ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಸತತ 6ನೇ ಜಯ ದಾಖಲಿಸಿದೆ. ಒಡಿಶಾ ವಿರುದ್ಧ ಅಬ್ಬರಿಸಿದ ಕರ್ನಾಟಕ 51 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

ಕಟಕ್‌(ಮಾ.01): ರೋಹನ್‌ ಕದಂ ಆಕರ್ಷಕ 89 ರನ್‌, ಕೆ.ಸಿ.ಕಾರಿಯಪ್ಪ ಹಾಗೂ ವಿ.ಕೌಶಿಕ್‌ರ ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ, ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಒಡಿಶಾ ವಿರುದ್ಧ 51 ರನ್‌ಗಳ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಸತತ 6 ಗೆಲುವು ಸಾಧಿಸಿ, ‘ಡಿ’ ಗುಂಪಿನಲ್ಲಿ 24 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿರುವ ಮನೀಶ್‌ ಪಾಂಡೆ ಪಡೆ ಸೂಪರ್‌ ಲೀಗ್‌ ಹಂತಕ್ಕೆ ಪ್ರವೇಶ ಪಡೆದಿದೆ.

ಇದನ್ನೂ ಓದಿ:ರಾಹುಲ್ ದ್ರಾವಿಡ್ ಮಾರ್ಗದರ್ಶನ ನೆರವಾಯ್ತು-ಕೆ.ಎಲ್.ರಾಹುಲ್!

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟಕರ್ನಾಟಕ, 100 ರನ್‌ ತಲುಪುವ ಮೊದಲೇ 6 ವಿಕೆಟ್‌ ಕಳೆದುಕೊಂಡರೂ, ರೋಹನ್‌ ಏಕಾಂಗಿ ಹೋರಾಟದ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 155 ರನ್‌ಗಳ ಗೌರವ ಮೊತ್ತ ಕಲೆಹಾಕಿತು.

156 ರನ್‌ಗಳ ಗುರಿ ಬೆನ್ನತ್ತಲು ಇಳಿದ ಒಡಿಶಾ, ಮೊದಲ 6 ಓವರ್‌(ಪವರ್‌-ಪ್ಲೇ)ಗಳ ಒಳಗೇ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾಯಿತು. ಮೊದಲ ಓವರ್‌ನಲ್ಲೇ ವಿನಯ್‌ ಕುಮಾರ್‌ ರಾಜೇಶ್‌ ಧೂಪರ್‌ (0) ವಿಕೆಟ್‌ ಕಿತ್ತರು. 3 ಎಸೆತಗಳ ಅಂತರದಲ್ಲಿ ಕೌಶಿಲ್‌ 2 ವಿಕೆಟ್‌ ಕಬಳಿಸಿದರು. ಹಂಗಾಮಿ ನಾಯಕ ಅನುರಾಗ್‌ ಸಾರಂಗಿ (12) ಹಾಗೂ ಸಾತ್ವಿಕ್‌ (08) 4ನೇ ಓವರ್‌ನಲ್ಲಿ ಪೆವಿಲಿಯನ್‌ ಸೇರಿದರು.

ಇದನ್ನೂ ಓದಿ: ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ- ಕೊಹ್ಲಿ, ಧೋನಿಗೆ ಬಡ್ತಿ!

ಸ್ಪಿನ್ನರ್‌ಗಳಾದ ಜೆ.ಸುಚಿತ್‌ ಹಾಗೂ ಕಾರಿಯಪ್ಪ, ಒಡಿಶಾಗೆ ದೊಡ್ಡ ಪೆಟ್ಟು ನೀಡಿದರು. 44 ರನ್‌ ಗಳಿಸುವಷ್ಟರಲ್ಲಿ ತಂಡ 6 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಪ್ರಯಾಸ್‌ ಸಿಂಗ್‌(12) ಹಾಗೂ ಸೂರ್ಯಕಾಂತ್‌ ಪ್ರಧಾನ್‌ (32) 7ನೇ ವಿಕೆಟ್‌ಗೆ 41 ರನ್‌ ಜೊತೆಯಾಟವಾಡಿದರು. ಆದರೆ ಕರ್ನಾಟಕವನ್ನು ಆತಂಕಕ್ಕೀಡು ಮಾಡುವಂತಹ ಹೋರಾಟ ಕಂಡು ಬರಲಿಲ್ಲ. 18.1 ಓವರ್‌ಗಳಲ್ಲಿ ಒಡಿಶಾ 104 ರನ್‌ಗಳಿಗೆ ಆಲೌಟ್‌ ಆಯಿತು. ಕರ್ನಾಟಕದ ಪರ ಕಾರಿಯಪ್ಪ 4 ಓವರ್‌ಗಳಲ್ಲಿ ಕೇವಲ 15 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಕೌಶಿಕ್‌ 8 ರನ್‌ಗೆ 3 ವಿಕೆಟ್‌ ಕಬಳಿಸಿದರು. ಸುಚಿತ್‌ 2, ವಿನಯ್‌ 1 ವಿಕೆಟ್‌ ಪಡೆದರು.

