ಭಾರತದ ಮಾಜಿ ವೇಗಿ ಹಾಗೂ 'ದಾವಣಗೆರೆ ಎಕ್ಸ್‌ಪ್ರೆಸ್' ಖ್ಯಾತಿಯ ವಿನಯ್ ಕುಮಾರ್ ಕರ್ನಾಟಕ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಯೆರೇ ಗೌಡ್ ಅವರ ಸ್ಥಾನವನ್ನು ತುಂಬಲಿರುವ ವಿನಯ್, ಈ ಹಿಂದೆ ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಹಲವು ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದರು. ಕೆಎಸ್‌ಸಿಎ ವಿವಿಧ ವಯೋಮಿತಿಯ ತಂಡಗಳಿಗೂ ನೂತನ ಕೋಚ್‌ಗಳನ್ನು ನೇಮಿಸಿದೆ.
ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಭಾರತದ ಮಾಜಿ ಕ್ರಿಕೆಟಿಗ, ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ವೇಗಿ ವಿನಯ್ ಕುಮಾರ್ ನೇಮಕಗೊಂಡಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಶಿಫಾರಸ್ಸಿನ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಗುರುವಾರ ಅಧಿಕೃವಾಗಿ ಪ್ರಕಟಿಸಿದೆ.
ಕಳೆದ 2 ವರ್ಷಗಳಿಂದ ಯೆರೇ ಗೌಡ್ ಅವರು ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸ್ಥಾನವನ್ನು ವಿನಯ್ ತುಂಬಲಿದ್ದಾರೆ. ಕರ್ನಾಟಕ ಸತತವಾಗಿ 2 ರಣಜಿ(2013-14, 2014-15), ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿ ಗೆದ್ದಾಗ ತಂಡದ ನಾಯಕನಾಗಿದ್ದ ವಿನಯ್, ಭಾರತದ ಪರ 1 ಟೆಸ್ಟ್, 31 ಏಕದಿನ, 9 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು, ತಂಡದ ಫೀಲ್ಡಿಂಗ್ ಕೋಚ್ ಆಗಿ ದೀಪಕ್ ಚೌಗುಲೆ ಅವರನ್ನು ನೇಮಿಸಲಾಗಿದೆ.
ಅಂಡರ್-23 ಪುರುಷರ ತಂಡಕ್ಕೆ ಗಣೇಶ್ ಸತೀಶ್, ಅಂಡರ್-19 ತಂಡಕ್ಕೆ ಕುನಾಲ್ ಕಪೂರ್, ಅಂಡರ್-16 ತಂಡಕ್ಕೆ ಆದಿತ್ಯ ಸಾಗರ್, ಅಂಡರ್-14 ತಂಡಕ್ಕೆ ಎಂ.ಗುರುಪ್ರಸಾದ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಎಸ್.ಎನ್.ಅಮೀತ್ ಮಹಿಳಾ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಿದ್ದು, ರಕ್ಷಿತಾ ಕೃಷ್ಣಪ್ಪ ಫೀಲ್ಡಿಂಗ್ ಕೋಚ್ ಆಗಿರಲಿದ್ದಾರೆ. ಮಹಿಳಾ ಅಂಡರ್-23 ತಂಡಕ್ಕೂ ಅಮೀತ್, ಅಂಡರ್-19 ತಂಡಕ್ಕೆ ಮುಕುಂದ, ಅಂಡರ್-15 ತಂಡಕ್ಕೆ ಗುರುಪ್ರಸಾದ್ ಕೋಚ್ ಆಗಿರಲಿದ್ದಾರೆ ಎಂದು ಕೆಎಸ್‌ಸಿಎ ತಿಳಿಸಿದೆ.
--ಜು.17ಕ್ಕೇ ಮಾಹಿತಿ ನೀಡಿದ್ದ ಕನ್ನಡಪ್ರಭ
ವಿನಯ್ ರಾಜ್ಯ ತಂಡಕ್ಕೆ ಕೋಚ್ ಆಗಿ ನೇಮಕಗೊಳ್ಳುವ ಬಗ್ಗೆ ಕನ್ನಡಪ್ರಭ ಪತ್ರಿಕೆ ಜುಲೈ 17ರಂದೇ ವರದಿ ಪ್ರಕಟಿಸಿತ್ತು. ಅವರು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಿಂದಾಗಿ ನೇಮಕ ವಿಳಂಬವಾಗುತ್ತಿರುವ ಬಗ್ಗೆ ಜು.18ರಂದು ಮತ್ತೊಂದು ವರದಿ ಪ್ರಕಟಿಸಿತ್ತು.
ಗಾಲೆ ಟೆಸ್ಟ್‌ಗೆ ಭಾರತ ತಂಡದಲ್ಲಿ 3 ಸ್ಪಿನ್ನರ್ಸ್?
ಗಾಲೆ: ಆ.15ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಸುಳಿವು ನೀಡಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಂಡದಲ್ಲಿ ಕುಲ್ದೀಪ್ ಇದ್ದಾರೆ. ಅವರು ನಮ್ಮಲ್ಲಿ ಆಟ್ಯಾಕಿಂಗ್ ಮತ್ತು ಅನುಭವಿ ಸ್ಪಿನ್ನರ್. ಮಾನವ್ ಸುತಾರ್ ಹೆಚ್ಚಿನ ತಿರುವು ಕಂಡುಕೊಳ್ಳುತ್ತಾರೆ. ಜಡೇಜಾ ನಿಖರ ದಾಳಿ ಮಾಡಬಲ್ಲರು. ಹೀಗಾಗಿ, ಈ ವಿಚಾರದಲ್ಲಿ(ಮೂವರು ಸ್ಪಿನ್ನರ್ಸ್ ಆಡಿಸುವುದು) ನಮಗೆ ದೊಡ್ಡ ತಲೆಬಿಸಿ ಇಲ್ಲ. ಅಲ್ಲದೆ, ಸಾಂಪ್ರದಾಯಿಕವಾಗಿ ಗಾಲೆ ಪಿಚ್ ಹೇಗೆ ವರ್ತಿಸುತ್ತದೆ ಎಂಬುದು ನಮಗೆ ಗೊತ್ತಿದೆ’ ಎಂದಿದ್ದಾರೆ.
ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಮೂವರು ಎಡಗೈ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ. ಈ ಬಗ್ಗೆ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಸುಳಿವು. ಜಡೇಜಾ, ಕುಲ್ದೀಪ್ ಜೊತೆ ಮಾನವ್ ಸುತಾರ್‌ಗೆ ಅವಕಾಶ ನಿರೀಕ್ಷೆ.


