ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೋಲ್ಕತಾ ನೈಟ್ ರೈಡರ್ಸ್ ಭರ್ಜರಿ ಪ್ರಯತ್ನ ನಡೆಸುತ್ತಿದೆ. ನಾಯಕತ್ವದ ಭರವಸೆಯೊಂದಿಗೆ KKR, ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆ ನಡೆಸುತ್ತಿದ್ದು, ಈ ಮಹಾ ಟ್ರೇಡಿಂಗ್ ಕುರಿತು ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ಮುಂಬೈ: ಐಪಿಎಲ್ 2027ರ ಸೀಸನ್‌ಗೂ ಮುನ್ನ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸುವಂತಹ ಮತ್ತೊಂದು ದೊಡ್ಡ ಟ್ರೇಡಿಂಗ್‌ಗೆ ವೇದಿಕೆ ಸಿದ್ಧವಾಗ್ತಿದೆ ಅನ್ನೋ ಸುದ್ದಿ ಹರಿದಾಡ್ತಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕೋಲ್ಕತಾ ನೈಟ್ ರೈಡರ್ಸ್ (KKR) ಭರ್ಜರಿ ಪ್ರಯತ್ನ ಶುರುಮಾಡಿದೆ. ಒಂದು ವೇಳೆ ಹಾರ್ದಿಕ್ ತಂಡಕ್ಕೆ ಬಂದರೆ, ಅವರಿಗೆ ನಾಯಕನ ಪಟ್ಟ ನೀಡುವುದಾಗಿ KKR ಭರವಸೆ ನೀಡಿದೆ. ಈ ವಿಚಾರವಾಗಿ ಕೋಲ್ಕತಾ ಮ್ಯಾನೇಜ್‌ಮೆಂಟ್, ಮುಂಬೈ ಇಂಡಿಯನ್ಸ್ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದೆ ಅಂತ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕಳೆದ ಐಪಿಎಲ್ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು. ಹಾರ್ದಿಕ್ ನಾಯಕನಾಗಿ ವಾಪಸ್ ಬಂದ ನಂತರ ಆಡಿದ ಎರಡು ಸೀಸನ್‌ಗಳಲ್ಲಿ, 2025ರಲ್ಲಿ ಮಾತ್ರ ಮುಂಬೈ ಪ್ಲೇಆಫ್‌ಗೆ (ಮೂರನೇ ಸ್ಥಾನ) ತಲುಪಿತ್ತು. ಕಳೆದ ಸೀಸನ್‌ನ ಕಳಪೆ ಪ್ರದರ್ಶನದ ನಂತರ, ಹಾರ್ದಿಕ್ ಮುಂಬೈ ತಂಡವನ್ನು ತೊರೆಯಬಹುದು ಎಂಬ ಸೂಚನೆಗಳು ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಸಿಕ್ಕಿತ್ತು.
ಕಳೆದ ವರ್ಷವೇ ಮುಂಬೈ ಫ್ರಾಂಚೈಸಿ ಸಂಪರ್ಕಿಸಿದ್ದ ಕೆಕೆಆರ್
ಕಳೆದ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತಾ ತಂಡ, ಅಜಿಂಕ್ಯ ರಹಾನೆಗೆ ತಾತ್ಕಾಲಿಕವಾಗಿ ನಾಯಕತ್ವ ನೀಡಿತ್ತು. ಆದರೆ, ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿ ಎರಡರಲ್ಲೂ ರಹಾನೆ ಸಂಪೂರ್ಣ ವಿಫಲರಾದರು. ಭವಿಷ್ಯದ ನಾಯಕನನ್ನಾಗಿ ಯುವ ಆಟಗಾರ ರಿಂಕು ಸಿಂಗ್‌ರನ್ನು KKR ಉಪನಾಯಕನನ್ನಾಗಿ ಮಾಡಿ ಬೆಳೆಸುತ್ತಿದೆ. ಆದರೂ, ತಕ್ಷಣವೇ ತಂಡವನ್ನು ಚಾಂಪಿಯನ್ ಮಾಡುವ ಗುರಿಯೊಂದಿಗೆ ಹಾರ್ದಿಕ್‌ರಂತಹ ಅನುಭವಿ ನಾಯಕ ಬೇಕು ಎಂಬುದು ಕೋಲ್ಕತಾ ಮ್ಯಾನೇಜ್‌ಮೆಂಟ್‌ನ ನಿಲುವು. ಕಳೆದ ಸೀಸನ್ ಕೊನೆಯಲ್ಲೇ KKR, ಮುಂಬೈ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಆದರೆ, ಆಗ ರಿಲಯನ್ಸ್‌ನ ವಾರ್ಷಿಕ ಮಹಾಸಭೆ ಇದ್ದಿದ್ದರಿಂದ ಟ್ರೇಡಿಂಗ್ ಮಾತುಕತೆಗೆ ಹೆಚ್ಚು ಆದ್ಯತೆ ಸಿಕ್ಕಿರಲಿಲ್ಲ. ಇದೀಗ ಕೋಲ್ಕತಾ ಮತ್ತೆ ಮುಂಬೈ ಜೊತೆ ಮಾತುಕತೆಗಳನ್ನು ಚುರುಕುಗೊಳಿಸಿದೆ ಎಂದು ಐಪಿಎಲ್‌ನ ಆಪ್ತ ಮೂಲಗಳು ಪಿಟಿಐಗೆ ತಿಳಿಸಿವೆ.
