Asianet Suvarna News Asianet Suvarna News

Vijay Hazare Trophy 2021 : ಪ್ರಿ ಕ್ವಾರ್ಟರ್ ಗೆ ಕರ್ನಾಟಕ, ಕ್ವಾರ್ಟರ್ ಫೈನಲ್ ಗೆ ತಮಿಳುನಾಡು

ಲೀಗ್ ನ ಅಂತಿಮ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೋಲು ಕಂಡ ಕರ್ನಾಟಕ
ಸೋಲು ಕಂಡರೂ ಬಿ ಗುಂಪಿನ ಅಗ್ರಸ್ಥಾನಿಯಾಗಿ ನೇರವಾಗಿ ಕ್ವಾರ್ಟರ್ ಫೈನಲ್ ಗೇರಿದ ತಮಿಳುನಾಡು
ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕಕ್ಕೆ ರಾಜಸ್ಥಾನ ಎದುರಾಳಿ
 

Karnataka qualifies for pre-quarterfinals in Vijay Hazare Trophy san
Author
Thiruvananthapuram, First Published Dec 14, 2021, 6:51 PM IST

ತಿರುವನಂತಪುರಂ (ಡಿ.14): ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೇರುವ ಸುಲಭ ಅವಕಾಶವನ್ನು ಕೈಚೆಲ್ಲಿದ ಕರ್ನಾಟಕ (Karnataka) ತಂಡ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ದೇಶೀಯ ಏಕದಿನ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಗೆ (pre-quarterfinal) ಲಗ್ಗೆ ಇಟ್ಟಿದೆ. ಎಲೈಟ್ ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾದ ತಮಿಳುನಾಡು (Tamil Nadu) ತಂಡ ಕೂಡ ಕೊನೆಯ ಪಂದ್ಯದಲ್ಲಿ ಸೋಲು ಕಂಡರೂ, ರನ್ ರೇಟ್ ಆಧಾರದಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ರಾಜ್ಯ ತಂಡ ಪ್ರಿ ಕ್ವಾರ್ಟರ್ ಫೈನಲ್‌ ನಲ್ಲಿ ಶನಿವಾರ ರಾಜಸ್ಥಾನ (Rajasthan) ತಂಡವನ್ನು ಜೈಪುರದ (Jaipur) ಕೆಎಲ್ ಸೈನಿ ಸ್ಟೇಡಿಯಂನಲ್ಲಿ ಎದುರಿಸಲಿದ್ದು, ಮುಂದಿನ ಹಂತಕ್ಕೇರುವ ವಿಶ್ವಾಸದಲ್ಲಿದೆ. ಸೇಂಟ್ ಕ್ಸೇವಿಯರ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 4 ವಿಕೆಟ್ ಗಳಿಂದ ಬಂಗಾಳ ತಂಡಕ್ಕೆ ಶರಣಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ನಾಯಕ ಮನೀಷ್ ಪಾಂಡೆ (Manish Pandey) ಉತ್ತಮ ಬ್ಯಾಟಿಂಗ್ ನಿಂದ 8 ವಿಕೆಟ್ ಗೆ 252 ರನ್ ಪೇರಿಸಿತ್ತು. ಪ್ರಿ ಕ್ವಾರ್ಟರ್ ಫೈನಲ್ ಗೇರಲು ಕರ್ನಾಟಕವನ್ನು ದೊಡ್ಡ ಅಂತರದಿಂದ ಮಣಿಸಬೇಕಿದ್ದ ಬಂಗಾಳ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಅಭಿಷೇಕ್ ದಾಸ್ ಹಾಗೂ ನಾಯಕ ಸುದೀಪ್ ಚಟರ್ಜಿ ಅರ್ಧಶತಕದ ಸಾಹಸದಿಂದ 48.3 ಓವರ್ ಗಳಲ್ಲಿ 6 ವಿಕೆಟ್ ಗೆ 253 ರನ್ ಬಾರಿಸಿ ಗೆಲುವು ಕಂಡಿತು.

35 ರನ್ ಬಾರಿಸುವ ವೇಳೆಗೆ ರವಿಕುಮಾರ್ ಸಮರ್ಥ್ (Samarth R) ಹಾಗೂ ಕೆವಿ ಸಿದ್ಧಾರ್ಥ್ (Siddharth) ವಿಕೆಟ್ ಅನ್ನು ಕಳೆದುಕೊಳ್ಳುವ ಮೂಲಕ ಕರ್ನಾಟಕ ತಂಡ ಆತಂಕ ಎದುರಿಸಿತ್ತು. ಈ ಹಂತದಲ್ಲಿ ಆರಂಭಿಕ ಆಟಗಾರ ರೋಹನ್ ಕದಮ್ ಗೆ (Rohan Kadam) ಜೊತೆಯಾದ ನಾಯಕ ಮನೀಷ್‌ ಪಾಂಡೆ 3ನೇ ವಿಕೆಟ್ ಗೆ 57 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.
 


55 ಎಸೆತಗಳಲ್ಲಿ 3  ಬೌಂಡರಿಯೊಂದಿಗೆ 37 ರನ್ ಬಾರಿಸಿದ್ದ ರೋಹನ್ ಕದಮ್, ತಂಡದ ಮೊತ್ತ 100ರ ಗಡಿಯಲ್ಲಿದ್ದಾಗ ನಿರ್ಗಮಿಸಿದರು. ಆ ನಂತರ ಮನೀಷ್ ಪಾಂಡೆ ಗೆ ಕೆಲ ಹೊತ್ತು ಹೆಗಲುಕೊಟ್ಟ ಅನುಭವಿ ಆಟಗಾರ ಕರುಣ್ ನಾಯರ್  (Karun Nair)40 ಎಸೆತಗಳಲ್ಲಿ 2 ಬೌಂಡರಿ ಇದ್ದ 25 ರನ್ ಬಾರಿಸಿದ್ದಲ್ಲದೆ, 4ನೇ ವಿಕೆಟ್ ಗೆ 69 ರನ್ ಜೊತೆಯಾಟವಾಡಿದರು. ನಂತರ ಬಂದ ಶರತ್ ಶ್ರೀನಿವಾಸ್ 17 ರನ್ ಬಾರಿಸಿದರೆ, 85 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ನೊಂದಿಗೆ 90 ರನ್ ಬಾರಿಸಿದ್ದ ಮನೀಷ್ ಪಾಂಡೆ 40ನೇ ಓವರ್ ನಲ್ಲಿ ಔಟಾಗಿ ಹೊರನಡೆದರು. ಇದರಿಂದಾಗಿ ಕೊನೇ 10 ಓವರ್ ಗಳಲ್ಲಿ ಕೇವಲ 62 ರನ್ ಬಾರಿಸಿದ ಕರ್ನಾಟಕ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟಿತು. ಇನ್ನಿಂಗ್ಸ್ ನ ಕೊನೆಯಲ್ಲಿ ಪ್ರವೀಣ್ ದುಬೇ (Praveen Dubey) 29 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಇದ್ದ 37 ರನ್ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದ್ದರು.

Vijay Hazare Trophy 2021 : ಬರೋಡ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ
ಮೊತ್ತ ಬೆನ್ನಟ್ಟಿದ ಬಂಗಾಳ ತಂಡಕ್ಕೆ ಜೆ.ಸುಚಿತ್ ಹಾಗೂ ಪ್ರತೀಕ್ ಜೈನ್ (Prateek Jain) ಆರಂಭದಲ್ಲೇ ಪೆಟ್ಟು ನೀಡಿದರು. ರಂಜತ್ ಸಿಂಗ್ ಹಾಗೂ ಅನುಸ್ಟುಪ್ ಮಜುಂದಾರ್ ವಿಕೆಟ್ ಉರುಳಿಸಿ ರಾಜ್ಯ ತಂಡಕ್ಕೆ ಮೇಲುಗೈ ನೀಡಿದ್ದರು. 51 ರನ್ ಗಳ ಮೊದಲ ವಿಕೆಟ್ ಜೊತೆಯಾಟದ ಬಳಿಕ 24 ರನ್ ಗಳ ಅಂತರದಲ್ಲಿ ಕರ್ನಾಟಕ ತಂಡ ಬಂಗಾಳದ ಮೂರು ವಿಕೆಟ್ ಗಳನ್ನು ಉರುಳಿಸಿತು.

Vijay Hazare Trophy 2021 : ಮುಂಬೈ ತಂಡವನ್ನು ಬಗ್ಗುಬಡಿದ ಕರ್ನಾಟಕ
ಆದರೆ, ನಾಯಕ ಸುದೀಪ್ ಚಟರ್ಜಿ (63)  ಹಾಗೂ ರಿತ್ವಿಕ್ ಚೌಧರಿ (49) 4ನೇ ವಿಕೆಟ್ ಗೆ 113 ರನ್ ಜೊತೆಯಾಟವಾಡುವ ಮೂಲಕ ಕರ್ನಾಟಕ ತಂಡವನ್ನು ಕಾಡಿದರು. ಆವರೆಗೂ ಜಯದ ಕನಸಿನಲ್ಲಿದ್ದ ಕರ್ನಾಟಕ, ಆ ಬಳಿಕ ಹಿನ್ನಡೆ ಕಂಡಿತು. ರಿತ್ವಿಕ್ ಹಾಗೂ ಸುದೀಪ್ ವಿಕೆಟ್ ಗಳನ್ನು ಕೆಲ ರನ್ ಗಳ ಅಂತರದಲ್ಲಿ ಉರುಳಿಸಿದರೂ, ಶಾಬಾಜ್ ಅಹ್ಮದ್(26) ಹಾಗೂ ಸುವಂಕರ್ ಬಾಲ್ (22) ಬಂಗಾಳ ತಂಡದ ಗೆಲುವಿಗೆ ಕಾರಣರಾದರು.

ಬರೋಡ ವಿರುದ್ಧ ಸೋಲು ಕಂಡ ತಮಿಳುನಾಡು
ದಿನದ ಇನ್ನೊಂದು ಪಂದ್ಯದಲ್ಲಿ ಎಲೈಟ್ ಬಿ ಗುಂಪಿನ ಅಗ್ರಸ್ಥಾನಿ ತಮಿಳುನಾಡು ತಂಡವನ್ನು ಬರೋಡ 41 ರನ್ ಗಳಿಂದ ಸೋಲಿಸಿತು. ಅಲ್ಪ ಮೊತ್ತದ ರೋಚಕ ಕದನದಲ್ಲಿ ಬರೋಡ ತಂಡ ಗೆಲುವಿಗೆ ನೀಡಿದ 115 ರನ್ ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾದ ತಮಿಳುನಾಡು ತಂಡ ಕೇವಲ 73 ರನ್ ಗೆ ಆಲೌಟ್ ಆಗಿ ಸೋಲು ಕಂಡಿತು. ಬಿ ಗುಂಪಿನಲ್ಲಿ ತಮಿಳುನಾಡು, ಕರ್ನಾಟಕ, ಬಂಗಾಳ ಹಾಗೂ ಪುದುಚೇರಿ ತಂಡಗಳು ತಲಾ 3 ಗೆಲುವಿನೊಂದಿಗೆ 12 ಅಂಕ ಸಂಪಾದನೆ ಮಾಡಿದರೆ, ಬರೋಡ 8 ಅಂಕ ಹಾಗು ಮುಂಬೈ 4 ಅಂಕ ಸಂಪಾದನೆ ಮಾಡಿತು.

Follow Us:
Download App:
  • android
  • ios