Asianet Suvarna News Asianet Suvarna News

Vijay Hazare Trophy 2021 : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

ವೈಶಾಕ್ ವಿಜಯ್ ಕುಮಾರ್ ಭರ್ಜರಿ ದಾಳಿ
ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದ ಸಮರ್ಥ್, ಕೆವಿ ಸಿದ್ದಾರ್ಥ್, ಮನೀಷ್ ಪಾಂಡೆ
ರಾಜಸ್ಥಾನ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ

Karnataka Cricket Team storms into Vijay Hazare Trophy quarter Final san
Author
Jaipur, First Published Dec 19, 2021, 4:45 PM IST

ಜೈಪುರ (ಡಿ.19): ಪಂದ್ಯದ ಸರ್ವ ವಿಭಾಗಗಳಲ್ಲೂ ಚಾಂಪಿಯನ್ ತಂಡದ ನಿರ್ವಹಣೆ ತೋರಿದ ಕರ್ನಾಟಕ (Karnataka) ತಂಡ ವಿಜಯ್ ಹಜಾರೆ ಟ್ರೋಫಿ 2021-22 (Vijay Hazare Trophy 2021-22 ) ದೇಶೀಯ ಏಕದಿನ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಯಶಸ್ವಿಯಾಗಿದೆ. ಪ್ರಿ ಕ್ವಾರ್ಟರ್ ಫೈನಲ್ (Pre Quarter Final) ಪಂದ್ಯದಲ್ಲಿ ರಾಜಸ್ಥಾನ (Rajasthan) ತಂಡವನ್ನು 8 ವಿಕೆಟ್ ಗಳಿಂದ ಮಣಿಸುವಲ್ಲಿ ಯಶಸ್ವಿಯಾದ ಕರ್ನಾಟಕ ಅದ್ಭುತ ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ಕಾಲಿಟ್ಟಿದೆ. ಜೈಪುರದ ಕೆಎಲ್ ಸೈನಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಸೋಲಿನ ರುಚಿ ಉಣಿಸಲು ಮನೀಷ್ ಪಾಂಡೆ  (Manish Pandey) ನೇತೃತ್ವದ ಕರ್ನಾಟಕ ತಂಡ ಯಶಸ್ವಿಯಾಯಿತು. ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ ತಂಡ ತಮಿಳುನಾಡು (Tamil Nadu) ಸವಾಲನ್ನು ಎದುರಿಸಲಿದೆ.

ಟಾಸ್ ಗೆದ್ದ ಮನೀಷ್ ಪಾಂಡೆ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಕರ್ನಾಟಕ ತಂಡ, ನಾಯಕ ದೀಪಕ್ ಹೂಡಾ (109 ರನ್ 109 ಎಸೆತ, 9 ಬೌಂಡರಿ, 5 ಸಿಕ್ಸರ್) ಭರ್ಜರಿ ಶತಕದ ಹೊರತಾಗಿಯೂ ಆತಿಥೇಯ ತಂಡವನ್ನು 199 ರನ್ ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ದೀಪಕ್ ಹೂಡಾ ಹೊರತಾಗಿ, ಸಮರ್ಪಿತ್ ಜೋಶಿ (33) ಹಾಗೂ ರವಿ ಬಿಷ್ಣೋಯಿ (17) ಮಾತ್ರವೇ ರಾಜಸ್ಥಾನ ಪರವಾಗಿ ಎರಡಂಕಿ ಮೊತ್ತ ಮುಟ್ಟಿದರು. ರಾಜಸ್ಥಾನ ನೀಡಿದ ಸುಲಭ ಗುರಿಯನ್ನು ಎಚ್ಚರಿಕೆಯಿಂದ ಬೆನ್ನಟ್ಟಿದ ಕರ್ನಾಟಕ 43.4 ಓವರ್ ಗಳಲ್ಲಿ 2 ವಿಕೆಟ್ ಗೆ 204 ರನ್ ಬಾರಿಸಿ ಗೆಲುವು ಕಂಡಿತು. ಆ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು.

ರಾಜ್ಯ ತಂಡದ ಗೆಲುವಿನಲ್ಲಿ ವೈಶಾಕ್ ವಿಜಯ್ ಕುಮಾರ್ (Vijaykumar Vyshak) 22 ರನ್ ಗೆ 4 ವಿಕೆಟ್ ಉರುಳಿಸುವ ಮೂಲಕ ಬೌಲಿಂಗ್ ನಲ್ಲಿ ಮಿಂಚಿದರೆ, ರವಿಕುಮಾರ್ ಸಮರ್ಥ್ (Ravikumar Samarth), ಕೆವಿ ಸಿದ್ಧಾರ್ಥ್ (KV Siddharth)  ಹಾಗೂ ಮನೀಷ್ ಪಾಂಡೆ ಅರ್ಧಶತಕ ಬಾರಿಸುವ ಮೂಲಕ ಸೂಪರ್ ಗೆಲುವಿಗೆ ಕಾರಣರಾದರು.
 


ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ 25 ರನ್ ಬಾರಿಸುವ ವೇಳೆಗೆ ಅಘಾತ ಕಾದಿತ್ತು. ರೋಹನ್ ಕದಮ್ ಬದಲು ತಂಡ ಸೇರಿದ್ದ ದೇವದತ್ ಪಡಿಕ್ಕಲ್ 24 ಎಸೆತಗಳಲ್ಲಿ 4 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಜೊತೆಯಾದ ರವಿಕುಮಾರ್ ಸಮರ್ಥ್ (54 ರನ್, 65 ಎಸೆತ, 7 ಬೌಂಡರಿ) ಹಾಗೂ ಕೆವಿ ಸಿದ್ದಾರ್ಥ್ (85* ರನ್, 120 ಎಸೆತ, 6 ಬೌಂಡರಿ) 2ನೇ ವಿಕೆಟ್ ಗೆ ಆಕರ್ಷಕ 75 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಎಚ್ಚರಿಕೆಯ ಆಟವಾಡುತ್ತಿದ್ದ ಸಮರ್ಥ್, ಅನಿಕೇತ್ ಚೌಧರಿಗೆ ವಿಕೆಟ್ ಒಪ್ಪಿಸಿದ ಬಳಿಕ ಸಿದ್ಧಾರ್ಥ್ ಗೆ ಜೊತೆಯಾದ ನಾಯಕ ಮನೀಷ್ ಪಾಂಡೆ (52*ರನ್, 53 ಎಸೆತ, 4 ಬೌಂಡರಿ, 1 ಸಿಕ್ಸರ್) ಮುರಿಯದ 3ನೇ ವಿಕೆಟ್ ಗೆ 104 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
 
Vijay Hazare Trophy 2021 : ಪ್ರಿ ಕ್ವಾರ್ಟರ್ ಗೆ ಕರ್ನಾಟಕ, ಕ್ವಾರ್ಟರ್ ಫೈನಲ್ ಗೆ ತಮಿಳುನಾಡು
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 19 ರನ್ ಬಾರಿಸುವ ವೇಳೆಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಹಿನ್ನಡೆ ಕಂಡಿತ್ತು. ಇದರಲ್ಲಿ ನಾಲ್ಕು ವಿಕೆಟ್ ಗಳನ್ನು ಉರುಳಿಸಿದ ವೈಶಾಕ್ ವಿಜಯ್ ಕುಮಾರ್, ರಾಜಸ್ಥಾನ ತಂಡಕ್ಕೆ ಘಾತಕ ಪೆಟ್ಟು ನೀಡಿದ್ದರು.  ಈ ವೇಳೆ ನಾಯಕ ದೀಪಕ್ ಹೂಡಾಗೆ (Deepak Hooda) ಜೊತೆಯಾದ ಸಮರ್ಪಿತ್ (Samarpit Joshi) 6ನೇ ವಿಕೆಟ್ ಗೆ 118 ರನ್ ಜೊತೆಯಾಟವಾಡಿ ತಂಡವನ್ನು ಆಧರಿಸಿದರು. ಎಂ. ವೆಂಕಟೇಶ್ (M Venkatesh), ಸಮರ್ಪಿತ್ ಅವರ ವಿಕೆಟ್ ಉರುಳಿಸಿ ಈ ಜೊತೆಯಾಟ ಬೇರ್ಪಡಿಸಿದರು.

Vijay Hazare Trophy: ನಾಕೌಟ್ ಪ್ರವೇಶಿಸುವ ಉತ್ಸಾಹದಲ್ಲಿ ಕರ್ನಾಟಕ
ಆಮೇಲೆ ರಾಜಸ್ಥಾನ ತಂಡದ ಹೋರಾಟ ಬಹ ಹೊತ್ತು ಉಳಿಯಲಿಲ್ಲ. 9ನೇ ವಿಕೆಟ್ ರೂಪದಲ್ಲಿ ದೀಪಕ್ ಹೂಡಾ ಔಟಾಗುವ ವೇಳೆ ವೈಯಕ್ತಿಕ ಶತಕ ಪೂರ್ಣ ಮಾಡಿದ್ದಲ್ಲದೆ, ತಂಡದ ಮೊತ್ತವನ್ನು 190ರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು. ರಾಜ್ಯ ತಂಡದ ಪರವಾಗಿ ವೈಶಾಕ್ ಅಲ್ಲದೆ, ಕೆ. ಗೌತಮ್ 2 ವಿಕೆಟ್ ಉರುಳಿಸಿದರೆ, ಪ್ರಸಿದ್ಧ ಕೃಷ್ಣ, ಪ್ರವೀಣ್ ದುಬೇ ಹಾಗೂ ಎಂ.ವೆಂಕಟೇಶ್ ತಲಾ ಒಂದು ವಿಕೆಟ್ ಉರುಳಿಸಿದರು.

ತಮಿಳುನಾಡು ಕ್ವಾರ್ಟರ್ ಫೈನಲ್ ಎದುರಾಳಿ
ರಾಜ್ಯ ತಂಡ ಕ್ವಾರ್ಟರ್ ಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ತಂಡವನ್ನು ಎದುರಿಸಲಿದೆ. ಮಂಗಳವಾರ ಜೈಪುರದ ಕೆಎಲ್ ಸೈನಿ ಸ್ಟೇಡಿಯಂನಲ್ಲಿಯೇ ಮುಖಾಮುಖಿ ನಡೆಯಲಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ಹಾಗೂ ಇದೇ ಟೂರ್ನಿಯ ಲೀಗ್ ಹಂತದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿ ಕರ್ನಾಟಕ ತಂಡವಿದೆ.

Follow Us:
Download App:
  • android
  • ios