- Home
- Sports
- Cricket
- Gambhir vs Sreesanth: 'ದೇಶದ್ರೋಹಿ' ಪದ ಬಳಕೆ; ಭಾರತಕ್ಕೆ ಗೌತಮ್ ಗಂಭೀರ್‌ನಂತಹ ಕೋಚ್ ಬೇಕಿಲ್ಲ-ಶ್ರೀಶಾಂತ್!
Gambhir vs Sreesanth: 'ದೇಶದ್ರೋಹಿ' ಪದ ಬಳಕೆ; ಭಾರತಕ್ಕೆ ಗೌತಮ್ ಗಂಭೀರ್‌ನಂತಹ ಕೋಚ್ ಬೇಕಿಲ್ಲ-ಶ್ರೀಶಾಂತ್!
ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್, ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲೆಜೆಂಡ್ಸ್ ಲೀಗ್ ಪಂದ್ಯದ ವೇಳೆ 'ದೇಶದ್ರೋಹಿ' ಪದ ಬಳಕೆಯ ಬಗ್ಗೆ ಬಹಿರಂಗಪಡಿಸಿದ ಶ್ರೀಶಾಂತ್, ಭಾರತ ತಂಡಕ್ಕೆ ಗಂಭೀರ್ ಸೂಕ್ತ ಕೋಚ್ ಅಲ್ಲ. ಪೂರ್ಣ ವಿವರ ಓದಿ.

ಭಾರತೀಯ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯೊಂದರಲ್ಲಿ, ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್, ಟೀಂ ಇಂಡಿಯಾದ ಹಾಲಿ ಕೋಚ್ ಮತ್ತು ತಮ್ಮ ಮಾಜಿ ಸಹ ಆಟಗಾರ ಗೌತಮ್ ಗಂಭೀರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಗಂಭೀರ್ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, 'ಮ್ಯಾಚ್ ಫಿಕ್ಸರ್' ಮತ್ತು 'ದೇಶದ್ರೋಹಿ' ಎಂದು ಕರೆದು ಅವಮಾನಿಸಿದ್ದಾರೆ ಎಂದು ಶ್ರೀಶಾಂತ್ ಇದೀಗ ಬಹಿರಂಗಪಡಿಸಿದ್ದಾರೆ.
2023ರ ಡಿಸೆಂಬರ್‌ನಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯದ ವೇಳೆ ಇವರಿಬ್ಬರ ನಡುವೆ ಮೈದಾನದಲ್ಲಿ ದೊಡ್ಡ ಜಗಳವೇ ನಡೆದಿತ್ತು. ಆ ಸಮಯದಲ್ಲಿ ಗಂಭೀರ್ ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಶ್ರೀಶಾಂತ್ ಹೇಳಿದ್ದರಾದರೂ, ಅದರ ಪೂರ್ಣ ವಿವರವನ್ನು ಈಗ ಬಿಚ್ಚಿಟ್ಟಿದ್ದಾರೆ.
ಒಂದು ಬೌನ್ಸರ್‌ನಿಂದ ಶುರುವಾದ ಜಗಳ
ಪಂದ್ಯದ ವೇಳೆ ತಾನು ಎಸೆದ ಒಂದು ಬೌನ್ಸರ್ ಗಂಭೀರ್‌ರನ್ನು ಕೆರಳಿಸಿತ್ತು ಎಂದು ಶ್ರೀಶಾಂತ್ ಹೇಳಿದ್ದಾರೆ. 'ಪಂದ್ಯದಲ್ಲಿ ಗಂಭೀರ್ ಮೊದಲ ಎಸೆತದಲ್ಲೇ ಕ್ರೀಸ್‌ನಿಂದ ಹೊರಬಂದು ಫ್ಲಿಕ್ ಶಾಟ್ ಆಡಿದರು. ಅವರಿಗೆ ನನ್ನ ಆಟ ಚೆನ್ನಾಗಿ ಗೊತ್ತು, ಅವರೊಬ್ಬ ಅದ್ಭುತ ಕ್ರಿಕೆಟಿಗ. ಆದರೆ, ಮುಂದಿನ ಎಸೆತದಲ್ಲಿ ನಾನು ಅವರಿಗೆ ಒಂದು ಬೌನ್ಸರ್ ಹಾಕಿದೆ. ಇದರಿಂದ ಅವರು ಸಿಟ್ಟಾದರು. ಬೌನ್ಸರ್ ಹಾಕಿದ ನಂತರ ಅವರು ನನ್ನ ಬಳಿ 'ನಾನು ನಿನ್ನನ್ನು ಖರೀದಿಸಿದ್ದೇನೆ' (I bought you) ಎಂದರು. ಅವರು ನನ್ನನ್ನು ನಿಂದಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಅವರು ಹೇಳಬಾರದ ಮಾತುಗಳನ್ನೆಲ್ಲಾ ಹೇಳಿದರು.
