ಐಪಿಎಲ್ ಪ್ರತಿ ಪಂದ್ಯದಲ್ಲಿ ಆಯಾ ತಂಡದ ಚಿಯರ್ ಲೀಡರ್ಸ್ ಪಂದ್ಯದಕ್ಕೆ ಮತ್ತಷ್ಟು ಹುರಪು ನೀಡುತ್ತಾರೆ. ಆದರೆ ಇದೇ ಚಿಯರ್‌ಲೀಡರ್ಸ್ ಜೊತೆಗೆ ಕೆಲೆ ಅಭಿಮಾನಿಗಳು ಅನುಚಿತ ವರ್ತನೆ ತೋರಿದ್ದಾರೆ. ಘಟನೆಯ ವಿಡಿಯೋ ಸೆರೆ.
ಲಖನೌ (ಮೇ.24) ಐಪಿಎಲ್ 2026 ಟೂರ್ನಿ ಅಂತಿಮ ಘಟ್ಟ ತಲುಪಿದೆ. ಲೀಗ್ ಪಂದ್ಯಗಳು ಕೊನೆಯ ಹಂತದಲ್ಲಿದೆ. ಇದೀಗ ಪ್ಲೇ ಆಫ್ ಲೆಕ್ಕಾಚಾರಗಳು ಆರಂಭಗೊಂಡಿದೆ. ಇದರ ನಡುವೆ ಕೆಲ ಕೆಟ್ಟ ಅಭಿಮಾನಿಗಳ ವರ್ತನೆಗೆ ಐಪಿಎಲ್ ಹಾಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಲೆ ತಗ್ಗಿಸುವಂತಾಗಿದೆ. ಚಿಯರ್‌ಲೀಡರ್ಸ್ ಜೊತೆ ಅನುಚಿತ ವರ್ತನೆ ತೋರಿದ ಘಟನೆ ನಡೆದಿದೆ. ಕೆಲ ಅಭಿಮಾನಿಗಳ ನಡೆಯಿಂದ ಚಿಯರ್‌ಲೀಡರ್ಸ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮನವಿ ಮಾಡಿದರೂ ಕೇಳದೆ ಅಭಿಮಾನಿಗಳು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಈ ಘಟನೆ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತ ಸ್ಥಳಕ್ಕೆ ಧಾವಿಸಿದ ಲೇಡಿ ಪೊಲೀಸ್ ಅಭಿಮಾನಿಗಳ ಚಳಿ ಬಿಡಿಸಿದ ಘಚನೆ ನಡೆದಿದೆ.

ಚಿಯರ್‌ಲೀಡರ್ಸ್ ಜೊತೆ ಮಾಡಿದ್ದೇನು?
ಲಖನೌ ಸೂಪರ್ ಜೈಂಟ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಅತ್ಯಂತ ಮಹತ್ವದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪಂದ್ಯದ ನಡುವೆ ಚಿಯರ್‌ಲೀಡರ್ಸ್ ತಮ್ಮ ತಂಡಕ್ಕೆ ಬೆಂಬಲ ನೀಡುತ್ತಾ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪಂದ್ಯದ ಆರಂಭದಿದಲೇ ಕೆಲ ಅಭಿಮಾನಿಗಳು ಕೆಟ್ಟ ಕಮೆಂಟ್ ಮಾಡುತ್ತಾ ಸಾಗಿದ್ದಾರೆ. ಬಳಿಕ ತಮ್ಮ ಕೈಯಲ್ಲಿದ್ದ ಜರ್ಸಿ ಎಸೆಯುವುದು, ಮೊಬೈಲ್ ಮೂಲಕ ಝೂಮ್ ಮಾಡಿ ಫೋಟೋ ತೆಗೆಯುವ ಸಾಹಸ ಸೇರಿದಂತೆ ಹಲವು ರೀತಿಯಲ್ಲಿ ಚೀಯರ್‌ಲೀಡರ್ಸ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.
ಚೀಟಿಗಳನ್ನು ಎಸೆಯುವುದು ಸೇರಿದಂತೆ ಹಲವು ರೀತಿಯಲ್ಲಿ ಚೀಯರ್‌ಲೀಡರ್ಸ್‌ಗೆ ಅಡ್ಡಿಪಡಿಸಿದ್ದಾರೆ. ಹಲವು ಬಾರಿ ಚಿಯರ್‌ಲೀಡರ್ಸ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ಹೀಗೆ ಮಾಡಬೇಡಿ ಎಂದು ಕೈಮುಗಿದು ಮನವಿ ಮಾಡಿದೂ ಕೆಲವರು ಕೇಳಿಲ್ಲ. ಮತ್ತೆ ಮತ್ತೆ ಕೆಟ್ಟ ಕೆಲಸ ಮುಂದುವರಿಸಿದ್ದಾರೆ.
ಪಂದ್ಯ ಮಹತ್ವದ ಘಟ್ಟ ತಲುಪುತ್ತಿದ್ದಂತೆ ಅಭಿಮಾನಿಗಳ ವರ್ತನಯೂ ಅತೀರೇಖವಾಗಿದೆ. ಹೀಗಾಗಿ ಚಿಯರ್‌ಲೀಡರ್ಸ್ ಐಪಿಎಲ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ತಕ್ಷಣವೇ ಭದ್ರತಾ ಪಡೆಗೆ ಸೂಚಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಲೇಡಿ ಪೊಲೀಸ್, ಅಭಿಮಾನಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದೇ ವೇಳೆ ಕೆಲ ಅಭಿಮಾನಿಗಳನ್ನು ಹೊರಕ್ಕೆ ಕಳುಹಿಸಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಲೇಡಿ ಪೊಲೀಸ್ ಆಗಮಿಸಿ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಿಸಿಟಿವಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಲೇಡಿ ಪೊಲೀಸ್ ಎಚ್ಚರಿಕೆ ಬಳಿಕ ಚಿಯರ್‌ಲೀಡರ್ಸ್ ನಿಟ್ಟುಸಿರು ಬಿಟ್ಟಿದ್ದಾರೆ. ಇಷ್ಟೇ ಅಲ್ಲ ಇದೇ ಸ್ಥಳದಲ್ಲಿ ಓರ್ವ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಹೀಗಾಗಿ ಕೆಲ ಅಭಿಮಾನಿಗಳು ನೆಟ್ಟಗೆ ಕುಳಿತು ಪಂದ್ಯ ವೀಕ್ಷಿಸಿದ್ದಾರೆ.


