ಧೋನಿ ಜರ್ಸಿ ನಂಬರ್ ಯಾರಿಗೂ ಲಭ್ಯವಿಲ್ಲ, ನಂ.7ಗೆ ನಿವೃತ್ತಿ ಘೋಷಿಸಿದ ಬಿಸಿಸಿಐ!
ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿ 3 ವರ್ಷಗಳಾದರೂ ಧೋನಿ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಇದೀಗ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಧೋನಿಯ ಜರ್ಸಿ ನಂಬರ್ 7, ಯಾರಿಗೂ ಲಭ್ಯವಿಲ್ಲ. ಕಾರಣ ಧೋನಿ ಜರ್ಸಿ ನಂಬರ್‌ಗೆ ಬಿಸಿಸಿಐ ನಿವೃತ್ತಿ ಘೋಷಿಸಿದೆ. ಜರ್ಸಿ ನಂಬರ್‌ಗೆ ನಿವೃತ್ತಿ ಗೌರವ ಪಡೆದ ಎರಡನೇ ಕ್ರಿಕೆಟಿಗ ಧೋನಿ, ಹಾಗಾದರೆ ಮೊದಲ ಕ್ರಿಕೆಟಿಗ ಯಾರು?
ಮುಂಬೈ(ಡಿ.15) ಮಹೇಂದ್ರ ಸಿಂಗ್ ಧೋನಿ (MS Dhoni) ಭಾರತ ತಂಡ ಕಂಡ ಶ್ರೇಷ್ಠ ನಾಯಕ. 16 ವರ್ಷಗಳ ಕಾಲ ನಂಬರ್-7 ಜೆರ್ಸಿಯನ್ನು ಧರಿಸಿ ಆಟವಾಡಿದ್ದ ಧೋನಿ, ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಭಾರತದ ಪರವಾಗಿ 2019 ರಲ್ಲಿ ಕೊನೆಯ ಆಟವಾಡಿದ್ದರೂ, 15 ಆಗಸ್ಟ್ 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೀಗ ಮೂರು ವರ್ಷಗಳ ಬಳಿಕ ಧೋನಿಗೆ ಗೌರವಾರ್ಥವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಂಬರ್ 7 ಜರ್ಸಿಯನ್ನು ನಿವೃತ್ತಿಗೊಳಿಸಲು ಮುಂದಾಗಿದೆ.
ಸಚಿನ್ ತೆಂಡೂಲ್ಕರ್ ಬಳಿಕ ದೇಶ ಹಾಗೂ ವಿದೇಶದ ಕ್ರಿಕೆಟ್ ಅಭಿಮಾನಿಗಳನ್ನು ಹಿಡಿದಿಟ್ಟ ಕಲವೇ ಕ್ರಿಕೆಟಿಗರ ಪೈಕಿ ಧೋನಿಗೆ ಅಗ್ರಸ್ಥಾನ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಧೋನಿ ಜರ್ಸಿ ನಂಬರ್ 7ನಲ್ಲಿ ಇತರ ಕ್ರಿಕೆಟಿಗರನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಿಲ್ಲ. ನಂಬರ್ 7 ಜರ್ಸಿಗೆ ಗೌರವ ಸೂಚಿಸುವ ಕಾರಣ, ಬಿಸಿಸಿಐ ಜರ್ಸಿ ನಂಬರ್ 7ಗೆ ನಿವೃತ್ತಿಗೊಳಿಸುತ್ತಿದೆ. ಇದರಿಂದ ಜರ್ಸಿ ನಂಬರ್ 7 ಭಾರತ ತಂಡ ಪ್ರತಿನಿಧಿಸುವ ಯಾವುದೇ ಕ್ರಿಕೆಟಿಗನಿಗೆ ಲಭ್ಯವಿಲ್ಲ.
ನನ್ನಿಂದ ಸಾಧ್ಯವಿಲ್ಲ, ಐಪಿಎಲ್ ತಯಾರಿ ಬೆನ್ನಲ್ಲೇ ಎಂಎಸ್ ಧೋನಿ ವಿಡಿಯೋ ವೈರಲ್!
ಧೋನಿ ನಾಯಕತ್ವದಲ್ಲಿ ಭಾರತ 2007ರಲ್ಲಿ ಟಿ20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದಾರೆ. ಐಸಿಸಿ ಮೂರು ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಅನ್ನೋ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಈ ಶ್ರೇಷ್ಠ ನಾಯಕನಿಗೆ ಗೌರವ ಸೂಚಿಸಲು ಧೋನಿ ಜೆರ್ಸಿಯನ್ನು ನಿವೃತ್ತಿಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಈ ರೀತಿ ಜರ್ಸಿ ನಂಬರ್‌ಗೆ ನಿವೃತ್ತಿ ಗೌರವ ಪಡೆದ2ನೇ ಕ್ರಿಕೆಟಿಗ ಧೋನಿ.
