ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಸಜ್ಜಾಗಿದ್ದು, ಆಡುವ ಬಳಗದ ಆಯ್ಕೆ ಗೊಂದಲ ಎದುರಾಗಿದೆ. 6ನೇ ಕ್ರಮಾಂಕಕ್ಕೆ ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ನಡುವೆ ಪೈಪೋಟಿ ಇದ್ದರೆ, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಹೆಚ್ಚುವರಿ ಸ್ಪಿನ್ನರ್ ಆಡಿಸಬೇಕೇ ಎಂಬ ಚಿಂತೆಯೂ ತಂಡಕ್ಕಿದೆ.
ಗಾಲೆ: ಭಾರತ ಕ್ರಿಕೆಟ್ ತಂಡದಲ್ಲಿ ಪ್ರತಿ ಸರಣಿ, ಟೂರ್ನಿಯಲ್ಲೂ ಆಯ್ಕೆ ಗೊಂದಲ ಸಾಮಾನ್ಯ. ಆದರೆ ಕೆಲವೊಂದು ಸರಣಿಗಳಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಿಗೆ ಆಟಗಾರರ ನಡುವೆ ಪೈಪೋಟಿ ಕಂಡುಬರುತ್ತದೆ. ಆ.15ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಭಾರತ ತಂಡದಲ್ಲಿ ಕೆಲ ಸ್ಥಾನಗಳಿಗೆ ಆಯ್ಕೆ ಗೊಂದಲು ಎದುರಾಗುವುದು ಖಚಿತ.
ಆರಂಭಿಕ ಆಟಗಾರರ ಸ್ಥಾನ ಈಗಾಗಲೇ ಭದ್ರವಾಗಿದ್ದು, ಯಶಸ್ವಿ ಜೈಸ್ವಾಲ್ ಜೊತೆ ಕನ್ನಡಿಗ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಸಾಯಿ ಸುದರ್ಶನ್ ಗಾಯದಿಂದಾಗಿ ಹೊರಬಿದ್ದಿರುವ ಕಾರಣ, 3ನೇ ಕ್ರಮಾಂಕಕ್ಕೆ ಕರ್ನಾಟಕದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಆಯ್ಕೆಯಾಗುವುದು ಬಹುತೇಕ ಖಚಿತ. ಅವರು ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ನಾಯಕ ಶುಭ್‌ಮನ್ ಗಿಲ್ 4ನೇ ಕ್ರಮಾಂಕದಲ್ಲಿ ಆಡಲಿದ್ದು, 5ನೇ ಬ್ಯಾಟರ್ ಆಗಿ ವಿಕೆಟ್ ಕೀಪರ್ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ.
ಆರನೇ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಗೊಂದಲ
ಆದರೆ 6ನೇ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ತಂಡಕ್ಕೆ ಗೊಂದಲವಿದೆ. ಧ್ರುವ್ ಜುರೆಲ್ ಹಾಗೂ ಸರ್ಫರಾಜ್ ಖಾನ್ ನಡುವೆ ಈ ಸ್ಥಾನಕ್ಕೆ ಪೈಪೋಟಿ ಎದುರಾಗಬಹುದು. ಜುರೆಲ್ ಸದ್ಯ ಭಾರತ ಟೆಸ್ಟ್ ತಂಡದಲ್ಲಿ ನಿಯಮಿತವಾಗಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅವರ ದಾಖಲೆ ಕೂಡಾ ಉತ್ತಮವಾಗಿದೆ. 10 ಟೆಸ್ಟ್‌ಗಳಲ್ಲಿ ಶತಕ ಹಾಗೂ ಅರ್ಧಶತಕ ಸೇರಿದಂತೆ 478 ರನ್ ಕಲೆಹಾಕಿದ್ದಾರೆ. ಆದರೆ ಲಂಕಾ ಸರಣಿಗೆ ಸ್ಪಿನ್ನರ್‌ಗಳ ವಿರುದ್ಧ ದಾಖಲೆಯನ್ನು ಪರಿಗಣಿಸಿದರೆ, 6ನೇ ಕ್ರಮಾಂಕಕ್ಕೆ ಜುರೆಲ್ ಬದಲು ಸರ್ಫರಾಜ್ ಖಾನ್‌ಗೆ ಮಣೆ ಹಾಕುವ ಸಾಧ್ಯತೆಯಿದೆ.
