸಿಸಿಐ 07 ಜರ್ಸಿ ನಂಬರ್‌ಗೆ ನಿವೃತ್ತಿ ಘೋಷಿಸಿದೆ.

ಭಾರತದಲ್ಲಿ ಎರಡೇ ಜರ್ಸಿ ನಂಬರ್ ನಿವೃತ್ತಿ

ಎಂಎಸ್ ಧೋನಿಯ ಜರ್ಸಿ ನಂಬರ್‌ನ್ನು 2023ರಲ್ಲೇ ಬಿಸಿಸಿಐ ನಿವೃತ್ತಿ ಘೋಷಿಸಿದೆ. ಹೀಗಾಗಿ 07 ಜರ್ಸಿ ನಂಬರ್ ಯಾರಿಗೂ ಲಭ್ಯವಿಲ್ಲ. ಅದು ಟೀಂ ಇಂಡಿಯಾ ಆಗಿರಲಿ, ಐಪಿಎಲ್ ಆಗಿರಲಿ ಯಾವುದೇ ಕ್ರಿಕೆಟಿಗರಿಗೂ 07 ಜರ್ಸಿ ನಂಬರ್ ಲಭ್ಯವಿರುವುದಿಲ್ಲ. ಈ ರೀತಿ ಭಾರತದಲ್ಲಿ ನಿವೃತ್ತಿಯಾಗಿರುವುದು ಕೇವಲ ಎರಡು ನಂಬರ್ ಮಾತ್ರ. ಒಂದು ಧೋನಿಯ 07 ಮತ್ತೊಂದು ಸಚಿನ್ ತೆಂಡೂಲ್ಕರ್ ಅವರ ಜರ್ಸಿ ನಂಬರ್ 10. ಸಚಿನ್ ನಿವೃತ್ತಿ ಬಳಿಕ 2017ರಲ್ಲಿ ಬಿಸಿಸಿಐ ಜರ್ಸಿ ನಂಬರ್ 10ಕ್ಕೆ ನಿವೃತ್ತಿ ಘೋಷಿಸಿತ್ತು. ಹೀಗಾಗಿ ಹಾಲಿ ಅಥವಾ ಹೊಸ ಆಟಗಾರರಿಗೆ 07 ಹಾಗೂ 10 ಜರ್ಸಿ ನಂಬರ್ ಲಭ್ಯವಿಲ್ಲ.

ಜರ್ಸಿ ನಂಬರ್ ನಿಯಮವೇನು?

ಕ್ರಿಕೆಟ್‌ನಲ್ಲಿ ಜರ್ಸಿ ಸಂಖ್ಯೆ ಅತ್ಯಂತ ಮುಖ್ಯ. ಫುಟ್ಬಾಲ್, ರಗ್ಬಿ ಸೇರಿದಂತೆ ಇತರ ಕ್ರಿಡೆಗಳಲ್ಲಿ ಸ್ಥಾನಕ್ಕೆ ಅನುಗುಣವಾಗಿ ಜರ್ಸಿ ನಂಬರ್ ನೀಡುವ ಪದ್ಧತಿ ಕ್ರಿಕೆಟ್‌ನಲ್ಲಿ ಇಲ್ಲ. ಕ್ರಿಕೆಟ್‌ನಲ್ಲಿ ಆಟಗಾರರು ತಮ್ಮಿಷ್ಟದ ಜರ್ಸಿ ನಂಬರ್ ಬಳಸಲು ಅವಕಾಶವಿದೆ. ಜರ್ಸಿ ನಂಬರ್ ಸೂಚಿಸುವಾಗ ಹಾಲಿ ಕ್ರಿಕೆಟಿಗರು ಬಳಸಿದ ನಂಬರ್ ಬಳಕೆ ಮಾಡುವಂತಿಲ್ಲ. ಇನ್ನು ನಿವೃತ್ತಿ ಘೋಷಿಸಿರುವ ನಂಬರ್ ಕೂಡ ಲಭ್ಯವಿಲ್ಲ. ಇದನ್ನು ಹೊರತುಪಡಿಸಿ ತಮ್ಮಿಷ್ಟದ ನಂಬರ್ ಬಳಕೆ ಮಾಡಬಹುದು.

ನಿವತ್ತಿ ಹೇಳುವ ಕ್ರಿಕೆಟಿಗ ಜರ್ಸಿ ನಂಬರ್ ನಿಯಮ

ಕ್ರಿಕೆಟಿಗರು ನಿವೃತ್ತಿ ಹೇಳಿದ ಬಳಿಕ ಸ್ಟಾರ್ ಕ್ರಿಕೆಟಿಗರ ಜರ್ಸಿ ನಂಬರ್ ಪಡೆಯಲು ಪೈಪೋಟಿ ಇರುತ್ತದೆ. ಇದಕ್ಕೂ ಒಂದು ನಿಯಮವಿದೆ. ನಿವೃತ್ತಿ ಹೇಳಿದ ಒಂದು ವರ್ಷದ ವರೆಗೆ ಜರ್ಸಿ ನಂಬರ್ ಬೇರೆ ಯಾರು ಬಳಸುವಂತಿಲ್ಲ, ಅದನ್ನು ಯಾರಿಗೂ ನೀಡಲು ಸಾಧ್ಯವಿಲ್ಲ. ಒಂದು ವರ್ಷ ಬಳಿಕ ನಿವೃತ್ತಿ ಕ್ರಿಕೆಟಿಗರ ಜರ್ಸಿ ನಂಬರ್ ಪಡೆಯಬಹುದು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ಎಂಎಸ್ ಧೋನಿ ಜರ್ಸಿ ನಂಬರ್ ಶಾಶ್ವತವಾಗಿ ನಿವೃತ್ತಿ ಘೋಷಿಸಿದೆ. ಹೀಗಾಗಿ ಈ ನಂಬರ್ ಲಭ್ಯವಿಲ್ಲ. ರಾಹುಲ್ ದ್ರಾವಿಡ್ ನಿವೃತ್ತಿ ಹೇಳಿದ ಒಂದು ವರ್ಷ ಬಳಿಕ 19 ಜರ್ಸಿ ನಂಬರನ್ನು ದಿನೇಶ್ ಕಾರ್ತಿಕ್ ಪಡೆದುಕೊಂಡಿದ್ದರು.