ರೋಹನ್‌ ಹೋರಾಟ: ಮಯಾಂಕ್‌ ಅಗರ್‌ವಾಲ್‌ (10), ಕರುಣ್‌ ನಾಯರ್‌ (10), ಮನೀಶ್‌ ಪಾಂಡೆ (08), ಬಿ.ಆರ್‌.ಶರತ್‌ (01), ಸುಚಿತ್‌ (00), ವಿನಯ್‌ ಕುಮಾರ್‌ (06) ಬ್ಯಾಟಿಂಗ್‌ ವೈಫಲ್ಯದ ಕಾರಣ ಕರ್ನಾಟಕ 96 ರನ್‌ಗೆ 6 ವಿಕೆಟ್‌ ಕಳೆದುಕೊಂಡಿತು. ಆದರೆ ಆರಂಭಿಕ ರೋಹನ್‌ ಹೋರಾಟ ನಿಲ್ಲಿಸಲಿಲ್ಲ. 59 ಎಸೆತಗಳನ್ನು ಎದುರಿಸಿದ ರೋಹನ್‌, 10 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 89 ರನ್‌ ಗಳಿಸಿ 20ನೇ ಓವರ್‌ನಲ್ಲಿ ಔಟಾದರು. ಟೂರ್ನಿಯಲ್ಲಿ ರೋಹನ್‌ಗಿದು 3ನೇ ಅರ್ಧಶತಕ. ತಂಡದ ಪರ 2ನೇ ಗರಿಷ್ಠ ಮೊತ್ತ ದಾಖಲಿಸಿದ್ದು ಶ್ರೇಯಸ್‌ ಗೋಪಾಲ್‌ (17). ಕರ್ನಾಟಕ ಗುಂಪು ಹಂತದ ತನ್ನ ಕೊನೆ ಪಂದ್ಯವನ್ನು ಮಾ.2ರಂದು ಹರ್ಯಾಣ ವಿರುದ್ಧ ಆಡಲಿದ್ದು, ಅಜೇಯವಾಗಿ ಸೂಪರ್‌ ಲೀಗ್‌ ಪ್ರವೇಶಿಸುವ ಉತ್ಸಾಹದಲ್ಲಿದೆ.

ಡಿಆರ್‌ಎಸ್‌ ಇಲ್ಲದಿದ್ದರೂ ಶ್ರೇಯಸ್‌ ಬಚಾವ್‌!

ಕರ್ನಾಟಕದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ವಿಚಿತ್ರ ಪ್ರಸಂಗ ನಡೆಯಿತು. ಪಪ್ಪು ರಾಯ್‌ ಬೌಲಿಂಗ್‌ನಲ್ಲಿ ಶ್ರೇಯಸ್‌ ಗೋಪಾಲ್‌ ವಿರುದ್ಧ ಅಂಪೈರ್‌ ಅಮಿಷ್‌ ಸಾಹೇಬಾ ಎಲ್‌ಬಿ ತೀರ್ಪು ನೀಡಿದರು. ಆದರೆ ಶ್ರೇಯಸ್‌ ಅಸಮ್ಮತಿ ತೋರಿದ ಕಾರಣ, ಅಮಿಷ್‌ ಲೆಗ್‌ ಅಂಪೈರ್‌ ರಾಜೀವ್‌ ಗೋದಾರಾ ಜತೆ ಚರ್ಚೆ ನಡೆಸಿ ಶ್ರೇಯಸ್‌ ಔಟ್‌ ಇಲ್ಲ ಎಂದು ತೀರ್ಪು ಬದಲಿಸಿದರು. ಅಂಪೈರ್‌ ತೀರ್ಪು ಬದಲಿಸಿದ್ದಕ್ಕೆ ಒಡಿಶಾ ಆಟಗಾರರು ಪ್ರತಿಭಟಿಸದೆ ಇದ್ದಿದ್ದು ಅಚ್ಚರಿಗೆ ಕಾರಣವಾಯಿತು.

03

ಈ ಟೂರ್ನಿಯಲ್ಲಿ 3ನೇ ಅರ್ಧಶತಕ ಬಾರಿಸಿದ ರೋಹನ್‌ ಕದಂ.

01

ಟೂರ್ನಿಯಲ್ಲಿ ಸತತ 6 ಪಂದ್ಯಗಳನ್ನು ಗೆದ್ದಿರುವ ಏಕೈಕ ತಂಡ ಕರ್ನಾಟಕ.