ಐಪಿಎಲ್ ವೇಳೆ ಸಂಭವನೀಯ ಹನಿಟ್ರ್ಯಾಪ್ ಮತ್ತು ಭದ್ರತಾ ಅಪಾಯಗಳ ಬಗ್ಗೆ ಬಿಸಿಸಿಐ ಆಟಗಾರರಿಗೆ ಎಚ್ಚರಿಕೆ ನೀಡಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಎಲ್ಲಾ 10 ಫ್ರಾಂಚೈಸಿಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ತಂಡದ ಮಾಲೀಕರಿಗೂ ಪಂದ್ಯದ ವೇಳೆ ಆಟಗಾರರೊಂದಿಗೆ ಸಂವಹನ ನಡೆಸದಂತೆ ಸೂಚನೆ
ನವದೆಹಲಿ: ಐಪಿಎಲ್ ವೇಳೆ ಸಂಭಾವ್ಯ ಹನಿಟ್ರ್ಯಾಪ್, ಭದ್ರತಾ ಅಪಾಯ ಹಾಗೂ ಕಾನೂನು ಸಂಕಷ್ಟದ ಬಗ್ಗೆ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಈ ಕುರಿತು ಎಲ್ಲಾ 10 ಫ್ರಾಂಚೈಸಿಗಳಿಗೆ ಮಾರ್ಗಸೂಚಿಯನ್ನು ನೀಡಲಾಗಿದ್ದು, ಅನಧಿಕೃತ ವ್ಯಕ್ತಿಗಳ ಪ್ರವೇಶ ಕುರಿತು ಎಚ್ಚರಿಕೆ ಪಾಲಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.

ಪಂದ್ಯಗಳ ವೇಳೆ ಡಗೌಟ್, ಹೋಟೆಲ್ ರೂಮ್, ತಂಡದ ಬಸ್ ಸೇರಿ ಹಲವೆಡೆ ಆಟಗಾರರ ಜೊತೆ ಕೆಲ ಅನಧಿಕೃತ ವ್ಯಕ್ತಿಗಳು ಕಾಣಿಸಿಕೊಂಡಿದ್ದನ್ನು ಬಿಸಿಸಿಐ ಗಂಭೀರವಾಗಿ ತೆಗೆದುಕೊಂಡಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ತಂಡಗಳಿಗೆ ಪತ್ರ ಬರೆದಿದ್ದಾರೆ. ‘ಈ ಬಾರಿ ಐಪಿಎಲ್ ವೇಳೆ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ತಂಡದ ಅಧಿಕೃತರಿಂದ ನಿಯಮ ಉಲ್ಲಂಘನೆ, ಸ್ವೀಕಾರಾರ್ಹವಲ್ಲದ ಘಟನೆಗಳು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಹಾಗೇ ಬಿಟ್ಟರೆ ಐಪಿಎಲ್ ಹಾಗೂ ಬಿಸಿಸಿಐ ಖ್ಯಾತಿಗೆ ದಕ್ಕೆ ಉಂಟುಮಾಡಬಹುದು. ಭವಿಷ್ಯದಲ್ಲಿ ಗಂಭೀರ ಸ್ವರೂಪದ ಕಾನೂನು ಸಮಸ್ಯೆ ಹಾಗೂ ಭದ್ರತಾ ಅಪಾಯ ತಂದೊಡ್ಡಬಹುದು’ ಎಂದು ಎಚ್ಚರಿಸಿದ್ದಾರೆ.
‘ಕೆಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯು ತಂಡದ ಮ್ಯಾನೇಜರ್‌ಗೆ ತಿಳಿಸದೆ ಅಥವಾ ಅನುಮೋದನೆ ಪಡೆಯದೆ ಅನಧಿಕೃತ ವ್ಯಕ್ತಿಗಳನ್ನು ತಮ್ಮ ಹೋಟೆಲ್ ಕೋಣೆಗೆ ಕರೆಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇಂತಹ ನಡವಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು. ಮ್ಯಾನೇಜರ್‌ರಿಂದ ಅನುಮತಿ ಇಲ್ಲದೆ ಅನಧಿಕೃತ ವ್ಯಕ್ತಿಗಳು, ಅತಿಥಿಗಳನ್ನು ತಮ್ಮ ಹೋಟೆಲ್ ಕೋಣೆಗಳಿಗೆ ಆಹ್ವಾನಿಸಬಾರದು. ಉನ್ನತ ಮಟ್ಟದ ಕ್ರೀಡಾ ವಾತಾವರಣದಲ್ಲಿ ಹನಿಟ್ರ್ಯಾಪ್ ಅಪಾಯಗಳ ಬಗ್ಗೆ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಗಮನ ಸೆಳೆಯುತ್ತದೆ. ಇಂತಹ ಘಟನೆಗಳು ಗಂಭೀರ ಕಾನೂನು ಉಲ್ಲಂಘನೆಗೆ ಕಾರಣವಾಗುತ್ತದೆ. ಹೀಗಾಗಿ ಫ್ರಾಂಚೈಸಿಗಳು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು’ ಎಂದು ಸೈಕಿಯಾ ಅವರು ಸೂಚನೆ ನೀಡಿದ್ದಾರೆ.
ಮಾಲೀಕರಿಗೂ ನಿರ್ಬಂಧ:
ಇನ್ನು, ಪಂದ್ಯದ ವೇಳೆ ಡಗೌಟ್, ರೂಮ್ ಅಥವಾ ಮೈದಾನದ ಬಳಿಕ ಆಟಗಾರರ ಜೊತೆ ತಂಡಗಳ ಮಾಲಿಕರ ಸಂಭಾಷನೆ, ಆಲಿಂಘನ ಕೂಡಾ ನಿಷೇಧಿಸಲಾಗಿದೆ. ‘ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಪಂದ್ಯದ ಸಂದರ್ಭಗಳಲ್ಲಿ ಆಟಗಾರರೊಂದಿಗೆ ಸಂವಹನ ನಡೆಸಲು, ಸಮೀಪಿಸಲು, ತಬ್ಬಿಕೊಳ್ಳಲು ಪ್ರಯತ್ನಿಸುವ ನಿದರ್ಶನ ಗಮನಿಸಲಾಗಿದೆ. ಅಂತಹ ನಡವಳಿಕೆಯು ಸದುದ್ದೇಶದಿಂದ ಕೂಡಿದ್ದರೂ, ಅದು ಬಿಸಿಸಿಐ ಶಿಷ್ಟಾಚಾರದ ಉಲ್ಲಂಘನೆಯಾಗಿರುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಯಾವುದಕ್ಕೆಲ್ಲಾ ನಿರ್ಬಂಧ?
1. ಹೋಟೆಲ್ ರೂಮ್‌ಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ.
2. ಪಂದ್ಯದ ವೇಳೆ ಆಟಗಾರರ ಜೊತೆ ಮಾಲಿಕರ ಭೇಟಿ.
3. ಪಂದ್ಯ ನಡೆಯುವ ಸ್ಥಳದಲ್ಲಿ ವೇಪಿಂಗ್.
4. ಅನುಮತಿ ಇಲ್ಲದೆ ಹೋಟೆಲ್‌ನಿಂದ ಹೊರಬರುವುದು.


