ಟೆಸ್ಟ್ ಸರಣಿಯಿಂದ ಹೊರಬಿದ್ದ ಬಳಿಕ ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ ಹಂಚಿಕೊಂಡ ಭಾವುಕ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಿಂದೆ ತಮ್ಮ ತಂದೆ ಹೇಳಿದ್ದ ಪ್ರೇರಣಾದಾಯಿ ಮಾತುಗಳನ್ನು ಆಡಿ ಭಾವುಕರಾದ ಸಿರಾಜ್ ಮಾತುಗಳು ಅವು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಪಪ್ಪಾ ನೇ ಮುಝೆ ಬೋಲಾ, ಬೇಟಾ ತುಮ್ ಬಸ್ ಇಂಡಿಯಾ ಕಾ ನಾಮ್ ರೋಶನ್ ಕರ್, ಮೈ ಹೂ ತೇರೆ ಸಾಥ್. ಇದೇ ಆ ಮಾತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ತಂಡದಿಂದ ಕೈಬಿಟ್ಟ ಬೇಸರದ ನಡುವೆಯೂ, ಸಿರಾಜ್ ತಮ್ಮ ತಂದೆ ಹಿಂದೆ ಹೇಳಿದ್ದ ಈ ಮಾತನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಸಿರಾಜ್ ಅವರ ಈ ಮಾತು ಕೇಳಿ ಅಭಿಮಾನಿಗಳ ಕಣ್ಣಾಲಿ ಒದ್ದೆಯಾಗಿದ್ದು, "ಸಿರಾಜ್ ಇಲ್ಲದ ಟೀಮ್ ಇಂಡಿಯಾ ಅಪೂರ್ಣ" ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇಲ್ಲಿ ಸಿರಾಜ್‌ ಏಕೆ ಮುಖ್ಯ ಅವನು ನಡೆದ ಬಂದ ದಾರಿ ಹೇಗಿದೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

ತಂದೆಯ ಕನಸು ಮತ್ತು ಸಿರಾಜ್ ತ್ಯಾಗ!

ಹೈದರಾಬಾದ್‌ನ ಬಡ ಕುಟುಂಬದಲ್ಲಿ ಹುಟ್ಟಿ, ತಂದೆ ಮೊಹಮ್ಮದ್ ಗೌಸ್ ಅವರ ಬೆವರಿನ ಹನಿಯಿಂದ ಬೆಳೆದು ದೇಶಕ್ಕಾಗಿ ಆಡುವ ಕನಸು ಕಂಡವರು ಸಿರಾಜ್. 2020ರ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ತಂದೆ ನಿಧನರಾದರೂ, ಅಂತಿಮ ದರ್ಶನಕ್ಕೆ ಬರದೆ "ತಂದೆಯ ಕನಸು ನನಸು ಮಾಡುವುದೇ ಅವರಿಗೆ ನಾನು ನೀಡುವ ನಿಜವಾದ ಶ್ರದ್ಧಾಂಜಲಿ ಎಂದು ಅಲ್ಲೇ ಉಳಿದು ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ಪ್ರತಿ ಬಾರಿ ರಾಷ್ಟ್ರಗೀತೆ ಮೊಳಗಿದಾಗ ಸಿರಾಜ್ ಕಣ್ಣಲ್ಲಿ ಬರುವ ನೀರು, ದೇಶಕ್ಕಾಗಿ ಆಡುವ ಅವರ ಪ್ರಾಮಾಣಿಕ ತುಡಿತಕ್ಕೆ ಸಾಕ್ಷಿ.

ಕಿವೀಸ್ ಪ್ರವಾಸಕ್ಕೆ ಸಿರಾಜ್ ಏಕೆ ಅತ್ಯಗತ್ಯ?

ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲ, ಕ್ರಿಕೆಟ್ ತಂತ್ರಗಾರಿಕೆಯ ದೃಷ್ಟಿಯಿಂದಲೂ ನ್ಯೂಜಿಲೆಂಡ್ ಪಿಚ್‌ಗಳಲ್ಲಿ ಸಿರಾಜ್ ಟೀಮ್ ಇಂಡಿಯಾಗೆ ಬ್ರಹ್ಮಾಸ್ತ್ರವಿದ್ದಂತೆ. ವೆಲ್ಲಿಂಗ್ಟನ್ ಟೆಸ್ಟ್‌ನ ಮೊದಲ ದಿನ ಭಾರತ 70 ರನ್‌ಗಳಿಗೆ 5 ವಿಕೆಟ್ ಪಡೆದು ಮಿಂಚಿತ್ತು. ಆದರೆ ಪಿಚ್ ಬ್ಯಾಟಿಂಗ್‌ಗೆ ಸಹಕಾರಿಯಾಗುತ್ತಿದ್ದಂತೆ (ಫ್ಲಾಟ್ ಆದಾಗ) ಅನನುಭವಿ ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡಿದರು (ನ್ಯೂಜಿಲೆಂಡ್ 243/5 ಗಳಿಸಿತು). ಇಲ್ಲಿ ಸಿರಾಜ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಬಾಲ್ ಹಳೆಯದಾದಾಗ ಮತ್ತು ಪಿಚ್ ಫ್ಲಾಟ್ ಆದಾಗ ತಮ್ಮ ವಿಶೇಷ 'ವೊಬಲ್ ಸೀಮ್' ಎಸೆತಗಳ ಮೂಲಕ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಕಲೆ ಸಿರಾಜ್‌ಗೆ ಕರಗತವಾಗಿದೆ.

ಗಾಳಿಯ ನಿಯಂತ್ರಣ!

ನ್ಯೂಜಿಲೆಂಡ್‌ನಲ್ಲಿ ಬೀಸುವ ಬಲವಾದ ಗಾಳಿಯನ್ನು ಬಳಸಿಕೊಂಡು ಚೆಂಡನ್ನು ಎರಡೂ ಬದಿಗೆ ಸ್ವಿಂಗ್ ಮಾಡುವ ಸಾಮರ್ಥ್ಯ ಅವರಿಗಿದೆ. ಬುಮ್ರಾ ಮೇಲಿನ ಒತ್ತಡ ಕಡಿಮೆ ಮಾಡಲು, ಮತ್ತೊಂದು ತುದಿಯಿಂದ 140+ ವೇಗದಲ್ಲಿ ನಿರಂತರವಾಗಿ ದಾಳಿ ಮಾಡುವ ಮತ್ತು ದೀರ್ಘ ಸ್ಪೆಲ್ (Long Spells) ಬೌಲಿಂಗ್ ಮಾಡುವ 'ವರ್ಕ್‌ಹಾರ್ಸ್' (Workhorse) ಸಿರಾಜ್. SENA ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ಸಿರಾಜ್ ದಾಖಲೆ ಅದ್ಭುತವಾಗಿದೆ. ಪ್ರಸ್ತುತ WTC ಆವೃತ್ತಿಯಲ್ಲೂ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಅವರಾಗಿದ್ದಾರೆ.

ಮತ್ತೆ ಬರುತ್ತಾರೆ 'ಮಿಯಾ'!

ಆಯ್ಕೆಗಾರರು ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿರಬಹುದು, ಆದರೆ ಅವರೊಳಗಿನ ದೇಶಪ್ರೇಮದ ಕಿಚ್ಚನ್ನು ಆರಿಸಲು ಸಾಧ್ಯವಿಲ್ಲ. ತಂದೆ ಹೇಳಿದಂತೆ 'ಭಾರತದ ಹೆಸರು ಬೆಳಗಿಸಲು' ಸಿರಾಜ್ ಮತ್ತೆ ಫೀನಿಕ್ಸ್‌ನಂತೆ ಎದ್ದು ಬರುತ್ತಾರೆ. ಕಿವೀಸ್ ನಾಡಿನಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದರೆ 'ಮಿಯಾ ಮ್ಯಾಜಿಕ್' ಬೇಕೇ ಬೇಕು.