ಬೆಂಗಳೂರು(ಫೆ.25): ಬಂಗಾಳ ವಿರುದ್ಧದ ಸೆಮಿಫೈನಲ್‌ ಪಂದ್ಯಕ್ಕೆ ಸೋಮವಾರ ಕರ್ನಾಟಕ ರಣಜಿ ತಂಡ ಪ್ರಕಟಗೊಂಡಿತು. ತಂಡದಲ್ಲಿ ಟೀಂ ಇಂಡಿಯಾದ ತಾರಾ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಸ್ಥಾನ ಪಡೆದಿದ್ದಾರೆ. ಪವನ್‌ ದೇಶಪಾಂಡೆ ಬದಲಿಗೆ ರಾಹುಲ್‌ಗೆ ಸ್ಥಾನ ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಎದುರು ಕರ್ನಾಟಕ ತಂಡ 167 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಕರ್ನಾಟಕ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಫೆಬ್ರವರಿ 29ರಂದು ಕೋಲ್ಕತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಕರ್ನಾಟಕ ತಂಡವು ಬಂಗಾಳ ವಿರುದ್ಧ ಸೆಣಸಲಿದೆ.

ರಣಜಿ ಟ್ರೋಫಿ: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ತಂಡ: ಕೆ.ಎಲ್‌.ರಾಹುಲ್‌, ದೇವದತ್‌ ಪಡಿಕ್ಕಲ್‌, ಆರ್‌.ಸಮರ್ಥ್, ಮನೀಶ್‌ ಪಾಂಡೆ, ಕರುಣ್‌ ನಾಯರ್‌ (ನಾಯಕ), ಕೆ.ವಿ.ಸಿದ್ಧಾರ್ಥ್, ಕೆ.ಗೌತಮ್‌, ಶರತ್‌ ಶ್ರೀನಿವಾಸ್‌, ಅಭಿಮನ್ಯು ಮಿಥುನ್‌, ಜೆ.ಸುಚಿತ್‌, ಶ್ರೇಯಸ್‌ ಗೋಪಾಲ್‌, ಪ್ರಸಿದ್ಧ್ ಕೃಷ್ಣ, ರೋನಿತ್‌ ಮೋರೆ, ಶರತ್‌ ಬಿ.ಆರ್‌, ಪ್ರತೀಕ್‌ ಜೈನ್‌.

ಫೆ.29ರಿಂದ ಬಂಗಾಳ ವಿರುದ್ಧ ಸೆಮಿಫೈನಲ್‌

ಸತತ 3ನೇ ವರ್ಷ ಸೆಮಿಫೈನಲ್‌ ಪ್ರವೇಶಿಸಿರುವ ಕರ್ನಾಟಕ, ಫೈನಲ್‌ನಲ್ಲಿ ಸ್ಥಾನಕ್ಕಾಗಿ ಬಂಗಾಳ ವಿರುದ್ಧ ಸೆಣಸಲಿದೆ. ಫೆ.29ರಿಂದ ಮಾ.4ರ ವರೆಗೂ ಕೋಲ್ಕತಾದಲ್ಲಿ ಪಂದ್ಯ ನಡೆಯಲಿದೆ. ಒಡಿಶಾ ವಿರುದ್ಧ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದ ಮೇಲೆ ಬಂಗಾಳ ಸೆಮಿಫೈನಲ್‌ ಪ್ರವೇಶಿಸಿತು.

ಫೆ.29ರಿಂದಲೇ ಆರಂಭಗೊಳ್ಳಲಿರುವ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಗುಜರಾತ್‌ ಹಾಗೂ ಸೌರಾಷ್ಟ್ರ ತಂಡಗಳು ಸೆಣಸಲಿವೆ. ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಗುಜರಾತ್‌, ಗೋವಾ ವಿರುದ್ಧ 464 ರನ್‌ಗಳ ಜಯ ಸಾಧಿಸಿದರೆ, ಸೌರಾಷ್ಟ್ರ ತಂಡ ಆಂಧ್ರ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದು ಸೆಮೀಸ್‌ಗೇರಿತು.