ಇಂಗ್ಲೆಂಡ್ ಟೆಸ್ಟ್ ಸರಣಿ ಮೂಲಕ 5 ಸ್ಪಷ್ಟ ಸಂದೇಶ ರವಾನಿಸಿದ ಶುಭ್‌ಮನ್ ಗಿಲ್ ಪಡೆ!
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು 2-2ರ ಸಮಬಲದೊಂದಿಗೆ ಕೊನೆಗೊಂಡಿದೆ. ಹಲವು ಸ್ಟಾರ್ ಆಟಗಾರರಿಲ್ಲದೇ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಯುವ ಆಟಗಾರರನ್ನೊಳಗೊಂಡ ಭಾರತ, ದಿಟ್ಟ ಹೋರಾಟ ತೋರುವ ಮೂಲಕ ಕೆಲವೊಂದು ಸ್ಪಷ್ಟ ಸಂದೇಶ ರವಾನಿಸಿದೆ.
1. ಸ್ಟಾರ್‌ಗಳಿಲ್ಲದೆ ಗೆಲುವು ಸಾಧ್ಯ:
ಭಾರತ ತಂಡದಲ್ಲಿ ವಿರಾಟ್, ರೋಹಿತ್, ಅಶ್ವಿನ್‌ರಂತಹ ಸ್ಟಾರ್ ಗಳಿರಲಿಲ್ಲ. ಹಿರಿಯ ಆಟಗಾರರು ಸೀಮಿತ ಸಂಖ್ಯೆಯಲ್ಲಿದ್ದರು. ಆದರೆ ಯುವ, ಪ್ರತಿಭಾವಂತ ಆಟಗಾರರೇ ತಂಡವನ್ನು ಯಶಸ್ಸಿ ಕಡೆಗೆ ಕೊಂಡೊಯ್ದರು.
2. ತಂಡವಾಗಿ ಆಡಿದ್ರೆ ವಿದೇಶದಲ್ಲೂ ಜಯ:
ಭಾರತ ತಂಡದ ದೊಡ್ಡ ಸಮಸ್ಯೆ ಏನೆಂದರೆ ಒಂದಿಬ್ಬರನ್ನು ನೆಚ್ಚಿಕೊಂಡು ಆಡುವುದು. ಈ ಬಾರಿ ಹಾಗಾಗಲಿಲ್ಲ. ತಂಡದ ಎಲ್ಲಾ ಆಟಗಾರರು ತಮ್ಮ ಜವಾಬ್ದಾರಿ ಅರಿತು ಆಡಿದರೆ ವಿದೇಶದಲ್ಲೂ ಗೆಲ್ಲಬಹುದು ಎಂಬ ಸಂದೇಶ ರವಾನೆಯಾಯಿತು.
3. ದೇಶ ಮೊದಲು, ಬೇರೆಲ್ಲಾ ಆಮೇಲೆ:
ಆಟಗಾರರು ಸರಣಿಯುದ್ದಕ್ಕೂ ಕೆಚ್ಚೆದೆಯ ಆಟವಾಡಿದರು. ಗಾಯ, ಫಿಟ್ಟೆಸ್, ಕಾರ್ಯದೊತ್ತಡ ಲೆಕ್ಕಿಸಲಿಲ್ಲ. ರಿಷಭ್, ವೋಕ್ಸ್ ಗಾಯದ ನಡುವೆ ಆಡಿದರು. ಸಿರಾಜ್, ಸ್ಟೋಕ್ಸ್ ದಣಿವರಿಯದೆ ನಿರಂತರ ಬೌಲ್ ಮಾಡಿ ಹೀರೋಗಳಾದರು.
4.ಭಾರತದ ಕ್ರಿಕೆಟ್ ಭವಿಷ್ಯ ಉಜ್ವಲ:
ಕೊಹ್ಲಿ, ರೋಹಿತ್ ಟೆಸ್ಟ್ ನಿಂದ ನಿವೃತ್ತಿಯಾದಾಗ ಭಾರತದ ಭವಿಷ್ಯವೇನು ಎಂದು ಹಲವರು ಚಿಂತಿಸಿದ್ದರು. ಆದರೆ ಯುವ ಆಟಗಾರರು ಭಾರತದ ಕೈಬಿಡಲಿಲ್ಲ. ಪ್ರಬುದ್ಧರಂತೆ ಆಡಿ, ತಂಡದ ಭವಿಷ್ಯ ಉಜ್ವಲವಾಗಿದೆ ಎಂದು ತೋರಿಸಿಕೊಟ್ಟರು.
5. ಕಡಿಮೆಯಾಗದ ಟೆಸ್ಟ್‌ನ ವೈಭವ:
ಟಿ20 ಲೀಗ್‌ಗಳ ಭರಾಟೆ ನಡುವೆ ಟೆಸ್‌ನ ಮೌಲ್ಯ ಕುಸಿಯುತ್ತಿದೆ ಎಂಬ ಮಾತಿದೆ. ಆದರೆ ಈ ಸರಣಿ ಅದಿಕ್ಕೆ ತದ್ವಿರುದ್ದವಾಗಿತ್ತು. ಸರಣಿಯ ಒಂದೊಂದು, ರನ್, ವಿಕೆಟ್ ಕೂಡಾ ಟೆಸ್ಟ್ ಕ್ರಿಕೆಟ್‌ನ ಕಿಚ್ಚು ಆರಿಲ್ಲ ಎಂದು ಸಾಬೀತುಪಡಿಸಿತು.
ಸತತ ಸೋಲಿನ ಮುಖಭಂಗ ಮರೆಸಿದ ಟೆಸ್ ಸರಣಿ ಸಮಬಲ
ಭಾರತ ತಂಡ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ಕ್ಲೀನ್‌ಸ್ವೀಪ್ ಮುಖಭಂಗಕ್ಕೊಳ ಗಾಗಿತ್ತು. ಬಳಿಕ ಆಸ್ಟ್ರೇಲಿಯಾ ಸರಣಿಯಲ್ಲೂ ಹೀನಾಯ ಸೋಲು ತಂಡವನ್ನು ಕುಗ್ಗಿಸಿತ್ತು. ಇದರ ನಡುವೆ ಇಂಗ್ಲೆಂಡ್ ವಿರುದ್ಧ ಸರಣಿಯ ಡ್ರಾ ಭಾರತದ ಆತ್ಮವಿಶ್ವಾಸವನ್ನು ಮರಳಿಸಿದೆ. ಆದರೆ ತಂಡ ಇಷ್ಟಕ್ಕೆ ತೃಪ್ತಿಪಡುವಂತಿಲ್ಲ. ಇದು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಸರಣಿಯಾಗಿದ್ದು, ಇನ್ನೆರಡು ವರ್ಷ ಮತ್ತಷ್ಟು ಕಠಿಣವಾದ ಸರಣಿಗಳು ಎದುರಾಗಲಿದೆ. ಅದರಲ್ಲಿ ಅಭೂತಪೂರ್ವ ಪ್ರದರ್ಶನ ನೀಡುವುದರತ್ತ ಗಮನ ಹರಿಸಬೇಕಿದೆ.