ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ 15ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 23 ವಿಕೆಟ್ ಪಡೆದ ಸಾಧನೆಗಾಗಿ 12 ಸ್ಥಾನ ಗಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಟಾಪ್ 10ರಲ್ಲಿರುವ ಏಕೈಕ ಭಾರತೀಯ ಬೌಲರ್.

ದುಬೈ: ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಭರ್ಜರಿ ಜಿಗಿತ ಕಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಈಗ 15ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ 12 ಸ್ಥಾನಗಳನ್ನು ಗಳಿಸುವ ಮೂಲಕ ಸಿರಾಜ್ ಟಾಪ್ 15ರಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್‌ಗಳಲ್ಲಿ 23 ವಿಕೆಟ್‌ಗಳನ್ನು ಸಿರಾಜ್ ಪಡೆದಿದ್ದಾರೆ. ಎರಡು ಬಾರಿ ಐದು ವಿಕೆಟ್‌ಗಳನ್ನು ಪಡೆದ ಸಿರಾಜ್ ಒಮ್ಮೆ ನಾಲ್ಕು ವಿಕೆಟ್‌ಗಳನ್ನೂ ಪಡೆದಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನ್ನುವ ಕೀರ್ತಿಗೆ ಮೊಹಮ್ಮದ್ ಸಿರಾಜ್ ಪಾತ್ರರಾಗಿದ್ದಾರೆ.

ಮೊದಲ ಸ್ಥಾನದಲ್ಲಿರುವ ಜಸ್ಪ್ರೀತ್ ಬುಮ್ರಾ ಟಾಪ್ 10 ಬೌಲರ್‌ಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಬೌಲರ್. ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್‌ಗಳಲ್ಲಿ 14 ವಿಕೆಟ್‌ಗಳನ್ನು ಬುಮ್ರಾ ಪಡೆದಿದ್ದರು. ಎರಡು ಸ್ಥಾನ ಕಳೆದುಕೊಂಡ ರವೀಂದ್ರ ಜಡೇಜಾ 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಮೂರು ಸ್ಥಾನ ಗಳಿಸಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ ಐದನೇ ಸ್ಥಾನದಲ್ಲಿದ್ದಾರೆ.

ನೂಮಾನ್ ಅಲಿ (ಪಾಕಿಸ್ತಾನ), ಸ್ಕಾಟ್ ಬೋಲ್ಯಾಂಡ್ (ಆಸ್ಟ್ರೇಲಿಯಾ), ನೇಥನ್ ಲಯಾನ್ (ಆಸ್ಟ್ರೇಲಿಯಾ), ಮಾರ್ಕೊ ಯಾನ್ಸೆನ್ (ದಕ್ಷಿಣ ಆಫ್ರಿಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಗಸ್ ಅಟ್ಕಿನ್ಸನ್ (ಇಂಗ್ಲೆಂಡ್) ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಳು ವಿಕೆಟ್‌ಗಳನ್ನು ಪಡೆದ ಜಡೇಜಾ ಬ್ಯಾಟಿಂಗ್‌ನಲ್ಲಿ 516 ರನ್‌ಗಳನ್ನು ಗಳಿಸಿದ್ದರು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೂರನೇ ಸ್ಥಾನದಲ್ಲಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟಾಪ್ 5ರಲ್ಲಿ ಮರಳಿದ್ದಾರೆ. ಮೂರು ಸ್ಥಾನ ಜಿಗಿತ ಕಂಡಿರುವ ಯಶಸ್ವಿ ಜೈಸ್ವಾಲ್ ಐದನೇ ಸ್ಥಾನದಲ್ಲಿದ್ದಾರೆ. ಓವಲ್ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದು ಜೈಸ್ವಾಲ್‌ಗೆ ಮುನ್ನಡೆಯಲು ಸಹಾಯ ಮಾಡಿತು. ಓವಲ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 118 ರನ್ ಗಳಿಸಿದರು. ಲಾರ್ಡ್ಸ್ ಮತ್ತು ಮ್ಯಾಂಚೆಸ್ಟರ್‌ನಲ್ಲಿ ಕಳಪೆ ಪ್ರದರ್ಶನದಿಂದಾಗಿ ಜೈಸ್ವಾಲ್ ಎಂಟನೇ ಸ್ಥಾನಕ್ಕೆ ತಳ್ಳಲಾಗಿತ್ತು.

ಐದು ಪಂದ್ಯಗಳ ಸರಣಿಯಲ್ಲಿ (10 ಇನ್ನಿಂಗ್ಸ್‌ಗಳು) 41.10 ಸರಾಸರಿಯಲ್ಲಿ ಯಶಸ್ವಿ ಜೈಸ್ವಾಲ್ 411 ರನ್ ಗಳಿಸಿದ್ದಾರೆ. ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳು ಇದರಲ್ಲಿ ಸೇರಿವೆ. ಆದರೆ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶುಭಮನ್ ಗಿಲ್‌ಗೆ ಹಿನ್ನಡೆಯಾಗಿದೆ. ಟೆಸ್ಟ್ ನಾಯಕ ಶುಭಮನ್ ಗಿಲ್ ನಾಲ್ಕು ಸ್ಥಾನ ಕಳೆದುಕೊಂಡು ಟಾಪ್ 10ರ ಹೊರಗೆ ಬಿದ್ದಿದ್ದಾರೆ. ಈಗ 13ನೇ ಸ್ಥಾನದಲ್ಲಿದ್ದಾರೆ. ಓವಲ್ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ಗಿಲ್‌ರನ್ನು ಟಾಪ್ 10ರಿಂದ ಹೊರಗಿಟ್ಟಿದೆ. ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 21, 11 ರನ್ ಗಳಿಸಿದ್ದಾರೆ.

ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್, ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದು ದ್ವಿಶತಕ ಸೇರಿದಂತೆ 4 ಶತಕ ಸಹಿತ 75.40 ಬ್ಯಾಟಿಂಗ್ ಸರಾಸರಿಯಲ್ಲಿ 754 ರನ್ ಸಿಡಿಸಿದ್ದರು. ಈ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.