Asianet Suvarna News Asianet Suvarna News

Vijay Hazare Trophy 2021 : ಮುಂಬೈ ತಂಡವನ್ನು ಬಗ್ಗುಬಡಿದ ಕರ್ನಾಟಕ

ರವಿಕುಮಾರ್ ಸಮರ್ಥ್ ಸೂಪರ್ ಬ್ಯಾಟಿಂಗ್
ಬೌಲಿಂಗ್ ನಲ್ಲಿ ಗಮನಸೆಳೆದ ಪ್ರವೀಣ್ ದುಬೇ
ವಿಜಯ್ ಹಜಾರೆ ಟೂರ್ನಿಯಲ್ಲಿ 2ನೇ ಗೆಲುವು ಕಂಡ ಮನೀಷ್ ಪಾಂಡೆ ಟೀಮ್
 

Vijay Hazare Trophy Karnataka defeat defending champion Mumbai san
Author
Tiruvanantapuram, First Published Dec 11, 2021, 6:49 PM IST

ತಿರುವನಂತಪುರಂ (ಡಿ.10): ಹಾಲಿ ಚಾಂಪಿಯನ್ ಮುಂಬೈ (Mumbai) ವಿರುದ್ಧ ಅಧಿಕಾರಯುತ ನಿರ್ವಹಣೆ ತೋರಿದ ಕರ್ನಾಟಕ (Karnataka)  ತಂಡ ವಿಜಯ್ ಹಜಾರೆ ಏಕದಿನ ಟ್ರೋಫಿ (Vijay Hazare Trophy) ಟೂರ್ನಿಯಲ್ಲಿ ಏಳು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ನೀಡಿದ 209 ರನ್ ಗಳ ಸವಾಲನ್ನು 46 ಓವರ್ ಗಳಲ್ಲಿಯೇ ಬೆನ್ನಟ್ಟಿದ ಕರ್ನಾಟಕ ತಂಡ ನಾಲ್ಕು ಅಮೂಲ್ಯ ಅಂಕಗಳನ್ನು ಗಳಿಸುವಲ್ಲಿ ಯಶ ಕಂಡಿತು. ಇದು ಕರ್ನಾಟಕ ತಂಡಕ್ಕೆ ಎಲೈಟ್ ಬಿ ಗುಂಪಿನಲ್ಲಿ 2ನೇ ಗೆಲುವಾಗಿದ್ದರೆ, ಮುಂಬೈ ತಂಡಕ್ಕೆ 2ನೇ ಸೋಲು ಎನಿಸಿದೆ.
ತಿರುವನಂತಪುರದ (Thiruvananthapuram) ಮಂಗಳಾಪುರಂನ (Mangalapuram) ಕೇರಳ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, ಪ್ರವೀಣ್ ದುಬೇ (29ಕ್ಕೆ4) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 9 ವಿಕೆಟ್ ಗೆ 208 ರನ್ ಬಾರಿಸಲಷ್ಟೇ ಯಶ ಕಂಡಿತು. ಪ್ರತಿಯಾಗಿ ಕರ್ನಾಟಕ ತಂಡ 45.3 ಓವರ್ ಗಳಲ್ಲಿ 3 ವಿಕೆಟ್ ಗೆ 211 ರನ್ ಬಾರಿಸಿ ಗೆಲುವು ಕಂಡಿತು.
ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಮೊದಲ ವಿಕೆಟ್ ಗೆ ರವಿಕುಮಾರ್ ಸಮರ್ಥ್ (Samarth R) ಹಾಗೂ ರೋಹನ್ ಕದಮ್ (44) ಉತ್ತಮ ಆರಂಭ ನೀಡಿದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ 25 ಓವರ್ ಗಳಲ್ಲಿ 95 ರನ್ ಕೂಡಿಸಿದ್ದರು. ಈ ಹಂತದಲ್ಲಿದಾಳಿಗಿಳಿದ ತನುಷ್ ಕೋಟಿಯಾನ್, ರೋಹನ್ ಕದಮ್ (Rohan Kadam) ಅವರ ವಿಕೆಟ್ ಉರುಳಿಸುವ ಮೂಲಕ ಮುಂಬೈಗೆ ಮೊದಲ ಯಶ ನೀಡಿದರು. ಆ ನಂತರ ರವಿಕುಮಾರ್ ಸಮರ್ಥ್ ಗೆ ಜೊತೆಯಾದ ಸಿದ್ಧಾರ್ಥ್ ಕೆವಿ (17) ತಂಡದ ಮೊತ್ತ 124 ರನ್ ಆಗುವವರೆಗೂ ಕ್ರೀಸ್ ನಲ್ಲಿದ್ದರು.


