ಐಪಿಎಲ್‌ನಲ್ಲಿ ನಾಲ್ಕು ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಗುಜರಾತ್ ಟೈಟಾನ್ಸ್ ಸೋತರೆ ಟಾಪ್ 2 ಸ್ಥಾನದಿಂದ ಕೆಳಗೆ ಬೀಳುವ ಸಾಧ್ಯತೆಯಿದೆ. ಪಂಜಾಬ್ ಕಿಂಗ್ಸ್, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ಗೆ ಟಾಪ್ 2 ಸ್ಥಾನ ಪಡೆಯುವ ಅವಕಾಶವಿದೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿವೆ. ಆದರೆ ಟಾಪ್-2ನಲ್ಲಿ ಅರ್ಹತೆ ಪಡೆಯಲು ಈ ನಾಲ್ಕು ತಂಡಗಳ ನಡುವೆ ಪೈಪೋಟಿ ಜೋರಾಗಿದೆ.
ಸದ್ಯ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ಇಂದು ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಈ ಮ್ಯಾಚ್‌ನಲ್ಲಿ ಒಂದು ವೇಳೆ ಗಿಲ್ ಪಡೆ ಸೋಲು ಅನುಭವಿಸಿದರೆ, ಟಾಪ್ 2 ಪಡೆಯುವುದಿರಲಿ, ಟಾಪ್ 4 ಹಂತಕ್ಕೆ ಕುಸಿಯುವ ಭೀತಿಗೆ ಗುಜರಾತ್ ಟೈಟಾನ್ಸ್ ಸಿಲುಕಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಸೋಲು ಅನುಭವಿಸಿದರೆ, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲವೇ ಮುಂಬೈ ಇಂಡಿಯನ್ಸ್ ತಂಡಗಳು ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಲಿದೆ.
ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲು ಗುಜರಾತ್‌ಗೆ ಗೋಲ್ಡನ್ ಚಾನ್ಸ್:
ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಒಂದು ವೇಳೆ ಗುಜರಾತ್ ಟೈಟಾನ್ಸ್ ತಂಡವು ಇಂದಿನ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸಿದರೆ, 20 ಅಂಕ ಸಂಪಾದಿಸಲಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಒಂದು ವೇಳೆ ಸಿಎಸ್‌ಕೆ ಎದುರು ಸೋತರೇ ಗುಜರಾತ್‌ಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಗುಜರಾತ್ ಟೈಟಾನ್ಸ್ ಒಂದು ವೇಳೆ ಸೋತು, ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯಗಳನ್ನು ಜಯಿಸಿದರೆ, ಉಭಯ ತಂಡಗಳು ತಲಾ 19 ಅಂಕಗಳನ್ನು ಹೊಂದಲಿದ್ದು, ಉಭಯ ತಂಡಗಳು ಟಾಪ್ 2 ಪಟ್ಟಿಯೊಳಗೆ ಸ್ಥಾನ ಪಡೆಯಲಿವೆ.
ಹೀಗಾದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇನ್ನು ಮೇ 26ರಂದು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ತಮ್ಮ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇನ್ನು ಆರ್‌ಸಿಬಿ ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಅಂದಹಾಗೆ ಪಂಜಾಬ್ ಕಿಂಗ್ಸ್, ಆರ್‌ಸಿಬಿ ಈ ಎರಡು ತಂಡಗಳು ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದು ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿವೆ.
ಸದ್ಯ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಎರಡು ತಂಡಗಳು ತಲಾ 17 ಅಂಕಗಳನ್ನು ಹೊಂದಿವೆ ಹೀಗಿದ್ದೂ ಪಂಜಾಬ್ ಕಿಂಗ್ಸ್ ಎರಡನೇ ಹಾಗೂ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಯಾಕೆಂದರೆ ಆರ್‌ಸಿಬಿಗಿಂತ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ನೆಟ್ ರನ್‌ರೇಟ್ ಉತ್ತಮವಾಗಿರುವುದರಿಂದ ಎರಡನೇ ಸ್ಥಾನದಲ್ಲಿ ಪಂಜಾಬ್ ಭದ್ರವಾಗಿದೆ. ಕಳೆದ ಪಂದ್ಯದಲ್ಲಿ ಪಂಜಾಬ್, ಡೆಲ್ಲಿ ಎದುರು ರೋಚಕ ಸೋಲು ಅನುಭವಿಸಿತ್ತು.
