ಕೆಎಸ್‌ಸಿಎ ಆಯೋಜಿಸುವ ಮಹಾರಾಜ ಟ್ರೋಫಿ ಟಿ20ಯಲ್ಲಿ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡಕ್ಕೆ ಕರುಣ್‌ ನಾಯರ್‌ ನಾಯಕರಾಗಿ ಮತ್ತು ಶ್ರೇಯಸ್‌ ಗೋಪಾಲ್‌ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ಜೆರ್ಸಿ ಹಾಗೂ ಥೀಮ್‌ ಸಾಂಗ್‌ ಬಿಡುಗಡೆ ಮಾಡಲಾಗಿದ್ದು, ಜೂ.20ರಿಂದ ಪಂದ್ಯಾವಳಿ ಆರಂಭವಾಗಲಿದೆ.

ಮಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20ಯಲ್ಲಿ ಈ ಬಾರಿ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡದ ನಾಯಕನಾಗಿ ಕರುಣ್‌ ನಾಯರ್‌ ಮತ್ತು ಉಪನಾಯಕನಾಗಿ ಶ್ರೇಯಸ್‌ ಗೋಪಾಲ್‌ ಆಯ್ಕೆಯಾಗಿದ್ದಾರೆ. ಭಾನುವಾರ ಮಂಗಳೂರಿನ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆರ್ಸಿ ಅನಾವರಣ ಮತ್ತು ತಂಡದ ಥೀಮ್‌ ಸಾಂಗ್‌ ಬಿಡುಗಡೆ ಮಾಡಿ, ನಾಯಕರ ಹೆಸರು ಪ್ರಕಟಿಸಲಾಯಿತು. ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡದ ಮಾಲೀಕತ್ವವನ್ನು ಮಾನ್ಯತಾ ಡೆವಲಪ​ರ್ಸ್ ಪಡೆದುಕೊಂಡಿದೆ.

ಮಹಾರಾಜ ಟ್ರೋಫಿ ಎಲ್ಲಿ? ಯಾವಾಗಿನಿಂದ ಆರಂಭ?

ಜೂ.20ರಿಂದ ಜು.12ರ ವರೆಗೆ ಪಂದ್ಯಗಳು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಮೈದಾನಗಳಲ್ಲಿ ನಡೆಯಲಿವೆ. ಕರ್ನಾಟಕ ಸ್ಟೇಟ್‌ ಕ್ರಿಕೆಟ್‌ ಅಸೋಸಿಯೇಶನ್‌ (ಕೆಎಸ್‌ಸಿಎ) ಮಂಗಳೂರು ವಲಯದ ಅಧ್ಯಕ್ಷ ಡಾ.ಶ್ರೀಕಾಂತ್‌ ರೈ ಮಾತನಾಡಿ, ತಳಮಟ್ಟದಿಂದ ಕ್ರಿಕೆಟ್‌ ಉತ್ತೇಜಿಸುವ ಹಾಗೂ ಯುವ ಪ್ರತಿಭೆಗಳನ್ನು ಬೆಳೆಸುವ ಸಲುವಾಗಿ ಮುಂದಿನ ದಿನಗಳಲ್ಲಿ ಶಾಲಾ ಮಟ್ಟದಲ್ಲೇ ಕ್ರಿಕೆಟ್‌ ಆಯೋಜಿಸುವ ಕುರಿತು ಕೆಎಸ್‌ಸಿಎ ಚಿಂತನೆ ನಡೆಸುತ್ತಿದೆ. ಎಂದರು.

ನಟ, ನಿರ್ದೇಶಕ ರೂಪೇಶ್‌ ಶೆಟ್ಟಿ ಮಾತನಾಡಿ, ಕೆ.ಎಲ್‌.ರಾಹುಲ್ ಕ್ರಿಕೆಟ್‌ ಕ್ಷೇತ್ರದಲ್ಲಿ ಮಂಗಳೂರಿಗರಿಗೆ ಮಾದರಿ. ಅವರಂತಹ ಪ್ರತಿಭೆಗಳು ಇಲ್ಲಿಂದ ಮೂಡಿಬರಬೇಕು ಎಂಬುದೇ ನಮ್ಮ ಉದ್ದೇಶ ಎಂದರು.

ಕೆಎಸ್‌ಸಿಎ ಖಜಾಂಜಿ ಬಿಎನ್‌ ಮಧುಕರ್‌, ಕೆಎಸ್‌ಸಿಎ ಅವಿನಾಶ್‌ ವೈದ್ಯ, ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ಟೀಮ್‌ ಓನರ್‌ ವಿನೋದ್‌ ನಾಯ್ಡು ಮತ್ತಿತರರು ಇದ್ದರು. ಶರ್ಮಿಳಾ ಸ್ವಾಗತಿಸಿ, ನಿರೂಪಿಸಿದರು.

ತಂಡದ ಆಟಗಾರರು:

ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡದಲ್ಲಿ ಕರುಣ್‌ ನಾಯರ್‌ (ನಾಯಕ), ಶ್ರೇಯಸ್‌ ಗೋಪಾಲ್‌ (ಉಪ ನಾಯಕ), ಧೀರಜ್‌ ಜೆ.ಗೌಡ, ಎಸ್‌ಜೆ ನಿಕಿನ್‌ ಜೋಸ್‌, ಸೂರಜ್‌ ಅಹುಜಾ, ವೆಂಕಟೇಶ್‌ ಎಂ., ಆದರ್ಶ್‌ ಎಸ್‌ಜೆ, ಕುಶಾಲ್‌ ಎಂ ವಾಧ್ವಾನಿ, ಸಿದ್ಧಾರ್ಥ್‌ ಅಖಿಲ್‌, ರಾಜ್ವಿರ್‌ ವಾಧ್ವಾ, ಅನ್ವಯ್‌ ದ್ರಾವಿಡ್‌, ಸಂತೋಖ್‌ ಸಿಂಗ್‌, ಕಾರ್ತಿಕ್ ಸಿಎ, ಕೌಶಿಕ್‌ ವಿ., ಪೃಥ್ವಿರಾಜ್‌ ಶೇಖವತ್‌, ಆರ್ಯ ಜೆ.ಗೌಡ, ಆರೋನ್‌ ಸಿರಿಲ್‌ ಕ್ರಿಸ್ಟಿ, ರತನ್‌ ಬಿ.ಆರ್‌. ಸ್ಥಾನ ಪಡೆದಿದ್ದಾರೆ.