2007ರ ಚೊಚ್ಚಲ ಟಿ20 ವಿಶ್ವಕಪ್ ಬಳಿಕ ಈ ಇಬ್ಬರೂ ಭಾರತ ಪರ ಒಂದೇ ಒಂದು ಪಂದ್ಯ ಆಡಲಿಲ್ಲ! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಧೋನಿ ನಾಯಕತ್ವದ ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್ ಜಯಿಸಿ 17 ವರ್ಷ ಕಳೆದಿವೆ. ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಆಟಗಾರರು ಆ ಬಳಿಕ ಮತ್ತೆ ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗಲೇ ಇಲ್ಲ. ಯಾರವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಗೆದ್ದು ಇಂದಿಗೆ 17 ವರ್ಷಗಳು ತುಂಬಿವೆ. 2007ರ ಸೆಪ್ಟೆಂಬರ್ 24ರಂದು ಬದ್ದ ಎದುರಾಳಿ ಪಾಕಿಸ್ತಾನವನ್ನು ರೋಚಕವಾಗಿ ಮಣಿಸಿದ ಟೀಂ ಇಂಡಿಯಾ, ಚುಟುಕು ಕ್ರಿಕೆಟ್ ಸಾಮ್ರಾಟನಾಗಿ ಮೆರೆದಾಡಿತ್ತು. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್ ಎದುರು 5 ರನ್ ರೋಚಕ ಜಯ ಸಾಧಿಸಿದ ಸಂಭ್ರಮಕ್ಕೆ ಇದೀಗ 17ರ ಹರೆಯ.
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ದ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಧೋನಿ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಗೌತಮ್ ಗಂಭೀರ್ ಆಕರ್ಷಕ 75 ರನ್ ಸಿಡಿಸಿದರು. ಪರಿಣಾಮ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 19.3 ಓವರ್‌ಗಳಲ್ಲಿ 152 ರನ್ ಗಳಿಸಿ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತು. ಪಂದ್ಯಶ್ರೇಷ್ಠ ಇರ್ಫಾನ್ ಪಠಾಣ್ ಹಾಗೂ ಆರ್ ಪಿ ಸಿಂಗ್ ತಲಾ 3 ವಿಕೆಟ್ ಕಬಳಿಸಿದರೆ, ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಜೋಗಿಂದರ್ ಶರ್ಮಾ 2 ವಿಕೆಟ್ ಕಬಳಿಸಿ ಮಿಂಚಿದ್ದರು.
ಧೋನಿಯ ಕಣ್ಣು ನೋಡೋಕೂ ಭಯ ಆಗ್ತಿತ್ತು: ಕ್ಯಾಪ್ಟನ್ ಕೂಲ್ ಬೇರೆ ಮುಖನ ಬಿಚ್ಚಿಟ್ಟ ಸಿಎಸ್‌ಕೆ ಮಾಜಿ ಕ್ರಿಕೆಟರ್
ಕೊನೆಯ ಓವರ್ ಬೌಲಿಂಗ್ ಮಾಡಿದ್ದ ಜೋಗಿಂದರ್ ಶರ್ಮಾ, ಮಿಸ್ಬಾ ಉಲ್ ಹಕ್ ಅವರನ್ನು ಬಲಿ ಪಡೆಯುತ್ತಿದ್ದಂತೆಯೇ ಭಾರತದ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದಿತು. ಆದರೆ ಕೊನೆಯ ಓವರ್ ಮಾಡಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದ ಹರ್ಯಾಣ ಮೂಲದ ಮಧ್ಯಮ ವೇಗಿ ಜೋಗಿಂದರ್ ಶರ್ಮಾ, ಮತ್ತೆ ಟೀಂ ಇಂಡಿಯಾ ಪರ ಕಣಕ್ಕಿಳಿಯಲೇ ಇಲ್ಲ. ಇದು ಅಚ್ಚರಿಯೆನಿಸಿದ್ರೂ ಸತ್ಯ.
ಇನ್ನು ಜೋಗಿಂದರ್ ಶರ್ಮಾ ಹೊರತುಪಡಿಸಿ ಮತ್ತೋರ್ವ ಕ್ರಿಕೆಟಿಗ ಕೂಡಾ 2007ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಜೆರ್ಸಿ ತೊಡಲು ಸಾಧ್ಯವಾಗಲಿಲ್ಲ. ಆ ಕ್ರಿಕೆಟಿಗ ಮತ್ಯಾರು ಅಲ್ಲ, ಅವರೇ ಟೀಂ ಇಂಡಿಯಾ ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್‌ಕರ್.
ಪಾದ್ರಿಯಾಗಬೇಕೆಂದು ಬಯಸಿದ್ದ ಈ ಕ್ರಿಕೆಟಿಗ ವಿಶ್ವದ ಅಪಾಯಕಾರಿ ವೇಗಿ; ಈತನ ದಾಳಿಗೆ ಎದುರಾಳಿ ಪಡೆ 38 ರನ್‌ಗೆ ಆಲೌಟ್!
ಮುಂಬೈ ಮೂಲದ ವೇಗದ ಬೌಲರ್ ಅಜಿತ್ ಅಗರ್‌ಕರ್ 1998ರ ಏಪ್ರಿಲ್ 01ರಂದು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಅಗರ್ಕರ್ ಸೆಪ್ಟೆಂಬರ್ 16, 2007ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಟಿ20 ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಅಗರ್‌ಕರ್ 4 ಓವರ್ ಬೌಲಿಂಗ್ ಮಾಡಿ 40 ರನ್ ಚಚ್ಚಿಸಿಕೊಂಡಿದ್ದರು. ಇದೇ ಪಂದ್ಯ ಅಗರ್ಕರ್ ಪಾಲಿನ ಕಟ್ಟ ಕಡೆಯ ಅಂತಾರಾಷ್ಟ್ರೀಯ ಪಂದ್ಯ ಎನಿಸಿಕೊಂಡಿತು. ಇದಾದ ಬಳಿಕ ಅಗರ್ಕರ್‌ಗೆ ಟೀಂ ಇಂಡಿಯಾ ಪ್ರತಿನಿಧಿಸುವ ಅವಕಾಶವೇ ಸಿಗಲಿಲ್ಲ.