8 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಕರುಣ್ ನಾಯರ್ ಮರಳಿದ್ದಾರೆ. 2022ರಲ್ಲಿ ಕರ್ನಾಟಕ ತಂಡದಿಂದ ಹೊರಬಿದ್ದ ನಂತರ, ತಮ್ಮ ಅಂಡರ್ -25 ತಂಡದ ಕೋಚ್ ಜೊತೆ ತೀವ್ರ ಅಭ್ಯಾಸ ನಡೆಸಿ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. 

ನವದೆಹಲಿ: ತಾರಾ ಕ್ರಿಕೆಟಿಗ ಕರುಣ್ ನಾಯರ್ ಭಾರತ ಟೆಸ್ಟ್ ತಂಡಕ್ಕೆ 8 ವರ್ಷ ಬಳಿಕ ಕಮ್‌ಬ್ಯಾಕ್ ಮಾಡಿದ್ದಾರೆ. ಆದರೆ ಇದಕ್ಕಾಗಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. 2017ರಲ್ಲಿ ಕೊನೆ ಬಾರಿ ಭಾರತ ಪರ ಆಡಿದ್ದ ಕರುಣ್, 2022ರಲ್ಲಿ ಕರ್ನಾಟಕ ತಂಡದಿಂದಲೂ ಹೊರಬಿದ್ದಿದ್ದರು. ಆದರೆ ಕಮ್‌ಬ್ಯಾಕ್ ಮಾಡಲೇಬೇಕೆಂದು ಪಣತೊಟ್ಟಿದ್ದ ಕರುಣ್, ಬಳಿಕ ತಮ್ಮ ಅಂಡರ್ -25 ತಂಡದ ಕೋಚ್ ವಿಜಯ್‌ ಕುಮಾರ್ ಮಧ್ಯಾಲ್ಕರ್ ಜೊತೆ ಅಭ್ಯಾಸ ನಡೆಸಿದ್ದಾರೆ.

ಬೆಂಗಳೂರಿನ ಅಕಾಡೆಮಿಯಲ್ಲಿ6 ತಿಂಗಳ ಕಾಲ ದಿನ ಬಿಟ್ಟು ದಿನ 600 ಎಸೆತ ಎದುರಿಸುತ್ತಿದ್ದರು. 3 ಗಂಟೆ ಕಾಲ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಕೋಚ್ ಹಾಗೂ ಟ್ರೈನರ್ ಜೊತೆಗೆ 'ಕಮ್‌ ಬ್ಯಾಕ್ ಸೀಸನ್' ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ಕೂಡಾ ರಚಿಸಿ, ಚರ್ಚೆ ನಡೆಸುತ್ತಿದ್ದರು. ಇದಾಗಿ ಕೆಲ ತಿಂಗಳ ಬಳಿಕ ಇಂಗ್ಲೆಂಡ್ ಕೌಂಟಿ ಆಡಿದ್ದ ಕರುಣ್ ನಾಯರ್, 2023-24ರಲ್ಲಿ ವಿದರ್ಭ ತಂಡ ಸೇರಿದ್ದರು. ರಣಜಿ, ಹಜಾರೆಯಲ್ಲಿ ಅಬ್ಬರಿಸಿದ ಅವರು, ಈಗ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಟೆಸ್ಟ್‌ ತಂಡಕ್ಕಿಲ್ಲ ಶ್ರೇಯಸ್‌: ವಿರೇಂದ್ರ ಸೆಹ್ವಾಗ್‌ ಟೀಕೆ

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಶ್ರೇಯಸ್‌ ಅಯ್ಯರ್ ಅವರನ್ನು ಭಾರತ ತಂಡದಿಂದ ಕೈಬಿಟ್ಟಿರುವುದಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಸಮಾಧಾನ ವ್ಯಕ್ತಪಡಿಸಿದ್ದು, ‘ಉತ್ತಮ ಲಯದಲ್ಲಿರುವ ಶ್ರೇಯಸ್‌ ಅವರನ್ನು ಎಲ್ಲಾ ಮಾದರಿಯಲ್ಲಿಯೂ ಆಡಿಸಬೇಕು’ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ಶ್ರೇಯಸ್‌ 3 ಮಾದರಿಯಲ್ಲೂ ಆಡಬಹುದು. ಅಯ್ಯರ್‌ರ ವೇಗವಾಗಿ ರನ್‌ ಗಳಿಸುವ ಸಾಮರ್ಥ್ಯ ಇಂಗ್ಲೆಂಡ್‌ ಮೇಲೆ ಒತ್ತಡ ಹೇರಲು ಸಹಾಯ ಮಾಡಬಹುದಿತ್ತು. ನಾನು ಅವರನ್ನು ಟೆಸ್ಟ್‌ ತಂಡದಲ್ಲಿ ನೋಡಲು ಬಯಸುತ್ತೇನೆ. ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಅದೇ ಲಯ ಉಳಿಸಿಕೊಂಡರೆ ಅದು ತಂಡಕ್ಕೆ ಪ್ರಯೋಜನ ನಿಡುತ್ತದೆ’ ಎಂದಿದ್ದಾರೆ.

ಭಾರತದ 18ರ ಪೈಕಿ 10 ಆಟಗಾರರಿಗಿದು ಮೊದಲ ಇಂಗ್ಲೆಂಡ್ ಟೆಸ್ಟ್ ಪ್ರವಾಸ!

ನವದೆಹಲಿ: ಜೂ.20ಕ್ಕೆ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೆ 18 ಮಂದಿಯ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿತ್ತು. ಇದರಲ್ಲಿ ಅನನುಭವಿಗಳೇ ಹೆಚ್ಚಿದ್ದಾರೆ. 10 ಆಟಗಾರರು ಇದೇ ಮೊದಲ ಬಾರಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಆಡಲು ಸಜ್ಜಾಗಿದ್ದಾರೆ.

ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್‌, ಅಭಿಮನ್ಯು ಈಶ್ವರನ್, ನಿತೀಶ್ ಕುಮಾರ್ ರೆಡ್ಡಿ, ಕರುಣ್ ನಾಯರ್, ವಾಷಿಂಗ್ಟನ್ ಸುಂದರ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್, ಅರ್ಶ್‌ದೀಪ್ ಸಿಂಗ್, ಧ್ರುವ್ ಜುರೆಲ್ ಈ ವರೆಗೂ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಆಡಿಲ್ಲ. ಕೇವಲ 8 ಆಟಗಾರರಿಗೆ ಮಾತ್ರ ಇಂಗ್ಲೆಂಡ್ ನೆಲ ದಲ್ಲಿ ಟೆಸ್ಟ್ ಆಡಿದ ಅನುಭವವಿದೆ. ಜಡೇಜಾ (12 ಟೆಸ್ಟ್), ರಾಹುಲ್ (9), ಜಸ್ಪ್ರೀತ್ ಬುಮ್ರಾ (9), ಮೊಹಮ್ಮದ್ ಸಿರಾಜ್ (6), ರಿಷಭ್ ಪಂತ್ (9), ಶಾರ್ದೂಲ್ ಠಾಕೂರ್ (4), ನಾಯಕ ಶುಭ್‌ಮನ್ ಗಿಲ್ (3), ಕುಲೀಪ್ ಯಾದವ್ (1) ಮಾತ್ರ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಆಡಿದ್ದಾರೆ.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.