ಮುಂಬೈ ಅಂಗಳದಲ್ಲಿದೆ ಚೆಂಡು
ಹಾರ್ದಿಕ್‌ಗಾಗಿ ದೊಡ್ಡ ಮೊತ್ತವನ್ನು ನೇರವಾಗಿ ನೀಡಿ ಟ್ರೇಡ್ ಮಾಡಿಕೊಳ್ಳಲು ಕೋಲ್ಕತಾ ಆಸಕ್ತಿ ಹೊಂದಿದೆ. ಆದರೆ, ಮುಂಬೈ ತಂಡಕ್ಕೆ ಹಣ ಬೇಕೋ ಅಥವಾ ಆಟಗಾರರ ಬದಲಾವಣೆ ಬೇಕೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್‌ರನ್ನು ಮುಂಬೈಗೆ ನೀಡಿ, ಬದಲಿಗೆ ಹಾರ್ದಿಕ್‌ರನ್ನು KKRಗೆ ಕೊಡುವ ಒಂದು ಸ್ವಾಪ್ ಡೀಲ್ ಸಾಧ್ಯತೆಯನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಈ ಹಿಂದೆ ಅಂದಾಜಿಸಿದ್ದರು. ಇದೇ ವೇಳೆ, ಹಾರ್ದಿಕ್‌ಗಾಗಿ ರಾಜಸ್ಥಾನ್ ರಾಯಲ್ಸ್ ಕೂಡ ಮುಂಬೈ ಇಂಡಿಯನ್ಸ್ ಅನ್ನು ಸಂಪರ್ಕಿಸಿತ್ತು. ಸೂಪರ್ ಸ್ಟಾರ್ ಯಶಸ್ವಿ ಜೈಸ್ವಾಲ್‌ರನ್ನು ಮುಂಬೈಗೆ ನೀಡಿ, ಹಾರ್ದಿಕ್‌ರನ್ನು ಪಡೆಯುವುದು ರಾಜಸ್ಥಾನ ರಾಯಲ್ಸ್ ಯೋಜನೆಯಾಗಿತ್ತು.
ಆದರೆ, ಈ ಮಾತುಕತೆಗಳು ಮೊದಲ ಹಂತದಲ್ಲೇ ಮುರಿದುಬಿದ್ದವು. ಅಷ್ಟೇ ಅಲ್ಲ, ರಾಜಸ್ಥಾನ ರಾಯಲ್ಸ್ ತಮ್ಮ ದೀರ್ಘಕಾಲದ ನಾಯಕನನ್ನಾಗಿ ಅಸ್ಸಾಂ ಆಟಗಾರ ರಿಯಾನ್ ಪರಾಗ್‌ರನ್ನು ಈಗಾಗಲೇ ಆಯ್ಕೆ ಮಾಡಿದೆ. ಹೀಗಾಗಿ, ಹಾರ್ದಿಕ್‌ಗೆ ಅಲ್ಲಿ ಕ್ಯಾಪ್ಟನ್ಸಿ ಸಿಗುವ ಸಾಧ್ಯತೆ ಕಡಿಮೆ. ನಾಯಕನಾಗಲು ಬಯಸುವ ಹಾರ್ದಿಕ್‌ಗೆ ರಾಜಸ್ಥಾನ್‌ಗಿಂತ ಕೋಲ್ಕತ್ತಾ ನೈಟ್ ರೈಡರ್ಸ್ ಆಫರ್ ಹೆಚ್ಚು ಆಕರ್ಷಕವಾಗಿದೆ. ಐಪಿಎಲ್ ನಿಯಮಗಳ ಪ್ರಕಾರ, ಆಟಗಾರರು ನೇರವಾಗಿ ಫ್ರಾಂಚೈಸಿಗಳೊಂದಿಗೆ ಟ್ರೇಡಿಂಗ್ ಮಾತುಕತೆ ನಡೆಸುವಂತಿಲ್ಲ. ತಂಡಗಳ ನಡುವೆ ಒಪ್ಪಂದವಾದ ನಂತರ, ಆಟಗಾರನ ಒಪ್ಪಿಗೆಯೊಂದಿಗೆ ಮಾತ್ರ ಟ್ರೇಡ್ ಪೂರ್ಣಗೊಳ್ಳುತ್ತದೆ. ಒಂದು ವೇಳೆ ಆಟಗಾರ ನಿರಾಕರಿಸಿದರೆ, ಅವರನ್ನು ಹರಾಜಿಗೆ ಬಿಡಬೇಕಾಗುತ್ತದೆ.


