ನವದೆಹಲಿ(ಫೆ.26): ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಭಾರತ ತಂಡವನ್ನು ಮಾಜಿ ಆಟಗಾರರು ಹಾಗೂ ವಿಮರ್ಶಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಟೀಂ ಇಂಡಿಯಾ ಎಡವಿದ್ದೆಲ್ಲಿ ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆಯೇ ಭಾರತದ ಮಾಜಿ ನಾಯಕ ಕಪಿಲ್‌ ದೇವ್‌, ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಸತತ 7 ಪಂದ್ಯಗಳನ್ನು ಗೆದ್ದಿದ್ದ ಭಾರತ, ಕಿವೀಸ್‌ ವಿರುದ್ಧ ಮೊದಲ ಸೋಲು ಕಂಡಿದೆ. ಸೋಲಿನ ಕಾರಣ ಹುಡುಕುತ್ತಿರುವ ವೇಳೆಯಲ್ಲಿ ಕಪಿಲ್‌ ದೇವ್‌, ಭಾರತ ಟೆಸ್ಟ್‌ ತಂಡದಿಂದ ಕರ್ನಾಟಕದ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಅವರನ್ನು ಕೈ ಬಿಟ್ಟಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ರಾಹುಲ್‌ ರನ್ನು ತಂಡಕ್ಕೆ ಆಯ್ಕೆ ಮಾಡದ ತಂಡದ ಆಡಳಿತ ಮಂಡಳಿ ಮೇಲೆ ಕಪಿಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಣಜಿ ಟ್ರೋಫಿ: ಸೆಮೀಸ್ ಕಾದಾಟಕ್ಕೆ ಕೆ.ಎಲ್ ರಾಹುಲ್ ಬಲ

ರಾಹುಲ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಸಮಯದಲ್ಲಿ ರಾಹುಲ್‌ರನ್ನು ಟೆಸ್ಟ್‌ ತಂಡದಿಂದ ಕೈಬಿಟ್ಟಿರುವ ಆಡಳಿತ ಮಂಡಳಿಯ ನಿರ್ಧಾರವನ್ನು ಕಪಿಲ್‌ ಪ್ರಶ್ನಿಸಿದ್ದಾರೆ. ಆಟಗಾರರ ಫಾರ್ಮನ್ನು  ಗಮನದಲ್ಲಿಟ್ಟುಕೊಂಡು ತಂಡದ ಆಯ್ಕೆ ಮಾಡಬೇಕೆ ಹೊರತು, ಪಂದ್ಯದ ಮಾದರಿಯನ್ನು ನೋಡಿಕೊಂಡು ಅಲ್ಲ ಎಂದು ಕಪಿಲ್‌ ಖಾರವಾಗಿ ಹೇಳಿದ್ದಾರೆ. ಆಡುವ 11ರ ಬಳಗದಲ್ಲಿ ಪದೇ ಪದೇ ತಂಡವನ್ನು ಬದಲಾಯಿಸಲಾಗುತ್ತಿದೆ. ಪ್ರತಿ ಪಂದ್ಯಕ್ಕೂ ತಂಡದ ಬದಲಾವಣೆ ಮಾಡಿದರೇ ಆಟಗಾರರ ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಒಂದು ಪಂದ್ಯ ಸೋತಿದ್ದಕ್ಕೆ ಆಕಾಶ ಕಳಚಿ ಬೀಳಲ್ಲ: ಕೊಹ್ಲಿ!

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿತ್ತು. ಪೃಥ್ವಿ ಶಾ ಅಲ್ಪ ಮೊತ್ತಕ್ಕೆ 2 ಇನಿಂಗ್‌ಗಳಲ್ಲಿ ವಿಕೆಟ್ ಒಪ್ಪಿಸಿದರು. ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಸಹ ಅರ್ಧಶತಕ ಬಾರಿಸಲೂ ವಿಫಲವಾಗಿದ್ದು ತಂಡದ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಇನ್ನು ಸರಣಿ ಸಮಬಲ ಮಾಡಿಕೊಳ್ಳಬೇಕಿದ್ದರೆ ಟೀಂ ಇಂಡಿಯಾ ಫೆಬ್ರವರಿ 29ರಿಂದ ಕ್ರೈಸ್ಟ್‌ ಚರ್ಚ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯವನ್ನು ಗೆಲ್ಲಲೇನಬೇಕಾದ ಒತ್ತಡಕ್ಕೆ ಸಿಲುಕಿದೆ.