ಟೀಂ ಇಂಡಿಯಾದ 'ದಿ ವಾಲ್' ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್, ತಂದೆಯ ಹಾದಿಯಲ್ಲೇ ಸಾಗಿದ್ದಾರೆ. ಶ್ರೀಲಂಕಾ ಅಂಡರ್-19 ವಿರುದ್ಧದ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾದ ಅನ್ವಯ್, ಭರ್ಜರಿ 87 ರನ್ ಗಳಿಸಿ ತಂಡವನ್ನು ಪಾರುಮಾಡಿದರು. ಇದು ಅವರ ಅಂಡರ್-19 ವೃತ್ತಿಜೀವನದ ಮೊದಲ ಅರ್ಧಶತಕವಾಗಿದೆ.
ಕೊಲಂಬೊ: ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್, ಕ್ರಿಕೆಟ್ ಜಗತ್ತಿನ 'ದಿ ವಾಲ್' ಎಂದೇ ಪ್ರಖ್ಯಾತಿ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ ತಮ್ಮ ದಶಕಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವಾರು ಬಾರಿ ಮೈದಾನದಲ್ಲಿ ಗೋಡೆಯಂತೆ ನಿಂತು ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಇದೀಗ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕೂಡಾ ತಮ್ಮ ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದು, ಭಾರತ ಅಂಡರ್ 19 ಕ್ರಿಕೆಟ್ ತಂಡದ 'ದಿ ವಾಲ್' ಆಗಿ ಹೊರಹೊಮ್ಮಿದ್ದಾರೆ.
ಶ್ರೀಲಂಕಾ ಅಂಡರ್-19 ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಅನ್ವಯ್ ದ್ರಾವಿಡ್ ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದು, ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ. ತಮ್ಮ ಅಂಡರ್-19 ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಅನ್ವಯ್ ದ್ರಾವಿಡ್, ಭಾರತ ಅಂಡರ್-19 ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಭರ್ಜರಿ ಅರ್ಧಶತಕ ಚಚ್ಚಿದ ಅನ್ವಯ್ ದ್ರಾವಿಡ್!
ಹಂಬನ್‌ಟೋಟಾದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಅಂಡರ್-19 ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಭಾರತ ತಂಡವು 18.1 ಓವರ್‌ಗಳಲ್ಲಿ ಕೇವಲ 81 ರನ್‌ಗಳಿಗೆ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದ ಅನ್ವಯ್ ದ್ರಾವಿಡ್, ತಮ್ಮ ಕ್ಲಾಸಿಕ್ ಆಟದ ಮೂಲಕ ಅರ್ಧಶತಕ ಸಿಡಿಸಿ ಗಮನ ಸೆಳೆದರು.
ಅನ್ವಯ್ ದ್ರಾವಿಡ್ ಕೇವಲ 47 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ ಅರ್ಧಶತಕ ಪೂರೈಸಿದರು. ಅಂದಹಾಗೆ ಇದು ಅನ್ವಯ್ ದ್ರಾವಿಡ್ ಅಂಡರ್-19 ಕ್ರಿಕೆಟ್‌ನಲ್ಲಿ ಬಾರಿಸಿದ ಮೊದಲ ಅರ್ಧಶತಕವಾಗಿದೆ. ಆದರೆ ಅನ್ವಯ್ ದ್ರಾವಿಡ್ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ವಿಫಲರಾದರು. ಅಂತಿಮವಾಗಿ ಅನ್ವಯ್ ದ್ರಾವಿಡ್ ಕೇವಲ 67 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಮುಗಿಲೆತ್ತರದ ಸಿಕ್ಸರ್ ನೆರವಿನಿಂದ 87 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸಿದರು. ಇದು ಅನ್ವಯ್ ದ್ರಾವಿಡ್ ಅಂಡರ್-19 ಕ್ರಿಕೆಟ್‌ನಲ್ಲಿ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.
ಅರ್ಜುನ್ ಜತೆ ಸೇರಿ ಶತಕದ ಜತೆಯಾಟವಾಡಿದ ಅನ್ವಯ್:
ತಂಡ ಪ್ರಮುಖ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದಾಗ ಐದನೇ ವಿಕೆಟ್‌ಗೆ ಜತೆಯಾದ ಅನ್ವಯ್ ದ್ರಾವಿಡ್ ಹಾಗೂ ಅರ್ಜುನ್ ರಜಪೂತ್ ಸೇರಿ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ 144 ರನ್‌ಗಳ ಅಮೂಲ್ಯ ಜತೆಯಾಟವಾಡಿತು. ಭಾರತ ತಂಡವನ್ನು 81/4 ರಿಂದ 226/5 ತನಕ ತಂದು ನಿಲ್ಲಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಇನ್ನು ಅರ್ಜುನ್ ರಜಪೂತ್ 76 ರನ್ ಗಳಿಸಿ ರನೌಟ್ ಆದರು. ಅಂತಿಮವಾಗಿ ಭಾರತ ಅಂಡರ್-19 ತಂಡವು 285 ರನ್ ಗಳಿಸಿ ಸರ್ವಪತನ ಕಂಡಿದೆ.
ಪಾದಾರ್ಪಣೆ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಅನ್ವಯ್:
ಅಂದಹಾಗೆ ಅನ್ವಯ್ ದ್ರಾವಿಡ್, ಶ್ರೀಲಂಕಾ ಅಂಡರ್-19 ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ತಮ್ಮ ಚೊಚ್ಚಲ ಪಂದ್ಯದಲ್ಲಿ ಅನ್ವಯ್ ಮ್ಯಾಜಿಕ್ ಮಾಡಲು ವಿಫಲವಾಗಿದ್ದರು. ಅನ್ವಯ್ ದ್ರಾವಿಡ್ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಅನ್ವಯ್ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಅನಾವರಣ ಮಾಡಿದ್ದಾರೆ.


