ಸಂಜು ಸ್ಯಾಮ್ಸನ್‌ಗೆ ಸ್ಥಾನ: ಕೊನೆಗೂ ಖುಷಿಯಾದ ಫ್ಯಾನ್ಸ್..!
ವೆಸ್ಟ್ ಇಂಡೀಸ್ ವಿರುದ್ಧ ಡಿಸೆಂಬರ್ 06ರಿಂದ ಆರಂಭವಾಗಲಿರುವ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ. ಧವನ್ ಗಾಯಗೊಂಡು ಹೊರಬಿದ್ದಿದ್ದರಿಂದ ಅವಕಾಶ ಸ್ಯಾಮ್ಸನ್ ಅರಸಿ ಬಂದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ನ.27]: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಗೆ ಕೊನೆಗೂ ಅದೃಷ್ಟ ಖುಲಾಯಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ಶಿಖರ್ ಧವನ್ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದು, ಇದೀಗ ಕೇರಳ ಕ್ರಿಕೆಟಿಗ ಸಂಜುಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸತತ ಟೀಕೆಗಳ ಬಳಿಕ ಸಂಜು ಸ್ಯಾಮ್ಸನ್ ಆಯ್ಕೆಗೆ ಮುಂದಾದ ಸಮಿತಿ!
2015ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸಂಜು, ಅದಾದ ಬಳಿಕ ನಾಲ್ಕು ವರ್ಷಗಳು ಕಳೆದರೂ ಒಮ್ಮೆಯೂ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲು ಸಫಲರಾಗಿರಲಿಲ್ಲ. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರಾದರೂ ಒಮ್ಮೆಯೂ ಪ್ಲೇಯಿಂಗ್ ಇಲೆವನ್’ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಿರುವ ಒಂದೂ ಅವಕಾಶ ನೀಡದೇ ಸಂಜು ಸ್ಯಾಮ್ಸನ್’ರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಕೈಬಿಡಲಾಗಿತ್ತು. ಆಯ್ಕೆ ಸಮಿತಿಯ ನಿರ್ಧಾರಕ್ಕೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದ ತಿರುವನಂತಪುರಂ ಕ್ಷೇತ್ರದ ಸಂಸದ ಶಶಿ ತರೂರ್, ’ನೀವೆಲ್ಲ ಸಂಜು ಬ್ಯಾಟಿಂಗ್ ಪರೀಕ್ಷಿಸುತ್ತಿದ್ದೀರೋ, ಇಲ್ಲಾ ಆತನ ಹೃದಯವನ್ನೋ’ ಎಂದು ಕಿಡಿಕಾರಿದ್ದರು.
’ನೀವೆಲ್ಲ ಸಂಜು ಬ್ಯಾಟಿಂಗ್ ಪರೀಕ್ಷಿಸುತ್ತಿದ್ದಿರೋ ಇಲ್ಲಾ ಹೃದಯವನ್ನೋ..?’
ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ರಿಷಭ್ ಪಂತ್ ಪದೇ ಪದೇ ವಿಫಲರಾಗುತ್ತಿದ್ದರೂ, ಪಂತ್’ಗೆ ಮತ್ತೆ ಅವಕಾಶ ನೀಡಿದ್ದು ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಕೆಂಗಣಿಗೆ ಗುರಿಯಾಗಿತ್ತು. ಐಪಿಎಲ್ ಹಾಗೂ ಲಿಸ್ಟ್ ’ಎ’ ಸೇರಿದಂತೆ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಸಂಜುಗೆ ಅವಕಾಶ ದಕ್ಕಿರಲಿಲ್ಲ. ಇತ್ತೀಚೆಗಷ್ಟೇ ಮುಕ್ತಾಯವಾದ ವಿಜಯ್ ಹಜಾರೆ ಟ್ರೋಫಿಯಲ್ಲೂ ಸಂಜು ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಇನ್ನು ಡಿಸೆಂಬರ್ 06ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಾದರೂ ಸಂಜು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ವಿಂಡೀಸ್ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಚಾನ್ಸ್!
ಸಂಜುಗೆ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಸಿಕ್ಕಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.