5ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯು 6 ತಂಡಗಳೊಂದಿಗೆ ಆರಂಭವಾಗಲಿದೆ. ಈ ಬಾರಿ ಟೂರ್ನಿಯಲ್ಲಿ ಡಿಆರ್‌ಎಸ್, ಫ್ರೀ-ಹಿಟ್ ಮತ್ತು ಪ್ಲೇಯಿಂಗ್ XIಗೆ ಸಂಬಂಧಿಸಿದಂತೆ ಮೂರು ಮಹತ್ವದ ಹೊಸ ನಿಯಮಗಳನ್ನು ಪರಿಚಯಿಸಲಾಗಿದ್ದು, ಇದು ಆಟದ ಮೇಲೆ ಪರಿಣಾಮ ಬೀರಲಿದೆ.
ಮೈಸೂರು: 5ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಶನಿವಾರ ಚಾಲನೆ ದೊರೆಯಲಿದೆ. 6 ತಂಡಗಳನ್ನು ಒಳಗೊಂಡಿರುವ ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 34 ಪಂದ್ಯಗಳು ನಡೆಯಲಿವೆ. ಒಟ್ಟು 23 ದಿನಗಳ ಕಾಲ, 3 ನಗರಗಳಲ್ಲಿ ಟೂರ್ನಿ ನಡೆಯಲಿದೆ.
ಮೊದಲ ಚರಣಕ್ಕೆ ಮೈಸೂರು ಆತಿಥ್ಯ ವಹಿಸಲಿದ್ದು, ಶನಿವಾರ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಸೆಣಸಲಿವೆ. ದಿನದ 2ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ಗೆ ಶಿವಮೊಗ್ಗ ಯೋಧಾಸ್ ಸವಾಲು ಎದುರಾಗಲಿದೆ.
ಕೋಸ್ಟಲ್ ಕಿಂಗ್ಸ್ ಮಂಗಳೂರು, ಹುಬ್ಬಳ್ಳಿ ಟೈಗರ್ಸ್ ಟೂರ್ನಿಯಲ್ಲಿ ಆಡಲಿರುವ ಮತ್ತೆರಡು ತಂಡಗಳು. ಬೆಂಗಳೂರು ತಂಡವನ್ನು ಶುಭಾಂಗ್ ಹೆಗಡೆ, ಗುಲ್ಬರ್ಗಾಕ್ಕೆ ಮನೀಶ್ ಪಾಂಡೆ, ಮೈಸೂರಿಗೆ ವೈಶಾಕ್ ವಿಜಯ್‌ಕುಮಾರ್, ಶಿವಮೊಗ್ಗಕ್ಕೆ ಆರ್.ಸ್ಮರಣ್, ಮಂಗಳೂರಿಗೆ ಕರುಣ್ ನಾಯರ್ ಹಾಗೂ ಹುಬ್ಬಳ್ಳಿ ತಂಡಕ್ಕೆ ಅನೀಶ್ವರ್ ಗೌತಮ್ ನಾಯಕರಾಗಿದ್ದಾರೆ.
ಜೂ.20ರಿಂದ ಜೂ.26ರ ವರೆಗೂ ಮೈಸೂರಲ್ಲಿ ಪಂದ್ಯಗಳು ನಡೆಯಲಿದೆ. ಜೂ.27ರಿಂದ ಜು.3 ಹುಬ್ಬಳ್ಳಿ, ಜು.5ರಿಂದ ಜು.12ರ ವರೆಗೂ ಬೆಂಗಳೂರಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ.
ಟೂರ್ನಿಯಲ್ಲಿ 3 ಹೊಸ ನಿಯಮ
--
1. ಡಿಆರ್‌ಎಸ್ ನಿಯಮ ಬದಲು:
ಸಾಮಾನ್ಯವಾಗಿ ಐಸಿಸಿ ನಿಯಮಗಳ ಪ್ರಕಾರ, ಆನ್‌ಫೀಲ್ಡ್ ಅಂಪೈರ್ ಬ್ಯಾಟರ್ ಔಟ್ ಎಂದು ತೀರ್ಪು ನೀಡಿದ ತಕ್ಷಣ ಚೆಂಡು ‘ಡೆಡ್ ಬಾಲ್’ ಆಗುತ್ತದೆ. ಆ ಎಸೆತದಲ್ಲಿ ಬ್ಯಾಟರ್‌ಗಳು ಓಡಿ ರನ್ ಗಳಿಸಿದರೂ ಅಥವಾ ಚೆಂಡು ಬೌಂಡರಿ ಗೆರೆ ದಾಟಿದರೂ, ನಂತರ ಡಿಆರ್‌ಎಸ್ ರಿವ್ಯೂನಲ್ಲಿ ಬ್ಯಾಟರ್ ನಾಟೌಟ್ ಎಂದು ಸಾಬೀತಾದರೆ ಆ ರನ್‌ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಆದರೆ, 2026ರ ಮಹಾರಾಜ ಟ್ರೋಫಿಯಲ್ಲಿ ಈ ನಿಯಮವನ್ನು ಬದಲಾಯಿಸಲಾಗಿದೆ. ಈಗ ಅಂಪೈರ್ ತೀರ್ಪನ್ನು ಬದಲಾಯಿಸಿ ಬ್ಯಾಟರ್ ನಾಟೌಟ್ ಎಂದು ಘೋಷಿಸಿದರೆ, ಆ ಎಸೆತದಲ್ಲಿ ಬ್ಯಾಟರ್ ಮತ್ತು ತಂಡ ಗಳಿಸಿದ ರನ್‌ಗಳನ್ನು ಅವರ ಒಟ್ಟು ಸ್ಕೋರ್‌ಗೆ ಸೇರಿಸಲಾಗುತ್ತದೆ.
2. ಫ್ರೀ-ಹಿಟ್‌ನಲ್ಲಿ ರನ್ ಇಲ್ಲ:
ಫ್ರೀ-ಹಿಟ್ ಎಸೆತದಲ್ಲಿ ಬ್ಯಾಟರ್ ಬೌಲ್ಡ್ ಅಥವಾ ಕ್ಯಾಚ್ ಆದಲ್ಲಿ (ಫ್ರೀ-ಹಿಟ್‌ನಲ್ಲಿ ಇದಕ್ಕೆ ಔಟ್ ಇಲ್ಲದಿದ್ದರೂ), ಆ ಸಮಯದಲ್ಲಿ ಓಡಿ ಗಳಿಸುವ ರನ್‌ಗಳನ್ನು ಇನ್ಮುಂದೆ ಪರಿಗಣಿಸಲಾಗುವುದಿಲ್ಲ. ನೋ-ಬಾಲ್ ಎಸೆದ ನಂತರವೂ ಉತ್ತಮವಾಗಿ ಬೌಲಿಂಗ್ ಮಾಡುವ ಬೌಲರ್‌ಗಳಿಗೆ ಪ್ರೋತ್ಸಾಹ ನೀಡಲು ಈ ನಿಯಮ ತರಲಾಗಿದೆ.
3. ಟಾಸ್‌ಗೂ ಮುನ್ನವೇ ಪ್ಲೇಯಿಂಗ್ XI ಸಲ್ಲಿಕೆ:
ಐಪಿಎಲ್‌ನಲ್ಲಿ ಟಾಸ್ ಆದ ಬಳಿಕ ಪಿಚ್ ಪರಿಸ್ಥಿತಿಗೆ ತಕ್ಕಂತೆ ತಂಡವನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ ಮಹಾರಾಜ ಟ್ರೋಫಿಯಲ್ಲಿ ಟಾಸ್‌ಗೆ ಮೊದಲೇ ಉಭಯ ತಂಡಗಳು ತಮ್ಮ ಆಡುವ ಹನ್ನೊಂದರ ಬಳಗದ ಪಟ್ಟಿಯನ್ನು ಸಲ್ಲಿಸುವುದು ಕಡ್ಡಾಯ. ಜೊತೆಗೆ 4-5 ಇಂಪ್ಯಾಕ್ಟ್ ಆಟಗಾರನ ಪಟ್ಟಿಯನ್ನೂ ನೀಡಬೇಕು. ಬಳಿಕ ತಮ್ಮ ಅವಶ್ಯಕತೆಗೆ ತಕ್ಕಂತೆ ಒಬ್ಬ ಆಟಗಾರರನ್ನು ಇಂಪ್ಯಾಕ್ಟ್ ಆಟಗಾರನನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಆಲ್ರೌಂಡರ್‌ಗಳ ಮಹತ್ವ ಕಡಿಮೆ ಆಗಬಾರದು ಎನ್ನುವ ಕಾರಣದಿಂದ ಈ ನಿಯಮ ತರಲಾಗಿದೆ.