ನನ್ನನ್ನು 'ಫಿಕ್ಸರ್' ಎಂದು ಕರೆದರು. ನಾನು ಮುಂದೆ ಹೋಗಿ 'ಗೌತಿ ಭಾಯ್, ನೀವು ಸರಿಯಾಗಿದ್ದೀರಾ?' ಎಂದು ಕೇಳಿದೆ. ನಾನು ದೈಹಿಕವಾಗಿ ಸ್ವಲ್ಪ ದೊಡ್ಡವನಾಗಿರುವುದರಿಂದ, ಹೊಡೆಯಲು ಹೋಗುತ್ತಿದ್ದೇನೆ ಎಂದು ಅವರಿಗೆ ಅನಿಸಿರಬಹುದು. ಆಗಲೇ ಅವರು ಎಫ್-ವರ್ಡ್ ಬಳಸಿ ಬೈಯಲು ಶುರು ಮಾಡಿದರು. ನಂತರ ಮತ್ತೆ 'ಫಿಕ್ಸರ್' ಮತ್ತು 'ದೇಶದ್ರೋಹಿ' ಎಂದು ಪದೇ ಪದೇ ಹೇಳಿದರು, ಎಂದು ಶ್ರೀಶಾಂತ್ ವಿವರಿಸಿದ್ದಾರೆ.
2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ತಂಡಗಳಲ್ಲಿ ಶ್ರೀಶಾಂತ್ ಮತ್ತು ಗಂಭೀರ್ ಇಬ್ಬರೂ ಒಟ್ಟಿಗೆ ಆಡಿ, ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಆಟದ ನಂತರ ಇಬ್ಬರ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಶ್ರೀಶಾಂತ್ ಮೇಲೆ ಹೇರಿದ್ದ ನಿಷೇಧವನ್ನೇ ಇಟ್ಟುಕೊಂಡು ಗಂಭೀರ್ ಮೈದಾನದಲ್ಲಿ ಕೆರಳಿದ್ದರು. ಶ್ರೀಶಾಂತ್‌ಗೆ ಮೊದಲು ಜೀವಾವಧಿ ನಿಷೇಧ ಹೇರಲಾಗಿತ್ತಾದರೂ, ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಬಿಸಿಸಿಐ ಅದನ್ನು ಏಳು ವರ್ಷಗಳಿಗೆ ಇಳಿಸಿತ್ತು.
'ಭಾರತಕ್ಕೆ ಗಂಭೀರ್‌ರಂತಹ ಕೋಚ್ ಬೇಕಿಲ್ಲ'
ಈ ಜಗಳದ ವಿವರಗಳ ಜೊತೆಗೆ, ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿಯ ಬಗ್ಗೆಯೂ ಶ್ರೀಶಾಂತ್ ಕಟು ಟೀಕೆ ಮಾಡಿದ್ದಾರೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತಿದ್ದನ್ನು ಉಲ್ಲೇಖಿಸಿ ಅವರು ಈ ಟೀಕೆ ಮಾಡಿದರು.
‘ಗಂಭೀರ್ ಆಟಗಾರರ ಮೇಲೆ ಅತಿಯಾದ ಒತ್ತಡ ಹೇರುತ್ತಾರೆ. ಸೋತಾಗ ಆಟಗಾರರನ್ನು ಹೆದರಿಸುತ್ತಾರೆ ಮತ್ತು ತಂಡದಿಂದ ಹೊರಗಿಡುತ್ತಾರೆ. ಭಾರತಕ್ಕೆ ಈಗ ಬೇಕಿರುವುದು ಕಠಿಣ ಸ್ವಭಾವದ ಕೋಚ್ ಅಲ್ಲ, ಬದಲಿಗೆ ಎಂ.ಎಸ್. ಧೋನಿಯಂತಹ ಒಬ್ಬ ಮೆಂಟರ್. ಇತ್ತೀಚೆಗೆ ಭಾರತೀಯ ತಂಡ ಗೆದ್ದ ಪಂದ್ಯಗಳ ಸಂಪೂರ್ಣ ಕ್ರೆಡಿಟ್ ಅನ್ನು ಗಂಭೀರ್‌ಗೆ ನೀಡುವುದನ್ನೂ ಶ್ರೀಶಾಂತ್ ಪ್ರಶ್ನಿಸಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ಮೈದಾನದಲ್ಲಿ ತೆಗೆದುಕೊಂಡ ಸರಿಯಾದ ನಿರ್ಧಾರಗಳೇ ಭಾರತವನ್ನು ಗೆಲುವಿನತ್ತ ಕೊಂಡೊಯ್ದವು’ ಎಂದು ಮುಕ್ತವಾಗಿ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

