WPL Auction: ಕರ್ನಾಟಕದ ನಾಲ್ವರು ಆಟಗಾರ್ತಿಯರು ಹರಾಜು..! ಆರ್‌ಸಿಬಿ ತೆಕ್ಕೆಗೆ ಇಬ್ಬರು ಕನ್ನಡತಿಯರು
ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಕೇವಲ 4 ಕರ್ನಾಟಕದ ಆಟಗಾರ್ತಿಯರು ಸೇಲ್
ರಾಜ್ಯದ 21 ಆಟಗಾರ್ತಿಯರು ಹರಾಜಿನಲ್ಲಿ ಪಾಲ್ಗೊಂಡಿದ್ದರು
ಆರ್‌ಸಿಬಿ ತಂಡ ಕೂಡಿಕೊಂಡ ಇಬ್ಬರು ಕರ್ನಾಟಕದ ಆಟಗಾರ್ತಿಯರು
ಬೆಂಗಳೂರು(ಫೆ.14): ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಕರ್ನಾಟಕ ರಾಜ್ಯದ 21 ಆಟಗಾರ್ತಿಯರು ಪಾಲ್ಗೊಂಡರೂ ಬಿಕರಿಯಾಗಿದ್ದು ಕೇವಲ ನಾಲ್ವರು. ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ 40 ಲಕ್ಷ ರು.ಗೆ ಯು.ಪಿ.ವಾರಿಯರ್ಸ್ ತಂಡ ಸೇರಿದರೆ, ಭಾರತ ಪರ ಆಡಿರುವ ವೇಗಿ ಮೋನಿಕಾ ಪಟೇಲ್ 30 ಲಕ್ಷ ರು.ಗೆ ಗುಜರಾತ್ ಜೈಂಟ್ಸ್ ಪಾಲಾದರು.
ಇನ್ನು 20 ವರ್ಷದ ಆಲ್ರೌಂಡರ್ ಶ್ರೇಯಾಂಕ ಪಾಟೀಲ್, ಆಲ್ರೌಂಡರ್ ಸಹನಾ ಪವಾರ್‌ರನ್ನು ತಲಾ 10 ಲಕ್ಷ ರು.ಗೆ ಆರ್‌ಸಿಬಿ ಖರೀದಿಸಿತು. ಅನುಭವಿ ವೇದಾ ಕೃಷ್ಣಮೂರ್ತಿ ಹರಾಜಾಗದೆ ಉಳಿದಿದ್ದು ಅಚ್ಚರಿ ಮೂಡಿಸಿತು.
ಇನ್ನು ಆರ್‌ಸಿಬಿ ತಂಡ ಕೂಡಿಕೊಂಡ ಶ್ರೇಯಾಂಕ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ. "ರಾಷ್ಟ್ರೀಯ ಟೂರ್ನಿಯಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದಾಗಿ ಮಹಿಳಾ ಐಪಿಎಲ್ ತಂಡದಲ್ಲಿ ಸ್ಥಾನ ಪಡೆಯುವ ಸಣ್ಣ ಭರವಸೆ ಇತ್ತು. ಆದರೆ ಈಗ ಸಂಭ್ರಮದ ಅಲೆಯಲ್ಲಿ ತೇಲಾಡುತ್ತಿದ್ದೇನೆ. ಇದನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ. ಅದರಲ್ಲೂ ಆರ್‌ಸಿಬಿ ತಂಡ ಸೇರಿದ್ದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ" ಎಂದು ಶ್ರೇಯಾಂಕ ಪಾಟೀಲ್ ಹೇಳಿದ್ದಾರೆ.
ಆರ್‌ಸಿಬಿ ತಂಡದಲ್ಲಿ ‘ನಾಯಕಿ’ಯರ ದಂಡು!
