ಕೆಎಸ್‌ಸಿಎ ಆಯೋಜಿಸುತ್ತಿರುವ 5ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಟ್ರೋಫಿಯನ್ನು ರಾಹುಲ್ ದ್ರಾವಿಡ್ ಅನಾವರಣಗೊಳಿಸಿದರು. ಜೂನ್ 20 ರಿಂದ ಆರಂಭವಾಗುವ ಈ ಲೀಗ್, ಐಪಿಎಲ್ ತಂಡಗಳು ಪ್ರತಿಭೆಗಳನ್ನು ಗುರುತಿಸಲು ಒಂದು ಪ್ರಮುಖ ವೇದಿಕೆಯಾಗಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ 5ನೇ ಅವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಟ್ರೋಫಿಯನ್ನು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಿಗ್ಗಜ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌, ಕಾರ್ಯದರ್ಶಿ ಸಂತೋಷ್‌ ಮೆನನ್‌, ಮಾಧ್ಯಮ ವಕ್ತಾಯ ವಿನಯ್‌ ಮೃತ್ಯುಂಜಯ, ಲೀಗ್‌ನ ಆಡಳಿತ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೇಶವ, ತಂಡಗಳ ಮಾಲೀಕರು, ಕೆಎಸ್‌ಸಿಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಬಾರಿ ಲೀಗ್‌ ಜೂ.20ಕ್ಕೆ ಮೈಸೂರಿನಲ್ಲಿ ಆರಂಭಗೊಳ್ಳಲಿದೆ. ಅಲ್ಲಿ ಜೂ.25ರ ವರೆಗೆ 12 ಪಂದ್ಯಗಳು, ಬಳಿಕ ಜೂನ್‌ 27ರಿಂದ ಜುಲೈ 3ರವರೆಗೆ ಹುಬ್ಬಳ್ಳಿಯಲ್ಲಿ 12 ಪಂದ್ಯಗಳು ನಡೆಯಲಿವೆ. ಜು.5ರಿಂದ 12ರ ವರೆಗೆ ಕೊನೆ ಹಂತದ ಪಂದ್ಯಗಳು ಹಾಗೂ ಪ್ಲೇ-ಆಫ್‌, ಫೈನಲ್‌ ಪಂದ್ಯಗಳಿಗೆ ಬೆಂಗಳೂರು ಅತಿಥ್ಯ ವಹಿಸಲಿದೆ. ಲೀಗ್‌ನಲ್ಲಿ 6 ತಂಡಗಳು ಪಾಲ್ಗೊಳ್ಳಲಿವೆ.

ಇಂದಿನಿಂದ ಟಿಕೆಟ್‌ ಮಾರಾಟ:

ಮೈಸೂರು ಚರಣದ ಪಂದ್ಯಗಳ ಟಿಕೆಟ್‌ ಮಾರಾಟ ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿದೆ. ಡಿಸ್ಟ್ರಿಕ್ಟ್‌ ಆ್ಯಪ್‌(District by Zomato)ನಲ್ಲಿ ಟಿಕೆಟ್‌ ಖರೀದಿಸಬಹುದು. ಟಿಕೆಟ್‌ಗೆ ₹100ರಿಂದ ₹250ರ ವರೆಗೆ ದರ ನಿಗದಿಪಡಿಸಲಾಗಿದೆ.

ಲೀಗ್‌ನ ಮೇಲೆ ಐಪಿಎಲ್‌ ಟೀಂಗಳ ಕಣ್ಣಿದೆ: ದ್ರಾವಿಡ್

ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್‌ ದ್ರಾವಿಡ್‌, ಮಹಾರಾಜ ಟ್ರೋಫಿ ಲೀಗ್‌ನ ಮೇಲೆ ಐಪಿಎಲ್‌ ತಂಡಗಳೂ ಕಣ್ಣಿಟ್ಟಿವೆ ಎಂದರು. ‘ಮಹಾರಾಜ ಟ್ರೋಫಿ ಮೂಲಕ ಹಲವು ಪ್ರತಿಭಾನ್ವಿತ ಕ್ರಿಕೆಟಿಗರು ಬೆಳಕಿಗೆ ಬರುತ್ತಿದ್ದಾರೆ. ಅವರಿಗಾಗಿ ಐಪಿಎಲ್‌ ತಂಡಗಳು ಕಾಯುತ್ತಿವೆ. ಕೆಲ ತಂಡಗಳು ನೇರವಾಗಿ ಕ್ರೀಡಾಂಗಣಕ್ಕೆ ಆಗಮಿಸಿ ಆಟಗಾರರನ್ನು ಸ್ಕೌಟ್‌ ಮಾಡುತ್ತಿವೆ. ಇದು ರಾಜ್ಯದ ಹಲವು ಕ್ರಿಕೆಟಿಗರಿಗೆ ಐಪಿಎಲ್‌ ಸೇರಲು ಉಪಯೋಗವಾಗಲಿದೆ. ಕೆಎಸ್‌ಸಿಎ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯಶ್‌ ರಾಜ್‌ ಪೂಂಜಾ ಈಗ ಐಪಿಎಲ್‌ನಲ್ಲೂ ಮಿಂಚುತ್ತಿದ್ದಾರೆ. ಅವರು ಕರ್ನಾಟಕ ತಂಡಕ್ಕೆ ಆಡದಿದ್ದರೂ ಐಪಿಎಲ್‌ಗೆ ಆಯ್ಕೆಯಾಗಲು ಕೆಎಸ್‌ಸಿಎ ಲೀಗ್‌ ಕಾರಣ’ ಎಂದು ಟೂರ್ನಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.