ಐಪಿಎಲ್‌ನಲ್ಲಿ ಹೆಚ್ಚುತ್ತಿರುವ ರೀಲ್ಸ್ ಸಂಸ್ಕೃತಿಯಿಂದ ಹನಿಟ್ರ್ಯಾಪ್ ಮತ್ತು ಭದ್ರತಾ ಅಪಾಯಗಳ ಬಗ್ಗೆ ಬಿಸಿಸಿಐ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಪಂದ್ಯಗಳ ವೇಳೆ ಆಟಗಾರರು ಮತ್ತು ಅವರ ಕುಟುಂಬಸ್ಥರು ರೀಲ್ಸ್ ಅಥವಾ ಯಾವುದೇ ವಿಡಿಯೋ ಮಾಡುವುದನ್ನು ನಿಷೇಧಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನವದೆಹಲಿ: ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಹನಿಟ್ರ್ಯಾಪ್, ಭದ್ರತಾ ಅಪಾಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಬಿಸಿಸಿಐ ಈಗ ಆಟಗಾರರು, ಅವರ ಕುಟುಂಬಸ್ಥರು ಪಂದ್ಯಗಳ ವೇಳೆ ರೀಲ್ಸ್ ಮಾಡುವುದು ಮತ್ತು ಅದನ್ನು ಹಂಚಿಕೊಳ್ಳುವ ಸಂಪ್ರದಾಯದ ವಿರುದ್ಧ ಕಿಡಿಕಾರಿದೆ.

ಈ ಐಪಿಎಲ್‌ನಲ್ಲಿ ವೀಕ್ಷಕ ವಿವರಣೆಗಾರರು, ಆಟಗಾರರು ಪಂದ್ಯಗಳ ವೇಳೆ ರೀಲ್ಸ್ ಮಾಡಿ ಹಂಚಿಕೊಳ್ಳುವ ಘಟನೆಗಳು ವರದಿಯಾಗಿವೆ. ಇತ್ತೀಚೆಗೆ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರೊಬ್ಬರು ಡಗೌಟ್ ಬಳಿ ನಿಂತು ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ವಿಡಿಯೋ ಸೆರೆ ಹಿಡಿಯುತ್ತಿದ್ದಾಗ ಅದನ್ನು ಬಿಸಿಸಿಐ ಅಧಿಕಾರಿಗಳು ತಡೆದಿದ್ದ ಘಟನೆಯೂ ನಡೆದಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ತನ್ನ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದೆ ಎಂದು ವರದಿಯಾಗಿದೆ.
ಹೀಗಾಗಿ ವಿಡಿಯೋ ಮಾಡದಂತೆ ಬಿಸಿಸಿಐ ಎಲ್ಲಾ ಆಟಗಾರರಿಗೆ ಸೂಚನೆ ನೀಡಿದೆ. ‘ರೀಲ್ಸ್ ಸಂಸ್ಕೃತಿ ಐಪಿಎಲ್‌ನಲ್ಲಿ ನಿಯಮಗಳ ಉಲ್ಲಂಘನೆಗೆ ಕಾರಣವಾಗಿದೆ. ಪಂದ್ಯದ ಮೊದಲು, ಪಂದ್ಯದ ವೇಳೆ, ಆ ಬಳಿಕ ತಕ್ಷಣ ವಿಡಿಯೋಗಳನ್ನು ಪೋಸ್ಟ್ ಮಾಡುವ ಕೆಲವು ಆಟಗಾರರಿದ್ದಾರೆ. ಹೀಗಾಗಿ ಆಟಗಾರರು, ಕುಟುಂಬ ಸದಸ್ಯರು ಫೋಟೋ, ವೀಡಿಯೊಗಳನ್ನು ಹಂಚಿಕೊಳ್ಳದಂತೆ ಕೇಳಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಟೀಂ ಇಂಡಿಯಾದ ವಸತಿ ಸೌಲಭ್ಯಗಳ ಕುರಿತು ತಮ್ಮ ಪತ್ನಿ ಮಾಡಿದ್ದ ವಿಡಿಯೋ ಹಂಚಿದ್ದ ಭಾರತ ತಂಡದ ಬೌಲರ್‌ಗೆ ಬಿಸಿಸಿಐ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಗುರುವಾರವಷ್ಟೇ ಆರ್ಶ್‌ದೀಪ್‌ಗೆ ಪಂದ್ಯದ ವ್ಲಾಗಿಂಗ್ ಮಾಡದಂತೆ ಬಿಸಿಸಿಐ ನಿರ್ದೇಶನ ನೀಡಿತ್ತು.