ಆರ್‌ಸಿಬಿ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್, ಟಿ20 ಲೀಗ್‌ಗಳಲ್ಲಿ ತಂಡ ಮುನ್ನಡೆಸಿದ ಅನುಭವವಿರುವ ಅನೇಕ ಆಟಗಾರ್ತಿಯರಿರುವುದು ವಿಶೇಷ. ಸ್ಮೃತಿ ಮಂಧನಾ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಸೋಫಿ ಡಿವೈನ್ ಹಾಲಿ ನ್ಯೂಜಿಲೆಂಡ್ ನಾಯಕಿ, ಎಲೈಸಿ ಪೆರಿ ಮಹಿಳಾ ಬಿಗ್‌ಬ್ಯಾಶ್‌ನಲ್ಲಿ ಸಿಡ್ನಿ ಸ್ಟ್ರೈಕರ್ಸ್ ತಂಡವನ್ನು ಮುನ್ನಡೆಸುತ್ತಾರೆ, ಹೀಥರ್ ನೈಟ್ ಹಾಲಿ ಇಂಗ್ಲೆಂಡ್ ತಂಡದ ನಾಯಕಿ. ಡೇನ್ ವಾನ್ ನೀಕರ್ಕ್ ದಕ್ಷಿಣ ಆಫ್ರಿಕಾದ ಮಾಜಿ ನಾಯಕಿ.
WPL Auction ಆರ್‌ಸಿಬಿ ಪವರ್-ಪ್ಲೇ ಹರಾಜು ಸೂಪರ್..! 5 ಆಟಗಾರ್ತಿಯರಿಗೆ 9 ಕೋಟಿ ರುಪಾಯಿ ಖರ್ಚು
ಹರ್ಮನ್ ಮುಂಬೈ ತಂಡದ ನಾಯಕಿ
ಮುಂಬೈ ಫ್ರಾಂಚೈಸಿ ಹರ್ಮನ್ಪ್ರೀತ್ ಕೌರ್‌ನ್ನು 1.8 ಕೋಟಿ ರು.ಗೆ ಖರೀದಿಸಿ ತಂಡದ ನಾಯಕಿಯನ್ನಾಗಿ ಘೋಷಿಸಿದೆ. ಈಗಾಗಲೇ ಪುರುಷರ ಐಪಿಎಲ್ನಲ್ಲಿ ಮುಂಬೈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಇವರಿಬ್ಬರೂ ಕ್ರಮವಾಗಿ ಭಾರತ ಮಹಿಳಾ, ಪುರುಷ ತಂಡಕ್ಕೂ ನಾಯಕತ್ವ ವಹಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.
ಮಾರ್ಚ್ 4ರಿಂದ ಮೊದಲ ಆವೃತ್ತಿ ಡಬ್ಲ್ಯುಪಿಎಲ್
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾ.4ರಿಂದ 26ರ ವರೆಗೂ ನಡೆಯಲಿದೆ. ಫೈನಲ್ ಸೇರಿ ಒಟ್ಟು 23 ಪಂದ್ಯಗಳು ನಡೆಯಲಿದ್ದು, ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣ ಹಾಗೂ ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಭಾರತ ವಿಶ್ವಕಪ್ ಟೀಂನಲ್ಲಿರುವವರೆಲ್ಲಾ ಸೇಲ್..!
ಟಿ20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾದಲ್ಲಿರುವ ಭಾರತ ಮಹಿಳಾ ತಂಡದ ಆಟಗಾರ್ತಿಯರು ಅಲ್ಲಿನ ಹೋಟೆಲ್ನಲ್ಲಿ ಕುಳಿತು ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಿದರು. ಆಟಗಾರ್ತಿಯರು ವಿವಿಧ ತಂಡಗಳಿಗೆ ಬಿಕರಿಯಾದಾಗ ಒಟ್ಟಾಗಿ ಸಂಭ್ರಮಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಅದರಲ್ಲೂ ಆರಂಭದಲ್ಲೇ ಸ್ಮೃತಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುತ್ತಿದ್ದಂತೆ ಆಟಗಾರ್ತಿಯರು ಕುಣಿದು ಸಂಭ್ರಮಿಸಿದರು. ವಿಶ್ವಕಪ್ ತಂಡದಲ್ಲಿರುವ ಎಲ್ಲಾ 15 ಆಟಗಾರ್ತಿಯರು ಹರಾಜಿನಲ್ಲಿ ಬಿಕರಿಯಾದರು.