ಲಾರ್ಡ್ಸ್‌ ಟೆಸ್ಟ್‌ನಲ್ಲಿ ಭಾರತ 22 ರನ್‌ಗಳಿಂದ ಸೋಲು ಕಂಡಿದೆ. ಮೊಹಮ್ಮದ್ ಸಿರಾಜ್‌ ಅವರ ಕೊನೆಯ ವಿಕೆಟ್‌ ಬೇಲ್ಸ್‌ ಉರುಳಿದ ರೀತಿ ನಿಜಕ್ಕೂ ಬೇಸರ ತರಿಸಿತು. ಇದರೊಂದಿಗೆ ಇಂಗ್ಲೆಂಡ್‌ ಆಂಡರ್ಸನ್‌-ತೆಂಡುಲ್ಕರ್‌ ಟ್ರೋಫಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಲಂಡನ್‌ (ಜು.14): ಗೆಲುವಿನಿಂದ ಜಸ್ಟ್‌ 23 ರನ್‌ ದೂರವಿದ್ದಾಗ ಪಾಕ್‌ ಮೂಲದ ಬೌಲರ್‌ ಶೋಯೆಬ್‌ ಬಶೀರ್‌ ಎಸೆದ 5ನೇ ಎಸೆತವನ್ನು ಮೊಹಮದ್‌ ಸಿರಾಜ್‌ ಅದ್ಭುತವಾಗಿ ಡಿಫೆಂಡ್‌ ಮಾಡಿದ್ದರು. ಆದರೆ, ಬ್ಯಾಟ್‌ಗೆ ತಾಕಿ ನೆಲಕ್ಕೆ ಬಿದ್ದ ಚೆಂಡು ಲೆಗ್‌ಸ್ಟಂಪ್‌ಗೆ ಸುಮ್ಮನೆ ಮುತ್ತಿಕ್ಕಿದಂತೆ ಮಾಡಿತು. ಆದರೆ, ಚೆಂಡು ಕೊಂಚ ವೇಗ ಹೊಂದಿದ್ದರಿಂದ ಒಂದು ಬೇಲ್ಸ್ ಎಗರಿ ಕೆಳಕ್ಕೆ ಬಿದ್ದಿತು. ಅಲ್ಲಿಗೆ ಇಂಗ್ಲೆಂಡ್‌ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಚೆಂಡನ್ನು ಕಾಲಿನಿಂದ ನಡೆಯಬೇಕು ಎನ್ನುವಷ್ಟರಲ್ಲಿ ಸ್ಟಂಪ್‌ಗೆ ಮುತ್ತಿಕ್ಕಿ ಬೇಲ್ಸ್‌ ಉರುಳಿದ್ದನ್ನು ಕಂಡ ಮೊಹಮದ್‌ ಸಿರಾಜ್‌ ಅಲ್ಲಿಯೇ ಕುಸಿದು ಕುಳಿತರು. ಅದರೊಂದಿಗೆ ಲಾರ್ಡ್ಸ್‌ ಥ್ರಿಲ್ಲರ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 22 ರನ್‌ಗಳಿಂದ ಭಾರತವನ್ನು ಮಣಿಸುವ ಮೂಲಕ ಆಂಡರ್ಸನ್‌-ತೆಂಡುಲ್ಕರ್‌ ಟ್ರೋಫಿಯಲ್ಲಿ 2-1 ಮುನ್ನಡೆಗೇರಿತು.

ಆರು ವರ್ಷಗಳ ಹಿಂದೆ ಇದೇ ನೆಲದಲ್ಲಿ ಇದೇ ದಿನ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ತಮ್ಮ ಪ್ರಮಾದಕ್ಕಾಗಿ ವಿಶ್ವ ಕ್ರಿಕೆಟ್‌ ಸಮುದಾಯದ ಮುಂದೆ ಕ್ಷಮೆ ಕೇಳಿದ್ದ ಬೆನ್‌ ಸ್ಟೋಕ್ಸ್‌ ಇಂದು ಭರ್ಜರಿ ಸಂಭ್ರಮದ ಕ್ಷಣ ಕಂಡಿದ್ದಾರೆ. ಇಂಗ್ಲೆಂಡ್‌ ತಂಡವನ್ನು ವಿಶ್ವಚಾಂಪಿಯನ್‌ ಮಾಡಿದ ವಾರ್ಷಿಕೋತ್ಸವದ ದಿನದಂದೇ, ಲಾರ್ಡ್ಸ್‌ನಲ್ಲಿ ಥ್ರಿಲ್ಲಿಂಗ್‌ ವಿಕ್ಟರಿ ಪಡೆಯುವ ಮೂಲಕ ಅದನ್ನು ಸ್ಮರಣೀಯವಾಗಿಸಿದರು.

58 ರನ್‌ಗೆ 4 ವಿಕೆಟ್‌ಗಳಿಂದ ಐದನೇ ದಿನದಾಟ ಮುಂದುವರಿಸಿದ ಭಾರತ ತಂಡ 170 ರನ್‌ಗೆ ಆಲೌಟ್‌ ಆಯಿತು. ದಿನದ ಆರಂಭದಲ್ಲಿಯೇ ಭಾರತದ ಸಾಲು ಸಾಲು ವಿಕೆಟ್‌ಗಳನ್ನು ಉರುಳಿಸುವ ಮೂಲಕ ಇಂಗ್ಲೆಂಡ್‌ ಸುಲಭವಾಗಿ ಗೆಲುವು ಪಡೆಯುವ ಹಾದಿಯಲ್ಲಿತ್ತು. 112 ರನ್‌ಗೆ 8 ವಿಕೆಟ್‌ ಕಳೆದುಕೊಂಡಿದ್ದ ಭಾರತ ಸುಲಭವಾಗಿ ಸೋಲು ಕಾಣಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಕೊನೇ ಎರಡು ವಿಕೆಟ್‌ಗಳ ಜೊತೆಯಾಟದಲ್ಲಿ ಭಾರತ 58 ರನ್‌ ಸೇರಿಸಿದ್ದರಿಂದ ಇಂಗ್ಲೆಂಡ್‌ ಗೆಲುವಿಗೆ ಇನ್ನಷ್ಟು ಬೆವರು ಸುರಿಸುವಂತಾಯಿತು. ಇದಕ್ಕೆ ಮೂಲವಾಗಿ ಕಾರಣವಾಗಿದ್ದು ರವೀಂದ್ರ ಜಡೇಜಾ. 181 ಎಸೆತಗಳ ಇನ್ನಿಂಗ್ಸ್‌ ಆಡಿದ ರವೀಂದ್ರ ಜಡೇಜಾ 4 ಬೌಂಡರಿ, 1 ಸಿಕ್ಸರ್‌ನೊಂದಿಗೆ 61 ರನ್‌ ಬಾರಿಸಿ ಅಜೇಯವಾಗುಳಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ 387 ರನ್‌ಗಳಿಗೆ ಪ್ರತಿಯಾಗಿ ಭಾರತ ಕೂಡ ಅಷ್ಟೇ ರನ್‌ ಬಾರಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 192 ರನ್‌ ಬಾರಿಸಿದರೆ, ಭಾರತ 170 ರನ್‌ಗೆ ಆಲೌಟ್‌ ಆಗಿ ಸೋಲು ಕಂಡಿತು. ಇಂಗ್ಲೆಂಡ್‌ ಪರವಾಗಿ ಬೆನ್‌ ಸ್ಟೋಕ್ಸ್‌ ಹಾಗೂ ಜೋಫ್ರಾ ಆರ್ಚರ್‌ ತಲಾ 3 ವಿಕೆಟ್‌ ಉರುಳಿಸಿದರೆ, ಬ್ರೇಡನ್‌ ಕಾರ್ಸ್‌ 2, ಕ್ರಿಸ್‌ ವೋಕ್ಸ್‌ ಹಾಗೂ ಶೋಯೆಬ್‌ ಬಶೀರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಐದು ಪಂದ್ಯಗಳ ಸರಣಿಯಲ್ಲಿ ಸದ್ಯ ಇಂಗ್ಲೆಂಡ್‌ ಮುನ್ನಡೆಯಲ್ಲಿದ್ದು, ಉಭಯ ತಂಡಗಳ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಭವಾಗಲಿದೆ.