2026ರ ಐಪಿಎಲ್‌ ಸೀಸನ್‌ಗೆ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಸೇರಿಸಿಕೊಂಡಿದೆ. ಪಿಎಸ್‌ಎಲ್ ತೊರೆದು ಕೆಕೆಆರ್ ಸೇರುತ್ತಿರುವ ಮುಜರಬಾನಿ, ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಕೋಲ್ಕತಾ: 2026ರ ಐಪಿಎಲ್ ಸೀಸನ್ ಶುರುವಾಗಲು ಇನ್ನು ಎರಡೇ ವಾರ ಬಾಕಿ ಇದೆ. ಈ ಹೊತ್ತಲ್ಲೇ, ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆಯ ಫಾಸ್ಟ್ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಫ್ರಾಂಚೈಸಿ ಈ ಸುದ್ದಿಯನ್ನು ಮಾರ್ಚ್ 13, ಶುಕ್ರವಾರದಂದು ಅಧಿಕೃತವಾಗಿ ಖಚಿತಪಡಿಸಿದೆ. ಮುಜರಬಾನಿ ಮಾರ್ಚ್ 17ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ. ಇತ್ತೀಚೆಗೆ ಮುಗಿದ 2026ರ ಟಿ20 ವಿಶ್ವಕಪ್‌ನಲ್ಲಿ 13 ವಿಕೆಟ್ ಪಡೆದು ಮಿಂಚಿದ್ದ ಮುಜರಬಾನಿ, ಐಪಿಎಲ್‌ನಲ್ಲಿ ಆಡಲೆಂದೇ ಪಾಕಿಸ್ತಾನ ಸೂಪರ್ ಲೀಗ್‌ನಿಂದ (PSL) ಹೊರನಡೆದಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೊನೆಯ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಬ್ಲೆಸ್ಸಿಂಗ್ ಮುಜರಬಾನಿ, ಇದೀಗ ಕೋಲ್ಕತಾ ನೈಟ್ ರೈಡರ್ಸ್‌ ತಂಡವನ್ನು ಪ್ರತಿನಿಧಿಸಲು ರೆಡಿಯಾಗಿದ್ದಾರೆ.

6 ಅಡಿ 8 ಇಂಚು ಎತ್ತರದ ಈ ಬಲಗೈ ವೇಗಿ, ತಮ್ಮ ಸ್ಪೀಡ್ ಮತ್ತು ಬೌನ್ಸ್‌ನಿಂದ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ಬೇರೆ ಬೇರೆ ಲೀಗ್‌ಗಳಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಮತೀಶ ಪತಿರಾಣ ಮತ್ತು ಹರ್ಷಿತ್ ರಾಣಾ ಅವರ ಗಾಯದಿಂದಾಗಿ ಸಂಕಷ್ಟದಲ್ಲಿದ್ದ ಕೋಲ್ಕತಾ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಮುಜರಬಾನಿ ಅವರ ಸೇರ್ಪಡೆ ದೊಡ್ಡ ಬಲ ನೀಡಲಿದೆ.

Scroll to load tweet…

ವಿವಾದಗಳ ಬಳಿಕ ಪಿಎಸ್‌ಎಲ್‌ಗೆ ಹೋದ ಮುಸ್ತಫಿಜುರ್

ಕೋಲ್ಕತಾ ತಂಡದಿಂದ ರಿಲೀಸ್ ಆದ ಬೆನ್ನಲ್ಲೇ, ಮುಸ್ತಫಿಜುರ್ ರೆಹಮಾನ್ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಲಾಹೋರ್ ಖಲಂದರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಕಳೆದ ಹರಾಜಿನಲ್ಲಿ ಕೋಲ್ಕತಾ ತಂಡ ಮುಸ್ತಫಿಜುರ್ ಅವರನ್ನು ಬರೋಬ್ಬರಿ 9.20 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದರೆ, ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿ ಘಟನೆಗಳ ನಂತರ, ಅವರು ಐಪಿಎಲ್‌ನಲ್ಲಿ ಆಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ, ಆಟಗಾರನನ್ನು ಕೈಬಿಡುವಂತೆ ಬಿಸಿಸಿಐ ಫ್ರಾಂಚೈಸಿಗೆ ಸೂಚನೆ ನೀಡಿತ್ತು.

Scroll to load tweet…

ಪಿಎಸ್‌ಎಲ್‌ಗೆ ಆಟಗಾರರ ಐಪಿಎಲ್ ಆಸೆ ಮುಳುವಾಯ್ತಾ?

ಒಪ್ಪಂದಕ್ಕೆ ಸಹಿ ಹಾಕಿದ ನಂತರ ಆಟಗಾರರು ಪಿಎಸ್‌ಎಲ್ ತೊರೆದು ಐಪಿಎಲ್‌ಗೆ ಸೇರುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ, ದಕ್ಷಿಣ ಆಫ್ರಿಕಾದ ಆಟಗಾರ ಕಾರ್ಬಿನ್ ಬಾಷ್ ಕೂಡ ಇದೇ ರೀತಿ ಐಪಿಎಲ್‌ಗೆ ಹೋಗಿದ್ದರು. ಈ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಅವರಿಗೆ ಒಂದು ವರ್ಷ ನಿಷೇಧ ಹೇರಿತ್ತು. ಈಗ ಮುಜರಬಾನಿ ಕೂಡ ಪಿಎಸ್‌ಎಲ್ ತೊರೆದಿರುವುದು ಪಾಕ್ ಟೂರ್ನಿಗೆ ದೊಡ್ಡ ಹಿನ್ನಡೆಯಾಗಿದೆ.