ಇಂಗ್ಲೆಂಡ್ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಭಾರತ ಏಕದಿನ ತಂಡಕ್ಕೂ ಶುಭ್‌ಮನ್ ಗಿಲ್ ಕ್ಯಾಪ್ಟನ್?
ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ, ಶುಭ್‌ಮನ್ ಗಿಲ್ ಇದೀಗ ಭಾರತ ಏಕದಿನ ತಂಡದ ನಾಯಕರಾಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಇಂಗ್ಲೆಂಡ್ ವಿರುದ್ಧದ ೫ ಪಂದ್ಯಗಳ ಸರಣಿಯನ್ನು ಭಾರತ ೨-೨ ಅಂತರದಲ್ಲಿ ಸಮಬಲಗೊಳಿಸಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಶ್ವಿನ್ ಇಲ್ಲದ ಯುವ ತಂಡ ಇಂಗ್ಲೆಂಡಿಗೆ ತೆರಳಿತ್ತು. ಹೀಗಾಗಿ ಇಂಗ್ಲೆಂಡ್ ೪-೧ ಅಥವಾ ೩-೧ ಅಂತರದಲ್ಲಿ ಗೆಲ್ಲುತ್ತದೆ ಎಂದು ಹಿರಿಯ ಆಟಗಾರರು ಭವಿಷ್ಯ ನುಡಿದಿದ್ದರು. ಆದರೆ ಈ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಯುವ ಆಟಗಾರರು ಸರಣಿಯನ್ನು ಸಮಬಲಗೊಳಿಸಿದರು.
ಇಂಗ್ಲೆಂಡ್ ಪ್ರವಾಸದಲ್ಲಿ ನಾಯಕ ಶುಭ್‌ಮನ್ ಗಿಲ್ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲದೆ ನಾಯಕತ್ವದಲ್ಲೂ ಮಿಂಚಿದರು. ಫೀಲ್ಡಿಂಗ್ ರಣತಂತ್ರ ರೂಪಿಸುವುದು, ಬೌಲರ್ ಗಳನ್ನು ಬದಲಾಯಿಸುವುದು, ಬೌಲರ್ ಗಳ ಜೊತೆ ಚರ್ಚಿಸಿ ಎದುರಾಳಿ ಬ್ಯಾಟರ್‌ಗಳನ್ನು ಔಟ್ ಮಾಡುವುದು ಹೀಗೆ ಗಿಲ್ ಅದ್ಭುತವಾಗಿ ಕಾರ್ಯನಿರ್ವಹಿಸಿದರು. ಮೊದಲ ಸರಣಿಯಲ್ಲೇ ಗಿಲ್ ಮಿಂಚಿದ್ದರಿಂದ ಅವರನ್ನು ಏಕದಿನ ನಾಯಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿಯಲ್ಲಿ ಸೋತಿತ್ತು. ಹೀಗಾಗಿ ಅವರನ್ನು ನಾಯಕತ್ವದಿಂದ ಕೈಬಿಡಲಾಗಿತ್ತು. ಬಿಸಿಸಿಐ ಒತ್ತಡದಿಂದಾಗಿ ಟೆಸ್ಟ್ ಕ್ರಿಕೆಟ್ ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ರೋಹಿತ್ ಗೆ ವಯಸ್ಸಾಗುತ್ತಿರುವುದರಿಂದ ಇನ್ನು ಕೆಲವೇ ವರ್ಷ ಆಡಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಗಿಲ್ ಗೆ ಏಕದಿನ ನಾಯಕತ್ವ ನೀಡಲು ಬಿಸಿಸಿಐ ಚಿಂತಿಸಿದೆ. ಗಿಲ್ ಯುವ ಆಟಗಾರ, ಉತ್ತಮ ಬ್ಯಾಟ್ಸ್ ಮನ್ ಆಗಿರುವುದರಿಂದ ದೀರ್ಘಕಾಲ ನಾಯಕರಾಗಿ ಮುಂದುವರಿಯಬಹುದು ಎಂದು ಬಿಸಿಸಿಐ ಭಾವಿಸಿದೆ.
ಬಿಸಿಸಿಐ ಇದನ್ನು ಅಧಿಕೃತವಾಗಿ ಘೋಷಿಸಿದರೆ ಟೆಸ್ಟ್ ಕ್ರಿಕೆಟ್ ನಂತೆ ಏಕದಿನ ಕ್ರಿಕೆಟ್ ನಿಂದಲೂ ರೋಹಿತ್ ಶರ್ಮಾ ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು ಎನ್ನಲಾಗಿದೆ. ಗಿಲ್ ಏಕದಿನ ನಾಯಕರಾಗಬೇಕು ಎಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಕೈಫ್, ರೋಹಿತ್ ನಾಯಕತ್ವ ಎಷ್ಟು ದಿನ ಮುಂದುವರಿಯುತ್ತದೆ ಎಂದು ಗೊತ್ತಿಲ್ಲ. ಆದರೆ ಗಿಲ್ ಏಕದಿನ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಗಿಲ್ ಉತ್ತಮ ರನ್ ಗಳಿಸಿದ್ದಾರೆ. ನಾಯಕತ್ವದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದಿದ್ದಾರೆ.
ಯುವ ಆಟಗಾರರ ತಂಡದ ಜೊತೆ ಸರಣಿಗೆ ತೆರಳಿದಾಗ ಬ್ಯಾಟಿಂಗ್ ನಲ್ಲೂ ಉತ್ತಮವಾಗಿ ಆಡಿ, ನಾಯಕತ್ವದಲ್ಲೂ ಯಶಸ್ವಿಯಾಗಬೇಕು. ಗಿಲ್ ಇಂಗ್ಲೆಂಡ್ ಸರಣಿಯಲ್ಲಿ ಎರಡನ್ನೂ ಯಶಸ್ವಿಯಾಗಿ ಮಾಡಿದ್ದಾರೆ. ಹೀಗಾಗಿ ಏಕದಿನ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಿದ್ದಾರೆ ಎಂದಿದ್ದಾರೆ.