ಆಂಡರ್ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಸಜ್ಜಾಗಿದೆ. ವೇಗದ ಬೌಲಿಂಗ್ ಆಲ್ರೌಂಡರ್ ಜೇಮಿ ಓವರ್‌ಟನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮ್ಯಾಂಚೆಸ್ಟರ್ ಟೆಸ್ಟ್ ಡ್ರಾ ಆದ ಬಳಿಕ ಇಂಗ್ಲೆಂಡ್ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಂಡಿದೆ.

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್‌ಸನ್-ತೆಂಡುಲ್ಕರ್ ಟೆಸ್ಟ್ ಸರಣಿಯು ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಇದೀಗ ಕೊನೆಯ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ 4 ಟೆಸ್ಟ್ ಪಂದ್ಯಗಳು ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ ತಂಡವು ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ಇದೀಗ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವು ಡ್ರಾಗೊಂಡ ಬೆನ್ನಲ್ಲೇ ಕೊನೆಯ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ವೇಗದ ಬೌಲಿಂಗ್ ಆಲ್ರೌಂಡರ್ ಜೇಮಿ ಓವರ್‌ಟನ್ ತಂಡ ಕೂಡಿಕೊಂಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಕೊನೆಯ ಹಾಗೂ ಐದನೇ ಟೆಸ್ಟ್ ಪಂದ್ಯವು ಜುಲೈ 31ರಿಂದ ಲಂಡನ್‌ನ ದಿ ಓವಲ್ ಮೈದಾನದಲ್ಲಿ ಆರಂಭವಾಗಲಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳು 143 ಓವರ್ ಬೌಲಿಂಗ್ ಮಾಡಿದರೂ, ಭಾರತದ ನಾಲ್ಕು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ರೆ ಮೂಲದ ವೇಗಿ ಜೇಮಿ ಓವರ್‌ಟನ್‌ಗೆ ಇಂಗ್ಲೆಂಡ್ ತಂಡದಲ್ಲಿ ಮಣೆ ಹಾಕಲಾಗಿದೆ.

Scroll to load tweet…

ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 311 ರನ್‌ಗಳ ಭಾರೀ ಮುನ್ನಡೆ ಗಳಿಸಿತ್ತು. ಇದರ ಜತೆಗೆ ಮೊದಲ ಓವರ್‌ನಲ್ಲೇ ಭಾರತದ ಎರಡು ಪ್ರಮುಖ ವಿಕೆಟ್ ಕಬಳಿಸುವಲ್ಲಿ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಯಶಸ್ವಿಯಾಗಿದ್ದರು. ಹೀಗಿದ್ದರೂ ನಾಲ್ಕನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿತ್ತು. ಭಾರತ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಆಕರ್ಷಕ ಶತಕ ಸಿಡಿಸುವ ಮೂಲಕ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.

ನಾಲ್ಕನೇ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ಮಾತನಾಡಿದ್ದ ಬೆನ್ ಸ್ಟೋಕ್ಸ್, ತಮ್ಮ ತಂಡಕ್ಕೆ ಫ್ರೆಶ್ ವೇಗಿಯ ಅಗತ್ಯವಿದೆ ಎಂದು ಹೇಳುವ ಮೂಲಕ ಕೊನೆಯ ಟೆಸ್ಟ್‌ನಲ್ಲಿ ಬದಲಾವಣೆಯ ಸುಳಿವು ನೀಡಿದ್ದರು. ಭಾರತ ಎದುರಿನ ಟೆಸ್ಟ್ ಸರಣಿ ಮೊದಲ ನಾಲ್ಕು ಪಂದ್ಯಗಳಲ್ಲೂ ಕ್ರಿಸ್ ವೋಕ್ಸ್ ಹಾಗೂ ಬ್ರೈಡನ್ ಕಾರ್ಸ್ ಸ್ಥಾನ ಪಡೆದಿದ್ದರು. ಇನ್ನು 4 ವರ್ಷಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡ ಕೂಡಿಕೊಂಡಿರುವ ಜೋಫ್ರಾ ಆರ್ಚರ್ ಕೂಡಾ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

2022ರಲ್ಲಿ ನ್ಯೂಜಿಲೆಂಡ್ ಎದುರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜೇಮಿ ಓವರ್‌ಟನ್, ಇಂಗ್ಲೆಂಡ್ ಪರ ಕೇವಲ ಒಂದು ಟೆಸ್ಟ್ ಪಂದ್ಯವನ್ನಷ್ಟೇ ಆಡಿದ್ದಾರೆ. 30 ವರ್ಷದ ವೇಗಿ ಈಗ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿ ಜೋಶ್ ಟಂಗ್, ಗುಸ್ ಅಟ್ಕಿನ್‌ಸನ್ ಅವರನ್ನು ಹಿಂದಿಕ್ಕಿ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಎದುರು ನೋಡುತ್ತಿದ್ದಾರೆ.

ಸದ್ಯ ಇಂಗ್ಲೆಂಡ್ ತಂಡದಲ್ಲಿ ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಜೋಶ್ ಟಂಗ್, ಗುಸ್ ಅಟ್ಕಿನ್‌ಸನ್, ಬ್ರೈಡನ್ ಕಾರ್ಸ್ ಹಾಗೂ ಜೇಮಿ ಓವರ್‌ಟನ್ ಹೀಗೆ ಆರು ವೇಗದ ಬೌಲರ್‌ಗಳಿದ್ದಾರೆ. ಈ ಪೈಕಿ ಯಾರೆಲ್ಲಾ ಕೊನೆಯ ಟೆಸ್ಟ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ ಎದುರಿನ ಐದನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಬೆನ್ ಸ್ಟೋಕ್ಸ್(ನಾಯಕ), ಜೋಫ್ರಾ ಆರ್ಚರ್, ಗುಸ್ ಅಟ್ಕಿನ್‌ಸನ್, ಜೆಕೊಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಜಾಕ್ ಕ್ರಾಲಿ, ಲಿಯಮ್ ಡಾಸನ್, ಬೆನ್ ಡಕೆಟ್, ಜೇಮಿ ಓವರ್‌ಟನ್, ಓಲಿ ಪೋಪ್, ಜೋ ರೂಟ್, ಜೇಮಿ ಸ್ಮಿತ್(ವಿಕೆಟ್ ಕೀಪರ್), ಜೋಶ್ ಟಂಗ್, ಕ್ರಿಸ್ ವೋಕ್ಸ್.