ಮುಂಬೈ(ಮೇ.20): ಸದ್ಯ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಕ್ರಿಕೆಟಿಗರು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಏನಾದರೊಂದು ವಿಚಾರವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಮನೆಯಲ್ಲೇ ಕುಳಿತುಕೊಂಡು ಕ್ರಿಕೆಟಿಗರು ಅಭಿಮಾನಿಗಳೊಂದಿಗೆ ಟಚ್‌ನಲ್ಲಿದ್ದಾರೆ.

ಲಾಕ್‌ಡೌನ್ ಐಶಾರಾಮಿ ಅಂಗಡಿಗಳಿಂದ ಹಿಡಿದು ಸಲೂನ್ ಶಾಪ್‌ವರೆಗೂ ಎಲ್ಲವೂ ಬಂದಾಗಿದೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ತಮ್ಮ ಮಗ ಅರ್ಜುನ್‌ ತೆಂಡುಲ್ಕರ್‌ಗೆ ಹೇರ್‌ ಕಟ್‌ ಮಾಡಿದ್ದಾರೆ. 

ಇದರ ವಿಡಿಯೋವನ್ನು ಸಚಿನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಂಗಳವಾರ ಪೋಸ್ಟ್‌ ಮಾಡಿದ್ದಾರೆ. ‘ತಂದೆಯಾಗಿ ಮಕ್ಕಳಿಗೆ ಎಲ್ಲವನ್ನೂ ಮಾಡಬೇಕಿದೆ. ಅವರೊಂದಿಗೆ ಆಡಬೇಕು, ಜಿಮ್‌ ಮಾಡಬೇಕು ಎಲ್ಲದರಲ್ಲೂ ಭಾಗಿಯಾಗಬೇಕು. ಹೇರ್‌ಕಟ್‌ ಬಳಿಕ ಅರ್ಜುನ್‌ ಸುಂದರವಾಗಿದ್ದಾನೆ. ನನ್ನ ಸಲೂನ್‌ನಲ್ಲಿ ಸಹಾಯ ಮಾಡಿದ ಮಗಳು ಸಾರಾಗೆ ವಿಶೇಷ ಧನ್ಯವಾದ’ ಎಂದು ಸಚಿನ್‌ ಬರೆದಿದ್ದಾರೆ.

ತಮ್ಮ ಹೇರ್‌ಕಟ್‌ ತಾವೇ ಮಾಡಿಕೊಂಡ ಸಚಿನ್‌ ತೆಂಡುಲ್ಕರ್..!

ಕೊರೋನಾ ವೈರಸ್‌ ಭೀತಿಯಿಂದಾಗಿ ಜಗತ್ತಿನಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಹೀಗಾಗಿ ಎಲ್ಲಾ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಮನೆಯಲ್ಲೇ ಉಳಿದುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಸಚಿನ್ ತೆಂಡುಲ್ಕರ್ ಕೂಡಾ ಇದೀಗ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಮಾಸ್ಟರ್ ಬ್ಲಾಸ್ಟರ್ ಕೂಡಾ ಮನೆಯಲ್ಲೇ ತಮ್ಮ ಹೇರ್‌ ಡ್ರೆಸ್ ಮಾಡಿಕೊಂಡಿದ್ದರು. ಆ ಕ್ಷಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು, ಜತೆಗೆ ಎಲ್ಲರೂ ಮನೆಯಲ್ಲೇ ಇರಿ, ಅನಗತ್ಯವಾಗಿ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರು.