ನವದೆಹಲಿ(ನ.06): 2020ನೇ ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ಬೆನ್ನಲ್ಲೇ ಫ್ರಾಂಚೈಸಿಗಳು ಹರಾಜಿಗೆ ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ಕೆಲ ಆಟಗಾರರು ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹಾರುತ್ತಿದ್ದಾರೆ. 2019ರ ಐಪಿಎಲ್ ಟೂರ್ನಿ ಬಳಿಕವೇ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್, ದೆಹಲಿ ತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಇದೀಗ ಅಶ್ವಿನ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಳ್ಳುವುದು ಬಹುತೇಕ ಖಚಿತಗೊಂಡಿದೆ.

ಇದನ್ನೂ ಓದಿ: ಹರಿಣಗಳ ವಿರುದ್ಧ ಸ್ಪಿನ್ ಮೋಡಿ; ಕುಂಬ್ಳೆ ಸಾಲಿಗೆ ಸೇರಿದ ಅಶ್ವಿನ್!

ಟ್ರೇಡ್ ಮೂಲಕ ಆರ್ ಅಶ್ವಿನ್ ಈಗಾಗಲೇ ದೆಹಲಿ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಮೂಲಗಳು ಹೇಳಿವೆ. ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ಮಾಲೀಕ ನೆಸ್ ವಾಡಿಯಾ, ಅಶ್ವಿನ್ ಯಾವ ತಂಡಕ್ಕೂ ಹೋಗುತ್ತಿಲ್ಲ. ಪಂಜಾಬ್ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಅಶ್ವಿನ್ ಸದ್ದಿಲ್ಲದೇ ದೆಹಲಿ ತಂಡ ಸೇರಿಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಅಶ್ವಿನ್, ಜಡೇಜಾಗೆ ಮೊದಲ ಆದ್ಯತೆ; ವರಸೆ ಬದಲಿಸಿದ ಕೊಹ್ಲಿ!

ಆರ್ ಅಶ್ವಿನ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಒಪ್ಪಂದ ಪ್ರಕ್ರಿಯೆ ಮುಗಿದಿದೆ. ಇನ್ನು ಅಧಿಕೃತ ಘೋಷಣೆಯೊಂದೇ ಬಾಕಿ ಎಂದು  ಕ್ಯಾಪಿಟಲ್ಸ್ ಟೀಂ ಮ್ಯಾನೇಜ್ಮೆಂಟ್ ಹೇಳಿದೆ. ಆರ್ ಅಶ್ವಿನ್ ಬದಲು ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೋಲ್ಟ್ ಹಾಗೂ ಕರ್ನಾಟಕ ಸ್ಪಿನ್ನರ್ ಜೆ ಸುಚಿತ್‌ರನ್ನು ಪಂಜಾಬ್ ತಂಡಕ್ಕೆ ಬಿಟ್ಟುಕೊಟ್ಟಿದೆ.

ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್, ದೆಹಲಿ ತಂಡ ಸೇರಿಕೊಳ್ಳುವ ಕಾರಣ, ಕನ್ನಡಿಗ ಕೆಎಲ್ ರಾಹುಲ್, ಪಂಜಾಬ್ ತಂಡದ ನಾಯಕನಾಗಿ ಬಡ್ತಿ ಪಡೆಯುವ ಸಾಧ್ಯತೆ ಇದೆ.