ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆಲುವಿನತ್ತ ದಾಪುಗಾಲಿಟ್ಟಿದೆ. ಇಂಗ್ಲೆಂಡ್‌ ಅನ್ನು 2ನೇ ಇನ್ನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಭಾರತ, ಗೆಲುವಿಗೆ 135 ರನ್‌ಗಳ ಗುರಿಯನ್ನು ಹೊಂದಿದೆ. ರಾಹುಲ್‌ ಅವರ ಅಜೇಯ ಅರ್ಧಶತಕ ಭಾರತದ ಗೆಲುವಿನ ಭರವಸೆ ಹೆಚ್ಚಿಸಿದೆ.

ಲಂಡನ್‌: ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ಟೀಂ ಇಂಡಿಯಾ ‘ಲಾರ್ಡ್‌’ ಆಗುವತ್ತ ಹೆಜ್ಜೆ ಹಾಕಿದೆ. ಮೊದಲ ಇನ್ನಿಂಗ್ಸ್‌ ಸ್ಕೋರ್‌ ಸಮಗೊಂಡ ಬಳಿಕ ಪಂದ್ಯದ 4ನೇ ದಿನವಾದ ಭಾನುವಾರ ಇಂಗ್ಲೆಂಡ್‌ ಅನ್ನು 2ನೇ ಇನ್ನಿಂಗ್ಸ್‌ನಲ್ಲಿ 192 ರನ್‌ಗೆ ಆಲೌಟ್‌ ಮಾಡಿದ ಭಾರತ, ದಿನದಾಟದಂತ್ಯಕ್ಕೆ 4 ವಿಕೆಟ್‌ಗೆ 58 ರನ್‌ ಗಳಿಸಿದೆ. ಪಂದ್ಯದ 5ನೇ ಹಾಗೂ ಕೊನೆಯ ದಿನವಾದ ಸೋಮವಾರ ಗೆಲ್ಲಲು 135 ರನ್‌ ಬೇಕಿದ್ದು, ಲಾರ್ಡ್ಸ್ ಟೆಸ್ಟ್‌ ರೋಚಕಘಟ್ಟದತ್ತ ಬಂದು ನಿಂತಿದೆ.

3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 2 ರನ್‌ ಗಳಿಸಿದ್ದ ಇಂಗ್ಲೆಂಡ್‌, 4ನೇ ದಿನದಾಟದ ಮೊದಲ ಅವಧಿಯಲ್ಲೇ ಸಂಕಷ್ಟಕ್ಕೆ ಸಿಲುಕಿತು. 50 ರನ್‌ಗೆ 3 ವಿಕೆಟ್‌ ಪತನಗೊಂಡವು. ಆಕ್ರಮಣಕಾರಿ ಆಟಕ್ಕಿಳಿದ ಹ್ಯಾರಿ ಬ್ರೂಕ್‌ರನ್ನು ಆಕಾಶ್‌ದೀಪ್‌ ಪೆವಿಲಿಯನ್‌ಗಟ್ಟಿದ ಬಳಿಕ ಭಾರತಕ್ಕೆ ತಲೆನೋವಾಗಿ ಪರಿಣಮಿಸಬಹುದು ಎನಿಸಿದ್ದು, ಜೋ ರೂಟ್‌ ಹಾಗೂ ಬೆನ್‌ ಸ್ಟೋಕ್ಸ್‌ರ ನಡುವಿನ ಜೊತೆಯಾಟ. ಇವರಿಬ್ಬರು 5ನೇ ವಿಕೆಟ್‌ಗೆ 77 ರನ್‌ ಸೇರಿಸಿ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವ ವಿಶ್ವಾಸದಲ್ಲಿದ್ದರು. ಆದರೆ, ವಾಷಿಂಗ್ಟನ್‌ ಸುಂದರ್‌ರ ಸ್ಪೆಲ್‌, ಇಂಗ್ಲೆಂಡ್‌ ಕುಸಿತಕ್ಕೆ ಕಾರಣವಾಯಿತು.

Scroll to load tweet…

ಮೊದಲು ರೂಟ್‌ (40)ರನ್ನು ಬೌಲ್ಡ್‌ ಮಾಡಿದ ವಾಷಿಂಗ್ಟನ್‌ ಸುಂದರ್, ಆ ಬಳಿಕ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ, ಈ ಸರಣಿಯಲ್ಲಿ ಇಂಗ್ಲೆಂಡ್‌ ಪರ ಗರಿಷ್ಠ ರನ್‌ ಸರದಾರ ಜೇಮಿ ಸ್ಮಿತ್‌ರ ವಿಕೆಟ್‌ ಕಬಳಿಸಿದರು. ಬಾಲಂಗೋಚಿಗಳ ಜೊತೆ ಸೇರಿ ಇನ್ನಿಂಗ್ಸ್‌ ಕಟ್ಟುವ ನಿರೀಕ್ಷೆಯಲ್ಲಿದ್ದ ಬೆನ್‌ ಸ್ಟೋಕ್ಸ್‌ (33)ಗೂ ವಾಷಿಂಗ್ಟನ್‌ ಪೆವಿಲಿಯನ್‌ ದಾರಿ ತೋರಿಸಿದರು.

