ತೇಜ್‌ಪುರ(ನ.06): ಟೀಂ ಇಂಡಿಯಾ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೆ ಹೆಮ್ಮೆ. ಈ ಸಾಧನೆ ಮುರಿಯಲು ಇಲ್ಲೀವರೆಗೂ ಸಾಧ್ಯವಾಗಿಲ್ಲ. ಇದೀಗ ಅಂಡರ್ 16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ 15 ವರ್ಷದ ಮೆಘಾಲಯ ತಂಡದ ಸ್ಪಿನ್ನರ್ 10 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾನೆ.

ಇದನ್ನೂ ಓದಿ: ಅನಿಲ್ ಕುಂಬ್ಳೆ ಬಗೆಗಿನ ಕುತೂಹಲಕಾರಿ ಸಂಗತಿಗಳಿವು

ನಾಗಾಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್ ನಿರ್ದೇಶ್ ಬೈಸೋಯಾ 10 ವಿಕೆಟ್ ಕಬಳಿಸಿದ್ದಾರೆ. 51 ರನ್ ನೀಡಿ 10 ವಿಕೆಟ್ ಕಬಳಿಸಿದ ನಿರ್ದೇಶ್, ನಾಗಾಲ್ಯಾಂಡ್ ತಂಡವನ್ನು 113 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ: IPL 2020; ಡೆಲ್ಲಿ ತಂಡಕ್ಕೆ ಹಾರಿದ ಅಶ್ವಿನ್, ಅಧಿಕೃತ ಘೋಷಣೆ ಮಾತ್ರ ಬಾಕಿ!

ನಿರ್ದೇಶ ಮೂಲ ಉತ್ತರ ಪ್ರದೇಶದ ಮೀರತ್. ವಿಶೇಷ ಅಂದರೆ ಟೀಂ ಇಂಡಿಯಾದ ಭುವನೇಶ್ವರ್ ಕುಮಾರ್ ಹಾಗೂ ಪ್ರವೀಣ್ ಕುಮಾರ್‌ ಬಾಲ್ಯದ ಕೋಚ್ ಸಂಜಯ್ ರಸ್ತೋಗಿಯೇ ನಿರ್ದೇಶ್ ಬೈಸೋಯಾಗೂ ಕೋಚ್. ಕಳೆದೆರಡು ವರ್ಷದ ಹಿಂದೆ ಬೈಸೋಯಾ ಮೀರತ್‌ನಿಂದ ಮೇಘಾಲಯ ತಂಡ ಸೇರಿಕೊಂಡಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಅನಿಲ್ ಕುಂಬ್ಳೆ ಹಾಗೂ ಇಂಗ್ಲೆಂಡ್‌ನ ಜಿಮ್ ಲಾಕರ್ ಇನಿಂಗ್ಸ್ ಒಂದರಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಇನ್ನು ಭಾರತದ ದೇಸಿ ಕ್ರಿಕೆಟ್‌ನಲ್ಲಿ ದೇಬಶಿಶ್ ಮೊಹಾಂತಿ, ಸುಭಾಷ್ ಗುಪ್ತೆ, ಪ್ರದೀಪ್ ಸುಂದರಾಮ್, ಪಿಎಂ ಚಟರ್ಜಿ 10 ವಿಕೆಟ್ ಕಬಳಿಸಿದ್ದಾರೆ. ಕಳೆದ ವರ್ಷ(2018) ಅಂಡರ್ 19 ಕೂಚ್ ಬೆಹಾರ್ ಟ್ರೋಫಿಯಲ್ಲಿ ರೆಕ್ಸ್ ಸಿಂಗ್ 10 ವಿಕೆಟ್ ಕಬಳಿಸಿದ್ದರು.