BCCI ಜೆರ್ಸಿ ನಿವೃತ್ತಿ ಇದೇ ಮೊದಲಲ್ಲ..!
ಬಿಸಿಸಿಐ ಆಟಗಾರರೊಬ್ಬರ ಜರ್ಸಿಯನ್ನು ನಿವೃತ್ತಿ ಘೋಷಿಸಿದ್ದು ಇದೇ ಮೊದಲ ಬಾರಿಯಲ್ಲ. ಇದಕ್ಕೂ ಮುನ್ನ ಕ್ರಿಕೆಟ್ ದೇವರು (God of Cricket) ಎಂದು ಕರೆಯಲ್ಪಡುವ ಭಾರತದ ಶ್ರೇಷ್ಠ ಬ್ಯಾಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಧರಿಸುತ್ತಿದ್ದ ನಂಬರ್ 10 ಜೆರ್ಸಿಗೂ ಬಿಸಿಸಿಐ ನಿವೃತ್ತಿ ಘೋಷಿಸಿದೆ. ಬಲಗೈ ವೇಗಿ ಶಾರ್ದುಲ್ ಠಾಕೂರ್ ತಮ್ಮ ವೃತ್ತಿಜೀವನದ ಆರಂಭದ ಕೆಲ ಪಂದ್ಯಗಳಲ್ಲಿ 10 ನಂಬರ್ ಜೆರ್ಸಿಯನ್ನು ಧರಿಸಿ ಆಟವಾಡಿದ್ದರು. ಆದರೆ ಅಭಿಮಾನಿಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಸಚಿನ್ ಅವರಿಗೆ ಗೌರವ ಸೂಚಕವಾಗಿ 10 ನಂಬರ್ ಜೆರ್ಸಿಗೆ ನಿವೃತ್ತಿ ಘೋಷಿಸಿತ್ತು.ನಂತರದ ದಿನಗಳಲ್ಲಿ ಶಾರ್ದೂಲ್ ಠಾಕೂರ್ 10 ನಂಬರ್ ಜೆರ್ಸಿ ಬದಲಾಗಿ 54 ನಂಬರ್‌ನ ಜೆರ್ಸಿಯೊಂದಿಗೆ ಕಣಕ್ಕಿಳಿದರು. ಇದೀಗ ಬಿಸಿಸಿಐ ಮತ್ತೋಮ್ಮೆ ಜೆರ್ಸಿಗೆ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳ ಪ್ರೀತಿಯ 'ಥಲಾ' (Thala) ಅಂದರೆ ಧೋನಿಯ ಭಾರತ ತಂಡಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಬಿಸಿಸಿಐ 07 ಸಂಖ್ಯೆಯ ಜೆರ್ಸಿಗೆ ನಿವೃತ್ತಿ ನೀಡಿದೆ.
ಧೋನಿ ಕೆಣಕಿ ಕಂಗೆಟ್ಟ ಟ್ವಿಟರ್ ಬಳಕೆದಾರ, ಕೂಲ್ ಕ್ಯಾಪ್ಟನ್ ಉತ್ತರಕ್ಕೆ ಸೈಲೆಂಟ್!
ಏನಿದು ಜೆರ್ಸಿ ನಿವೃತ್ತಿ ?
ಜೆರ್ಸಿ ನಿವೃತ್ತಿ ಎಂದರೆ, ಆ ಸಂಖ್ಯೆಯ ಜೆರ್ಸಿ ಇನ್ನೂ ಮುಂದೆ ಭಾರತೀಯ ಕ್ರಿಕೆಟ್ ಆಟಗಾರರ ಆಯ್ಕೆಗೆ ಲಭ್ಯವಿರುವುದಿಲ್ಲ. ಭಾರತದ ಮುಂದಿನ ಯಾವುದೇ ಆಟಗಾರರು ಮತ್ತು ಪ್ರಸ್ತುತ ಆಟಗಾರರು ನಂಬರ್-7 ಧೋನಿಯ ಜೆರ್ಸಿ ಮತ್ತು ನಂಬರ್-10 ಸಚಿನ್ ಜೆರ್ಸಿಯನ್ನು ಧರಿಸುವಂತಿಲ್ಲ.
ಸಿಂಧು ಕೆ ಟಿ, ಕುವೆಂಪು ವಿಶ್ವವಿದ್ಯಾಲಯ