ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ನ ವೈಭವ್ ಸೂರ್ಯವಂಶಿ 97 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ, ಅವರು ಶತಕ ವಂಚಿತರಾಗಿ ಔಟಾದಾಗ, ಎಸ್‌ಆರ್‌ಎಚ್ ಮಾಲೀಕಿ ಕಾವ್ಯಾ ಮಾರನ್ ಕ್ರೀಡಾಸ್ಫೂರ್ತಿ ತೋರದೆ ನೀರಸವಾಗಿ ಪ್ರತಿಕ್ರಿಯಿಸಿದ್ದಾರೆ.
ಚಂಡೀಗಢ (ಮೇ.27): ಐಪಿಎಲ್ 2026ರ ಅತ್ಯಂತ ರೋಚಕ ಎಲಿಮಿನೇಟರ್ ನಾಕೌಟ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ರಾಜಸ್ಥಾನ ರಾಯಲ್ಸ್ (RR) ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಒಂಟಿಯಾಗಿಯೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಹೈದರಾಬಾದ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿದ ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಸನ್‌ರೈಸರ್ಸ್ ಬೌಲಿಂಗ್ ಪಡೆ ಅಕ್ಷರಶಃ ನಡುಗಿಹೋಗಿದೆ. ಈ ಪ್ರಹಾರದಿಂದಾಗಿ ರಾಜಸ್ಥಾನ ರಾಯಲ್ಸ್ ತಂಡವು ಹೈದರಾಬಾದ್ ಮುಂದೆ 244 ರನ್‌ಗಳ ಬೃಹತ್ ಗುರಿಯನ್ನು ಇಟ್ಟಿದೆ. ಆದರೆ, ಈ ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ಔಟಾದಾಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕಿ ಕಾವ್ಯಾ ಮಾರನ್ (Kavya Maran) ನಡೆದುಕೊಂಡ ರೀತಿ ಈಗ ಕ್ರಿಕೆಟ್ ಪ್ರೇಮಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
8 ಓವರ್‌ಗಳಲ್ಲೇ 125 ರನ್ ಚಚ್ಚಿದ ಆರಂಭಿಕ ಜೋಡಿ!
ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ರಾಜಸ್ಥಾನ ಪರ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಆರಂಭದಿಂದಲೇ ಹೈದರಾಬಾದ್ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 8 ಓವರ್‌ಗಳಲ್ಲಿ ಬರೋಬ್ಬರಿ 125 ರನ್‌ಗಳ ಸ್ಫೋಟಕ ಜೊತೆಯಾಟ ಆಡುವ ಮೂಲಕ ಪಂದ್ಯದ ಅರ್ಧ ಭಾಗವನ್ನು ರಾಜಸ್ಥಾನದ ಕಡೆಗೆ ತಿರುಗಿಸಿತ್ತು. ಕಾವ್ಯಾ ಮಾರನ್ ಅವರ ಹೈದರಾಬಾದ್ ತಂಡದ ಬೌಲರ್‌ಗಳ ಸ್ಥಿತಿ ಮೈದಾನದಲ್ಲಿ ಎಷ್ಟು ದಯನೀಯವಾಗಿತ್ತೆಂದರೆ, ಸ್ಟೇಡಿಯಂನಲ್ಲಿದ್ದ ಸನ್‌ರೈಸರ್ಸ್ ಅಭಿಮಾನಿಗಳು ಫುಲ್ ಸೈಲೆಂಟ್ ಆಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲೇ ಪಂದ್ಯ ಕೈತಪ್ಪಿ ಹೋಗುತ್ತಿರುವುದನ್ನು ಕಂಡು ಸ್ಟ್ಯಾಂಡ್ಸ್‌ನಲ್ಲಿ ಕುಳಿತಿದ್ದ ಮಾಲೀಕಿ ಕಾವ್ಯಾ ಮಾರನ್ ಕೂಡ ಮೌನಕ್ಕೆ ಶರಣಾಗಿದ್ದರು.
ಶತಕದ ಸನಿಹದಲ್ಲಿ ಔಟಾದಾಗ ಕಾವ್ಯಾ ಮಾರನ್ ಮಾಡಿದ್ದೇನು?
