ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಹಲವು ಪ್ರಶ್ನೆಗಳನ್ನು ಎದುರಿಸುತ್ತಿದೆ. ಮೂರನೇ ಟಿ20 ಪಂದ್ಯದಲ್ಲಿ, ಕಳಪೆ ಫಾರ್ಮ್‌ನಲ್ಲಿರುವ ಶುಭ್‌ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಮೇಲೆ ಎಲ್ಲರ ಕಣ್ಣಿದ್ದು, ಇದು ಅವರಿಗೆ ಅಗ್ನಿಪರೀಕ್ಷೆಯಾಗಲಿದೆ.
ಧರ್ಮಶಾಲಾ: ಟಿ20 ವಿಶ್ವಕಪ್‌ಗೆ 2 ತಿಂಗಳಿಗೂ ಕಡಿಮೆ ಸಮಯ ಬಾಕಿ ಉಳಿದಿದ್ದು, ಭಾರತ ತಂಡ ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ ಎನ್ನುವುದು ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಪಂದ್ಯದಲ್ಲಿ ಸ್ಪಷ್ಟವಾಯಿತು. ಆ ಪಂದ್ಯದಲ್ಲಿ ಎದುರಾದ ಸೋಲು, ಈ ವರ್ಷ 17 ಪಂದ್ಯಗಳಲ್ಲಿ ಭಾರತದ ಕೇವಲ 3ನೇ ಸೋಲು ಎನಿಸಿದರೂ ಕೆಲ ಹೊಸ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಭಾನುವಾರ ಇಲ್ಲಿ 3ನೇ ಪಂದ್ಯ ನಡೆಯಲಿದ್ದು, ಎಲ್ಲರ ಕಣ್ಣು ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕ ಶುಭ್‌ಮನ್ ಗಿಲ್ ಮೇಲಿದೆ. ಗಿಲ್ ನಿಜಕ್ಕೂ ಟಿ20 ತಂಡಕ್ಕೆ ಸೂಕ್ತ ಆಯ್ಕೆಯೇ ಅಥವಾ ಯಾವುದಾದರೂ ಒತ್ತಡಕ್ಕೆ ಸಿಲುಕಿ ಅವರನ್ನು ಮೂರೂ ಮಾದರಿಯಲ್ಲಿ ಆಡಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದ್ದು, ಬಹುಶಃ ಈ ಸರಣಿಯಲ್ಲಿ ಉಳಿದಿರುವ 3 ಪಂದ್ಯಗಳು ಗಿಲ್ ಪಾಲಿಗೆ ಅಗ್ನಿಪರೀಕ್ಷೆ ಆಗಬಹುದು.
ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಗಿಲ್:
ಭಾರತ ಟಿ20 ತಂಡದ ಉಪನಾಯಕ ಶುಭ್‌ಮನ್ ಗಿಲ್ ಆರಂಭಿಕರಾಗಿ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಎರಡು ಎಸೆತಗಳಲ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಎರಡನೇ ಟಿ20 ಪಂದ್ಯದಲ್ಲಿ ಗಿಲ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪೆರೇಡ್ ನಡೆಸಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಎಲ್ಲರ ಕಣ್ಣು ಶುಭ್‌ಮನ್ ಗಿಲ್ ಅವರ ಮೇಲಿದೆ. ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟು ಗಿಲ್‌ಗೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಗಿಲ್ ಮೇಲೆ ಸಾಕಷ್ಟು ಒತ್ತಡವಿದೆ.
ತಲೆನೋವಾದ ಸೂರ್ಯಕುಮಾರ್ ಯಾದವ್ ಫಾರ್ಮ್:
ಇನ್ನು ಸೂರ್ಯಕುಮಾರ್ ಯಾದವ್ ಕೂಡಾ ಕಳೆದೊಂದು ವರ್ಷದಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಎಂಟು ಬಾರಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ಗೆ ಕೇವಲ 8 ಪಂದ್ಯಗಳಷ್ಟೇ ಬಾಕಿಯಿದ್ದು, ಅದಕ್ಕೂ ಮುನ್ನ ಫಾರ್ಮ್ ಕಂಡುಕೊಳ್ಳಬೇಕಿರುವುದು ಸೂರ್ಯ ಮುಂದಿರುವ ದೊಡ್ಡ ಸವಾಲಾಗಿದೆ.
ಭಾರತ ಪುಟಿದೇಳುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆದರೆ ಕಳೆದ ಪಂದ್ಯದಲ್ಲಿ ಡೊನೊವನ್ ಫೆರೇರಾ ಪ್ರದರ್ಶಿಸಿದ ಆಟ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಮಾರ್ಕೊ ಯಾನ್ಸನ್‌ರ ಜಾಲವನ್ನು ಭೇದಿಸಲು ಭಾರತೀಯರಿಗೆ ಟಿ20ಯಲ್ಲೂ ಸಾಧ್ಯವಾಗುತ್ತಿಲ್ಲ. ಇನ್ನು ಅಕ್ಷರ್ ಪಟೇಲ್‌ರ ಬ್ಯಾಟಿಂಗ್ ಕ್ರಮಾಂಕ, ಶಿವಂ ದುಬೆ ಇಷ್ಟೊಂದು ಅವಕಾಶಕ್ಕೆ ಅರ್ಹರೇ ಹೀಗೆ ಹಲವು ಪ್ರಶ್ನೆಗಳಿಗೆ ತಂಡ ಉತ್ತರ ಹುಡುಕಬೇಕಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ
ಭಾರತ: ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಏಯ್ಡನ್ ಮಾರ್ಕ್‌ರಮ್(ನಾಯಕ), ಟ್ರಿಸ್ಟನ್ ಸ್ಟಬ್ಸ್, ಡೆವಾಲ್ಡ್ ಬ್ರೇವಿಸ್, ಡೇವಿಡ್ ಮಿಲ್ಲರ್, ಡೆನೊವನ್ ಫೆರೇರಾ, ಜಾರ್ಜ್ ಲಿಂಡೆ, ಮಾರ್ಕೊ ಯಾನ್ಸನ್, ಏನ್ರಿಚ್ ನೋಕಿಯಾ/ಕಾರ್ಬಿನ್ ಬಾಷ್, ಓಟ್ಟಿನೆಲ್ ಬಾರ್ಟ್‌ಮನ್, ಲುಂಗಿ ಎಂಗಿಡಿ
ಪಂದ್ಯ ಆರಂಭ: ಸಂಜೆ 7ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್