ನಂತರ ಜಸ್‌ಪ್ರೀತ್‌ ಬುಮ್ರಾ 2 ವಿಕೆಟ್‌ ಕಬಳಿಸಿ ಇಂಗ್ಲೆಂಡ್‌ ಪುಟಿದೇಳದಂತೆ ಮಾಡಿದರು. ವಾಷಿಂಗ್ಟನ್‌ ಒಟ್ಟು 4 ವಿಕೆಟ್ ಕಿತ್ತು ತಂಡಕ್ಕೆ ನೆರವಾದರು. ಬುಮ್ರಾ, ಸಿರಾಜ್‌ ತಲಾ 2, ಆಕಾಶ್‌ದೀಪ್‌, ನಿತೀಶ್‌ ತಲಾ 1 ವಿಕೆಟ್‌ ಪಡೆದರು. ಇಂಗ್ಲೆಂಡ್‌ನ 7 ಬ್ಯಾಟರ್‌ಗಳು ಬೌಲ್ಡ್‌ ಆದರು. ಆತಿಥೇಯ ತಂಡ 38 ರನ್‌ಗೆ ಕೊನೆಯ 6 ವಿಕೆಟ್‌ ಕಳೆದುಕೊಂಡಿತು.

193 ರನ್‌ ಗುರಿ ಪಡೆದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತಕ್ಕೆ ಒಳಗಾಯಿತು. ಯಶಸ್ವಿ ಜೈಸ್ವಾಲ್‌ (0) ದುಬಾರಿ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. ಆದರೆ, ಕೆ.ಎಲ್‌.ರಾಹುಲ್‌ ಹಾಗೂ ಕರುಣ್‌ ನಾಯರ್‌ ಸಮಯೋಚಿತ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 36 ರನ್‌ಗಳ ಅಮೂಲ್ಯ ಜತೆಯಾಟವಾಡಿದರು.

ದಿಢೀರ್ ಕುಸಿದ ಭಾರತ: ಇನ್ನು ಅತ್ಯಂತ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ ಕರುಣ್ ನಾಯರ್ 33 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 14 ರನ್ ಗಳಿಸಿ ಬ್ರೈಡನ್ ಕಾರ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ನಾಯಕ ಶುಭ್‌ಮನ್ ಗಿಲ್ ಕೂಡಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಗಿಲ್ ಕೇವಲ 6 ರನ್ ಗಳಿಸಿ ಬ್ರೈಡನ್ ಕಾರ್ಸ್‌ಗೆ ಎರಡನೇ ಬಲಿಯಾದರು. ನೈಟ್‌ವಾಚ್‌ಮನ್ ಆಗಿ ಕಣಕ್ಕಿಳಿದ ಆಕಾಶ್‌ದೀಪ್ 11 ಎಸೆತಗಳನ್ನು ಎದುರಿಸಿ ಒಂದು ರನ್ ಗಳಿಸಿ ಬೆನ್‌ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.

ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರುತ್ತಿರುವ ಕೆ ಎಲ್ ರಾಹುಲ್ 47 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ ಅಜೇಯ 33 ರನ್ ಸಿಡಿಸಿ ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ಕೆ ಎಲ್ ರಾಹುಲ್ ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತಿದ್ದಾರೆ. ರಿಷಭ್ ಪಂತ್ ಹಾಗೂ ಕೆ ಎಲ್ ರಾಹುಲ್ ಜತೆಯಾಟ ಪಂದ್ಯದ ಫಲಿತಾಂಶ ನಿರ್ಧರಿಸುವ ಸಾಧ್ಯತೆಯಿದೆ.

07 ಬೌಲ್ಡ್‌: ಇನ್ನಿಂಗ್ಸ್‌ವೊಂದರಲ್ಲಿ ಎದುರಾಳಿ ತಂಡದ 7 ಬ್ಯಾಟರ್‌ಗಳನ್ನು ಭಾರತ ಬೌಲ್ಡ್‌ ಮಾಡಿದ್ದು ಇದೇ ಮೊದಲು. ಪಂದ್ಯದಲ್ಲಿ ಭಾರತ ಒಟ್ಟು 12 ವಿಕೆಟ್‌ಗಳನ್ನು ಬೌಲ್ಡ್‌ ಮೂಲಕವೇ ಪಡೆದಿದ್ದು ಸಹ ಇದೇ ಮೊದಲು.