ಸಿದ್ಧಾರ್ಥ್ (Siddharth)ಅವರ ನಿರ್ಗಮನದ ಬಳಿಕ ಕ್ರಿಸ್ ಗಿಳಿದ ನಾಯಕ (Manish Pandey)ಮನೀಷ್ ಪಾಂಡೆ (5) ಕೂಡ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಕರ್ನಾಟಕ 134 ರನ್ ಬಾರಿಸಿತ್ತು. ಹಿನ್ನಡೆ ಕಾಣುವ ಹಂತದಲ್ಲಿದ್ದ ವೇಳೆ ಸಮರ್ಥ್ ಗೆ ಜೊತೆಯಾದ ಅನುಭವಿ ಆಟಗಾರ ಕರುಣ್ ನಾಯರ್ (39 ರನ್, 34 ಎಸೆತ, 3 ಬೌಂಡರಿ, 2 ಸಿಕ್ಸರ್) ತಂಡವನ್ನು ಗಡಿ ಮುಟ್ಟಿಸುವವರೆಗೂ ಸಮರ್ಥ್ ಗೆ ಜೊತೆಯಾದರು. ಸಮರ್ಥ್ ಹಾಗೂ ಕರುಣ್ ನಾಯರ್ (Karun Nair) ನಾಲ್ಕನೇ ವಿಕೆಟ್ ಗೆ ಅಮೂಲ್ಯ 77 ರನ್ ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 129 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 96 ರನ್ ಬಾರಿಸಿದ ಕೇವಲ ನಾಲ್ಕು ರನ್ ಗಳಿಂದ ಶತಕ ವಂಚಿತರಾದರು.

Vijay Hazare Trophy: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಸೋಲು
ಇದಕ್ಕೂ ಮುನ್ನ ಮುಂಬೈ ತಂಡಕ್ಕೆ ದೊಡ್ಡ ಮೊತ್ತ ಪೇರಿಸುವಂಥ ಉತ್ತಮ ಆರಂಭವನ್ನು ಯಶಸ್ವಿ ಜೈಸ್ವಾಲ್ (61) ಹಾಗೂ ಅರ್ಮಾನ್ ಜಾಫರ್ (43) ನೀಡಿದ್ದರು. 22.3 ಓವರ್ ಗಳಲ್ಲಿ ಜೈಸ್ವಾಲ್ ಹಾಗೂ ಅರ್ಮಾನ್ ಜೋಡಿ 95 ರನ್ ಜೊತೆಯಾಟವಾಡಿತ್ತು.  ಸುಚಿತ್ ಈ ಜೊತೆಯಾಟವನ್ನು ಬೇರ್ಪಡಿಸಿದ ಬಳಿಕ ಕರ್ನಾಟಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಬೌಲಿಂಗ್ ನಲ್ಲೀ ಮಿಂಚಿದ್ದ ಸಮರ್ಥ್, ಯಶಸ್ವಿ ಜೈಸ್ವಾಲ್ ವಿಕೆಟ್ ಉರುಳಿಸಿದರೆ, ಪ್ರವೀಣ್ ದುಬೇ ಕ್ರಮವಾಗಿ ಸೂರ್ಯಕುಮಾರ್ ಯಾದವ್(Suryakumar Yadav), ಶಮ್ಸ್ ಮುಲಾನಿ (Shams Mulani), ಶಿವಂ ದುಬೆ (Shivam Dube) ಹಾಗೂ ಸಾಯಿರಾಜ್ ಪಾಟೀಲ್ (Sairaj Patil) ಅವರ ವಿಕೆಟ್ ಉರುಳಿಸುವ ಮೂಲಕ ಮುಂಬೈಗೆ ಕಡಿವಾಣ ಹಾಕಿದರು.

Vijay Hazare Trophy: ಪುದುಚೇರಿ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ
53 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೊಂದಿಗೆ 46 ರನ್ ಬಾರಿಸಿದ ವಿಕೆಟ್ ಕೀಪರ್ ಹಾರ್ದಿಕ್ ತಾಮೋರೆ (Hardik Tamore )ಕೊನೆಯವರೆಗೂ ಅಜೇಯವಾಗುಳಿದು ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು.ರಾಜ್ಯ ತಂಡದ ಪರವಾಗಿ ಪ್ರವೀಣ್ ದುಬೆ(Praveen Dubey)ಅಲ್ಲದೆ, ವಿ.ಕೌಶಿಕ್, ಕೆಸಿ ಕಾರ್ಯಪ್ಪ, ಜೆ.ಸುಚಿತ್ ಹಾಗೂ ಸಮರ್ಥ್ ವಿಕೆಟ್ ಉರುಳಿಸಿದರು.

ಬರೋಡ ಮುಂದಿನ ಎದುರಾಳಿ
ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯದಲ್ಲಿ ಭಾನುವಾರ ಬರೋಡ (Baroda) ತಂಡವನ್ನು ಎದುರಿಸಲಿದೆ. ಬಂಗಾಳ ಹಾಗೂ ಮುಂಬೈ ತಂಡದ ವಿರುದ್ಧ ಸೋಲು ಕಂಡಿದ್ದ ಬರೋಡ, ಪುದುಚೇರಿ (Puducherry) ವಿರುದ್ಧ 5 ವಿಕೆಟ್ ಗಳ ಗೆಲುವು ಸಾಧಿಸಿ ಲಯಕ್ಕೆ ಮರಳಿದೆ. ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿಯೇ ಪಂದ್ಯ ನಡೆಯಲಿದೆ.

Follow Us:
Download App:
  • android
  • ios