ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಜೆರ್ಸಿ ಧರಿಸಿದ್ದ ಅಭಿಮಾನಿಯೊಬ್ಬರನ್ನು ರಕ್ಷಣಾ ಸಿಬ್ಬಂದಿಗಳು ಜೆರ್ಸಿ ಬದಲಿಸಲು ಸೂಚಿಸಿದ ಘಟನೆ ಸಂಚಲನ ಮೂಡಿಸಿದೆ. ಈ ಘಟನೆಯ ವಿವರ ಇಲ್ಲಿದೆ.
ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಿತು. ಕೊನೆಯ ದಿನದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಈ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಯಾಯಿತು. 311 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡಾಗ ಭಾರತಕ್ಕೆ ಇನ್ನಿಂಗ್ಸ್ ಸೋಲು ಎದುರಾಗಲಿದೆ ಎಂದೇ ಎಲ್ಲರು ಲೆಕ್ಕಾಚಾರ ಹಾಕಿದ್ದರು. ಆದರೆ ಆ ಬಳಿಕ ಭಾರತೀಯ ಬ್ಯಾಟರ್‌ಗಳು ದಿಟ್ಟ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾವನ್ನು ಸೋಲಿನನಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಇನ್ನು ಇದೇ ಟೆಸ್ಟ್ ಪಂದ್ಯದ ವೇಳೆಯ ಕೊನೆಯ ದಿನದಾಟದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಓರ್ವ ಕ್ರಿಕೆಟ್ ಅಭಿಮಾನಿ ಪಾಕಿಸ್ತಾನ ಜೆರ್ಸಿ ತೊಟ್ಟು ಕಾಣಿಸಿಕೊಂಡಿದ್ದರು. ಇದು ಸಾಕಷ್ಟು ಸಂಚಲವನ್ನು ಮೂಡಿಸಿತ್ತು. ಈ ಘಟನೆಯಲ್ಲಿ ಏನೇನು ಆಯ್ತು ಎನ್ನುವುದನ್ನು ನೋಡೋಣ ಬನ್ನಿ.
ಹೌದು, ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್‌ನ ಕೊನೆಯ ದಿನದ ಮೇಲೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿತ್ತು. ಈ ಮ್ಯಾಚ್ ನೋಡಲು ಪಾಕಿಸ್ತಾನದ ಅಭಿಮಾನಿಯೂ ಪಾಕ್ ತಂಡದ ಜೆರ್ಸಿ ತೊಟ್ಟು ಸ್ಟೇಡಿಯಂಗೆ ಆಗಮಿಸಿದ್ದ. ಈ ಸಂದರ್ಭದಲ್ಲಿ ಮ್ಯಾಚ್ ನೋಡುತ್ತಿದ್ದ ಪಾಕ್ ಅಭಿಮಾನಿಯನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ಅಧಿಕಾರಿಗಳು ಆತ ಇರುವಲ್ಲಿಗೆ ಬಂದು ಜೆರ್ಸಿ ಬದಲಿಸಲು ಸೂಚಿಸುತ್ತಾರೆ. ಆಗ ಆ ಪಾಕ್ ಫ್ಯಾನ್ ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಾನೆ, ಜತೆಗೆ ನಾನು ಯಾಕೆ ಜೆರ್ಸಿ ಬದಲಿಸಬೇಕು ಎನ್ನುವುದನ್ನು ಲಿಖಿತರೂಪದಲ್ಲಿ ಬರೆದು ಕೊಡಿ ಆಗ ಮಾತ್ರ ಬದಲಿಸುತ್ತೇನೆ. ಎಲ್ಲ ದೇಶಗಳಂತೆ ನಾನು ನನ್ನ ದೇಶದ ಜೆರ್ಸಿ ತೊಟ್ಟು ಬಂದು ಮ್ಯಾಚ್ ನೋಡುತ್ತಿದ್ದೇನೆ ಎಂದು ಹೇಳುತ್ತಾನೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮ್ಯಾಂಚೆಸ್ಟರ್ ಟೆಸ್ಟ್ ಡ್ರಾನಲ್ಲಿ ಅಂತ್ಯ:
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ, ಬೆನ್ ಸ್ಟೋಕ್ಸ್ ಮಾರಕ ದಾಳಿಗೆ ತತ್ತರಿಸಿ ಕೇವಲ 358 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಜೋ ರೂಟ್(150) ಹಾಗೂ ಬೆನ್ ಸ್ಟೋಕ್ಸ್(141) ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ 669 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು.
ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಮೊದಲ ಓವರ್‌ನಲ್ಲೇ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಯಿ ಹೋಯಿತು. ಕ್ರಿಸ್ ವೋಕ್ಸ್ ಇಂಗ್ಲೆಂಡ್‌ಗೆ ಉತ್ತಮ ಆರಂಭ ಒದಗಿಸಿಕೊಟ್ಟರು. ಭಾರತ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಳೆದುಕೊಂಡಾಗ ಶುಭ್‌ಮನ್ ಗಿಲ್ ಪಡೆ ಇನ್ನಿಂಗ್ಸ್ ಸೋಲು ಅನುಭವಿಸಲಿದೆ ಎಂದೇ ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದರು. ಆದರೆ ಮೂರನೇ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ಶುಭ್‌ಮನ್ ಗಿಲ್ ಬರೋಬ್ಬರಿ 188 ರನ್‌ಗಳ ಜತೆಯಾಟವಾಡುವ ಮೂಲಕ ಭಾರತ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಕೆ ಎಲ್ ರಾಹುಲ್ 90 ರನ್ ಗಳಿಸಿ ಶತಕದ ಹೊಸ್ತಿಲಲ್ಲಿ ಎಡವಿದರೆ, ಶುಭ್‌ಮನ್ ಗಿಲ್ 103 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ 5ನೇ ವಿಕೆಟ್‌ಗೆ ಜತೆಯಾದ ಆಲ್ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್(101) ಹಾಗೂ ರವೀಂದ್ರ ಜಡೇಜಾ(107) ಅಜೇಯ ಶತಕ ಸಿಡಿಸುವ ಮೂಲಕ ಭಾರತವನ್ನು ಸೋಲಿನಿಂದ ಕಾಪಾಡುವಲ್ಲಿ ಯಶಸ್ವಿಯಾದರು.


