ಗಾಯದಿಂದ ಬಳಲುತ್ತಿರುವ ಕೆ ಎಲ್ ರಾಹುಲ್ ಟೆಸ್ಟ್‌ ವಿಶ್ವಕಪ್‌ನಿಂದ ಔಟ್ಸ್ವತಃ ಈ ವಿಚಾರವನ್ನು ಖಚಿತಪಡಿಸಿದ ಕೆ ಎಲ್ ರಾಹುಲ್ಟೆಸ್ಟ್ ವಿಶ್ವಕಪ್ ಜೂನ್ 07ರಂದ ಆರಂಭ

ಬೆಂಗಳೂರು(ಮೇ.05): ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್‌, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದಷ್ಟೇ ಅಲ್ಲದೇ ಜೂನ್ 07ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸ್ವತಃ ಕೆ ಎಲ್ ರಾಹುಲ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಮೇ 01ರಂದ ಲಖನೌನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಕ್ಷೇತ್ರರಕ್ಷಣೆ ಮಾಡುವ ವೇಳೆ ಕೆ ಎಲ್ ರಾಹುಲ್ ಗಾಯಗೊಂಡು ಮೈದಾನ ತೊರೆದಿದ್ದರು. ಇದೀಗ ಕೆ ಎಲ್ ರಾಹುಲ್, ತೊಡೆ ಸಂದಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಕೃನಾಲ್ ಪಾಂಡ್ಯ, ಲಖನೌ ಸೂಪರ್ ಜೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಕೆ ಎಲ್ ರಾಹುಲ್, ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಭಾವನಾತ್ಮಾಕ ಸಂದೇಶ ರವಾನಿಸಿದ್ದಾರೆ.

ವೈದ್ಯಕೀಯ ಸಿಬ್ಬಂದಿಗಳ ಜತೆ ಸಾಕಷ್ಟು ಸಮಾಲೋಚನೆ ಮಾಡಿದ ಬಳಿಕ ಕೊನೆಗೂ ನಾನು ಶೀಘ್ರದಲ್ಲಿಯೇ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಮುಂಬರುವ ವಾರಗಳಲ್ಲಿ ನಾನು ಪುನಶ್ಚೇತನಗೊಳ್ಳಲು ಹಾಗೂ ಚೇತರಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ. ಇದೊಂದು ಕಠಿಣ ನಿರ್ಧಾರವಾಗಿದ್ದು, ಸಂಪೂರ್ಣ ಗುಣಮುಖರಾಗುವ ನಿಟ್ಟಿನಲ್ಲಿ ಇದೊಂದು ಸರಿಯಾದ ತೀರ್ಮಾನ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ.

View post on Instagram

ಒಂದು ತಂಡದ ನಾಯಕನಾಗಿ, ಇಂಥಹ ಸಂಕಷ್ಟದ ಸಂದರ್ಭದಲ್ಲಿ ತಂಡದ ಜತೆಗಿರಲು ಸಾಧ್ಯವಾಗುತ್ತಿಲ್ಲವಲ್ಲ ಎನ್ನುವ ಬಗ್ಗೆ ನನಗೆ ನೋವಿದೆ. ಆದರೆ ನನಗೆ ನನ್ನ ತಂಡದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ನಮ್ಮ ಹುಡುಗರು ಎಂದಿನಂತೆ ಅತ್ಯುತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ. ನಾನು ನಮ್ಮ ತಂಡದ ಪ್ರತಿ ಪಂದ್ಯವನ್ನು ವೀಕ್ಷಿಸುತ್ತಾ ಹೊರಗಿನಿಂದಲೇ ಚಿಯರ್ ಅಪ್ ಮಾಡುತ್ತೇನೆ ಎಂದು ಕೆ ಎಲ್ ರಾಹುಲ್ ಬರೆದುಕೊಂಡಿದ್ದಾರೆ.

ಮುಂದಿನ ತಿಂಗಳು ಓವಲ್‌ನಲ್ಲಿ ಟೀಂ ಇಂಡಿಯಾ ಆಡಲಿರುವ ಪಂದ್ಯಕ್ಕೂ ಅಲಭ್ಯರಾಗುತ್ತಿರುವುದಕ್ಕೆ ನಿಜಕ್ಕೂ ಬೇಸರವಾಗುತ್ತಿದೆ. ಬ್ಲೂ ಜೆರ್ಸಿ ತೊಟ್ಟು ಭಾರತ ತಂಡವನ್ನು ಪ್ರತಿನಿಧಿಸಲು ಎಷ್ಟು ಸಾಧ್ಯವೋ ಅಷ್ಟು ಬೇಗ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದೇನೆ. ಅದೇ ನನ್ನ ಗುರಿ ಹಾಗೂ ಆಧ್ಯತೆಯಾಗಿದೆ ಎಂದು ರಾಹುಲ್‌ ಬರೆದುಕೊಂಡಿದ್ದಾರೆ.

WTC Final: ಐಪಿಎಲ್‌ನಿಂದ ಹೊರಬಿದ್ದಿರುವ ಕೆ ಎಲ್ ರಾಹುಲ್‌, ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೂ ಡೌಟ್..!

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜತೆಯಾದ ನನ್ನ ಅಭಿಮಾನಿಗಳಿಗೆ, ಲಖನೌ ಸೂಪರ್ ಜೈಂಟ್ಸ್‌ ಮ್ಯಾನೇಜ್‌ಮೆಂಟ್‌, ಬಿಸಿಸಿಐ ಹಾಗೂ ಸಹ ಆಟಗಾರರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಬೆಂಬಲ ಹಾಗೂ ಸಂದೇಶಗಳು ನನಗೆ ಮತ್ತಷ್ಟು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲು ಪ್ರೇರಣೆ ನೀಡಲಿದೆ. ನಾನು ಹಿಂದೆಂದಿಗಿಂತಲೂ ಬಲಿಷ್ಠವಾಗಿಯೇ ಕಮ್‌ಬ್ಯಾಕ್ ಮಾಡಲಿದ್ದೇನೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.

ಕೆ ಎಲ್ ರಾಹುಲ್ ಗಾಯಗೊಂಡು ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವುದು ಲಖನೌ ಸೂಪರ್ ಜೈಂಟ್ಸ್‌ ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಸದ್ಯ ಲಖನೌ ಸೂಪರ್ ಜೈಂಟ್ಸ್‌ ತಂಡವು ಇದುವರೆಗೂ 10 ಐಪಿಎಲ್ ಪಂದ್ಯಗಳನ್ನಾಡಿ 5 ಗೆಲುವು 4 ಸೋಲು ಹಾಗೂ ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ. ಸದ್ಯ ಲಖನೌ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವ ಕುತೂಹಲ ಜೋರಾಗಿದೆ.

ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಭಾರತ ತಂಡದಲ್ಲಿ ಕೆ ಎಲ್ ರಾಹುಲ್ ಸ್ಥಾನ ಪಡೆದಿದ್ದರು. ಇದೀಗ ಕೆ ಎಲ್ ರಾಹುಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅಲಭ್ಯರಾಗಿದ್ದು, ರಾಹುಲ್ ಬದಲಿಗೆ ಬಿಸಿಸಿಐ ಯಾವ ಆಟಗಾರನ್ನು ಆಯ್ಕೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.