ಮೊದಲ ಓವರ್‌ನಲ್ಲೇ ಸಿಕ್ಸರ್ ಸಿಡಿಸುವ ಮೂಲಕ ಅಬ್ಬರ ಆರಂಭಿಸಿದ್ದ ವೈಭವ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಆ ನಂತರವೂ ನಿಲ್ಲದ ಅವರ ಬ್ಯಾಟಿಂಗ್ ಚಂಡಮಾರುತ 28 ಎಸೆತಗಳಲ್ಲೇ 97 ರನ್‌ಗಳ ಗಡಿ ತಲುಪಿತ್ತು. ಆದರೆ, 29ನೇ ಎಸೆತದಲ್ಲಿ ದೊಡ್ಡ ಶಾಟ್‌ಗೆ ಕೈಹಾಕಿದ ವೈಭವ್, ಪ್ರಫುಲ್ ಹಿಂಗೆ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ಕೇವಲ 3 ರನ್‌ಗಳಿಂದ ಶತಕ ಹಾಗೂ ಕ್ರಿಸ್ ಗೇಲ್ ಅವರ 2013ರ ದಾಖಲೆಯನ್ನು (30 ಎಸೆತಗಳಲ್ಲಿ ಶತಕ) ಮುರಿಯುವ ಸುವರ್ಣಾವಕಾಶ ತಪ್ಪಿದ್ದಕ್ಕೆ ವೈಭವ್ ತೀವ್ರ ನಿರಾಶೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು.
ಈ ವೇಳೆ ಮೈದಾನದಲ್ಲಿದ್ದ ಹೈದರಾಬಾದ್ ತಂಡದ ಆಟಗಾರರು, ಪ್ರಮುಖವಾಗಿ ಅಭಿಷೇಕ್ ಶರ್ಮಾ ಸೇರಿದಂತೆ ಹಲವರು ವೈಭವ್ ಸೂರ್ಯವಂಶಿ ಅವರ ಈ ಐತಿಹಾಸಿಕ ಇನ್ನಿಂಗ್ಸ್ ಅನ್ನು ಮನಸಾರೆ ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಆದರೆ, ವಿಐಪಿ ಸ್ಟ್ಯಾಂಡ್ಸ್‌ನಲ್ಲಿ ಕುಳಿತಿದ್ದ ಕಾವ್ಯಾ ಮಾರನ್ ಮಾತ್ರ ಕೇವಲ ತಮ್ಮ ಸೀಟಿನಲ್ಲಿ ಹಾಗೇ ಕುಳಿತುಕೊಂಡು, ಮುಖ ಸಣ್ಣಗೆ ಮಾಡಿಕೊಂಡು ಅರೆಮನಸ್ಸಿನಿಂದ ಚಪ್ಪಾಳೆ ತಟ್ಟುತ್ತಿದ್ದರು.
ಟ್ವಿಟರ್, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕಿಡಿ!
ಕಾವ್ಯಾ ಮಾರನ್ ಅವರ ಈ ನೀರಸ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಅವರ ಕ್ರೀಡಾಸ್ಫೂರ್ತಿಯನ್ನು (Sportsmanship) ಪ್ರಶ್ನಿಸಲು ಆರಂಭಿಸಿದ್ದಾರೆ. 'ವೈಭವ್ ಸೂರ್ಯವಂಶಿ ಆಡಿದ್ದು ಒಂದು ಅಸಾಮಾನ್ಯ ಮತ್ತು ಅದ್ಭುತ ಇನ್ನಿಂಗ್ಸ್. ಎದುರಾಳಿ ತಂಡದ ಮಾಲೀಕರಾಗಿದ್ದರೂ ಕಾವ್ಯಾ ಮಾರನ್ ಅವರು ಕನಿಷ್ಠ ಎದ್ದು ನಿಂತು (Stand up and applaud) ಆ ಯುವ ಆಟಗಾರನ ಸಾಹಸಕ್ಕೆ ಗೌರವ ಸೂಚಿಸಬೇಕಿತ್ತು. ಆದರೆ, ಇಷ್ಟು ಸಣ್ಣ ಮನಸ್ಸು ಮಾಡಿದ್ದು ಸರಿಯಲ್ಲ" ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.