ಜುರೆಲ್‌ಗೆ ಹೋಲಿಸಿದರೆ ಸರ್ಫರಾಜ್ ಸ್ಪಿನ್ನರ್‌ಗಳ ವಿರುದ್ಧ ಉತ್ತಮವಾಗಿ ಆಡುತ್ತಾರೆ. ಜುರೆಲ್ ಲಂಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲೂ ಸ್ಪಿನ್ನರ್‌ಗಳ ವಿರುದ್ಧ ಪರದಾಡಿದ್ದು, ಸುಲಭದಲ್ಲಿ ವಿಕೆಟ್ ಕೈಚೆಲ್ಲಿದ್ದಾರೆ. ಸರ್ಫರಾಜ್ 6 ಟೆಸ್ಟ್ ಆಡಿದ್ದು, 1 ಶತಕ, 3 ಅರ್ಧಶತಕ ಸೇರಿದಂತೆ ಒಟ್ಟು 371 ರನ್ ಗಳಿಸಿದ್ದಾರೆ.
ವೇಗಿ vs ಸ್ಪಿನ್ನರ್?:
ಲಂಕಾದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವುದರಿಂದಾಗಿ ಭಾರತ ಹೆಚ್ಚುವರಿ ಸ್ಪಿನ್ನರ್‌ಗಳನ್ನು ಆಡಿಸುತ್ತದೆಯೇ ಅಥವಾ ಎಂದಿನಂತೆ ಮೂವರು ವೇಗಿಗಳನ್ನು ಆಡಿಸುತ್ತದೆಯೇ ಎಂಬ ಕುತೂಹಲವಿದೆ. ವೇಗದ ಬೌಲಿಂಗ್ ಪಡೆಯನ್ನು ಮೊಹಮ್ಮದ್ ಸಿರಾಜ್ ಮುನ್ನಡೆಸಲಿದ್ದು, ಅವರ ಜೊತೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡಾ ಕಣಕ್ಕಿಳಿಯಬಹುದು. 3ನೇ ವೇಗಿಯನ್ನು ಆಡಿಸಿದರೆ ಗುರ್ನೂರ್ ಬ್ರಾರ್ ಅಥವಾ ಆಖಿಬ್ ನಬಿಗೆ ಸ್ಥಾನ ಸಿಗಬಹುದು.
3ನೇ ವೇಗಿ ಅಗತ್ಯವಿಲ್ಲದಿದ್ದರೆ ಹೆಚ್ಚುವರಿ ಸ್ಪಿನ್ನರ್ ಆಯ್ಕೆ ತಂಡಕ್ಕಿದೆ. ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆಯಲಿದ್ದು, ಅವರ ಜೊತೆ ಮತ್ತೋರ್ವ ಸ್ಪಿನ್ ಆಲ್ರೌಂಡರ್ ಆಗಿ ಸಾರಂಶ್ ಜೈನ್ ಅಥವಾ ಮಾನವ್ ಸುತಾರ್‌ಗೆ ಸ್ಥಾನ ಸಿಗಬಹುದು.
ಗಂಭೀರ್, ಕೋಟಕ್ ಪರಿಶೀಲನೆ ಬೆನ್ನಲ್ಲೇ ಪಿಚ್‌ನ ಹುಲ್ಲಿಗೆ ಕತ್ತರಿ
ಮುಖ್ಯ ಕೋಚ್ ಗಂಭೀರ್ ಹಾಗೂ ಬ್ಯಾಟಿಂಗ್ ಕೋಚ್ ಸಿತಾನ್ಶು ಕೋಟಕ್ ಬುಧವಾರ ಗಾಲೆ ಕ್ರೀಡಾಂಗಣಕ್ಕೆ ಆಗಮಿಸಿ ಪಿಚ್ ಪರಿಶೀಲಿಸಿದರು. ಆದರೆ ಅವರು ಪಿಚ್‌ನಿಂದ ನಿರ್ಗಮಿಸಿದ ಕೆಲ ಗಂಟೆಗಳಲ್ಲೇ ಗಾಲೆ ಪಿಚ್ ಸಿಬ್ಬಂದಿ ಹುಲ್ಲು ಕತ್ತರಿಸುವ ಯಂತ್ರವನ್ನು ಪಿಚ್ ಮೇಲೆ ಹಾಯಿಸಿ, ಅಲ್ಪ ಪ್ರಮಾಣದಲ್ಲಿ ಹುಲ್ಲು ಕತ್ತರಿಸಿದ್ದಾರೆ.


