- Home
- Sports
- Cricket
- ಧೋನಿಯ ಕಣ್ಣು ನೋಡೋಕೂ ಭಯ ಆಗ್ತಿತ್ತು: ಕ್ಯಾಪ್ಟನ್ ಕೂಲ್ ಬೇರೆ ಮುಖನ ಬಿಚ್ಚಿಟ್ಟ ಸಿಎಸ್‌ಕೆ ಮಾಜಿ ಕ್ರಿಕೆಟರ್
ಧೋನಿಯ ಕಣ್ಣು ನೋಡೋಕೂ ಭಯ ಆಗ್ತಿತ್ತು: ಕ್ಯಾಪ್ಟನ್ ಕೂಲ್ ಬೇರೆ ಮುಖನ ಬಿಚ್ಚಿಟ್ಟ ಸಿಎಸ್‌ಕೆ ಮಾಜಿ ಕ್ರಿಕೆಟರ್
ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಕೂಲ್ ಕ್ಯಾಪ್ಟನ್ ಅಂತಾನೇ ಫೇಮಸ್ ಆಗಿರೋ ಮಹೇಂದ್ರ ಸಿಂಗ್ ಧೋನಿ ಒಮ್ಮೆ ಐಪಿಎಲ್ ಪಂದ್ಯದ ವೇಳೆ ತಮ್ಮ ಸ್ವಭಾವಕ್ಕೆ ವಿರುದ್ಧವಾಗಿ ಆಟಗಾರರ ಮೇಲೆ ಸಿಟ್ಟು ಮಾಡಿಕೊಂಡಿದ್ದ ಘಟನೆಯನ್ನು ಸಹ ಆಟಗಾರ ಸುಬ್ರಮಣಿಯಂ ಬದ್ರಿನಾಥ್ ಬಿಚ್ಚಿಟ್ಟಿದ್ದಾರೆ.

ವಿಶ್ವಕಪ್ ಟ್ರೋಫಿ ಬರ ಎದುರಿಸುತ್ತಾ ಬಂದಿದ್ದ ಟೀಂ ಇಂಡಿಯಾಗೆ ಉತ್ಸಾಹ ತುಂಬಿದವರು ಮಹೇಂದ್ರ ಸಿಂಗ್ ಧೋನಿ. ಅಷ್ಟೇ ಅಲ್ಲ, ಭಾರತ ತಂಡ ಹಲವು ಸಂಕಷ್ಟದ ಸಂದರ್ಭಗಳನ್ನು ಎದುರಿಸುವಾಗ ಏಕಾಂಗಿಯಾಗಿ ನಿಂತು ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ.
ಧೋನಿ ಅಂದ್ರೆ ಎಲ್ಲರಿಗೂ ನೆನಪಾಗೋದು ಅವರ ತಾಳ್ಮೆ. ಪಂದ್ಯದ ಯಾವುದೇ ಕಠಿಣ ಸಂದರ್ಭದಲ್ಲೂ ತಮ್ಮ ಸಂಯಮವನ್ನು ಕಳೆದುಕೊಳ್ಳದೆ ತಂಡದ ಗೆಲುವಿಗಾಗಿ ಶ್ರಮಿಸುತ್ತಿದ್ದರು. ಎದುರಾಳಿ ತಂಡದ 0.01% ತಪ್ಪನ್ನು ಸಹ 100% ತಮ್ಮ ಪರವಾಗಿ ಬಳಸಿಕೊಳ್ಳುವ ನಿಪುಣ ಎಂದರೆ ಅದು ಧೋನಿ ಮಾತ್ರ.
ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೀಗೆ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಮಹೇಂದ್ರ ಸಿಂಗ್ ಧೋನಿಯವರದ್ದಾಗಿದೆ.
ಆದರೆ ಅಂತಹ ಕೂಲ್ ಕ್ಯಾಪ್ಟನ್‌ನನ್ನೂ ಒಮ್ಮೊಮ್ಮೆ ತಾಳ್ಮೆ ಕಳೆದುಕೊಳ್ಳುವಂತೆ ಮಾಡುವ ಅದ್ಭುತ ಸಾಮರ್ಥ್ಯ ನಮ್ಮ ತಂಡದ ಆಟಗಾರರಿಗೆ ಇದೆ. ಚೆನ್ನೈ ತಂಡವು ಚೆಪಾಕ್ ಕ್ರೀಡಾಂಗಣದಲ್ಲಿ ಬೆಂಗಳೂರಿನ ವಿರುದ್ಧ ನಡೆದ ಪಂದ್ಯದಲ್ಲಿ ಸರಿಯಾಗಿ ಆಡದ ಕಾರಣ ಧೋನಿ ತಮ್ಮ ತಂಡದ ಆಟಗಾರರ ಮೇಲೆ ಕೋಪಗೊಂಡಿದ್ದರು ಎಂದು ಸಿಎಸ್‌ಕೆ ಮಾಜಿ ಆಟಗಾರ ಎಸ್ ಬದ್ರಿನಾಥ್ ಹೇಳಿದ್ದಾರೆ.
ಈ ಬಗ್ಗೆ ಚೆನ್ನೈ ತಂಡದ ಮಾಜಿ ಆಟಗಾರ ಬದ್ರಿನಾಥ್ ಮಾತನಾಡಿ, ಧೋನಿ ಕೂಡ ಒಬ್ಬ ಮನುಷ್ಯ. ಅವರು ಕೆಲವೊಮ್ಮೆ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಅದು ಎಂದಿಗೂ ಮೈದಾನದಲ್ಲಿ ನಡೆದಿಲ್ಲ. ಅವರು ಎಂದಿಗೂ ತಮ್ಮ ಶಾಂತತೆಯನ್ನು ಕಳೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಬೆಂಗಳೂರು ತಂಡದ ವಿರುದ್ಧದ ಪಂದ್ಯ ಚೆನ್ನೈನಲ್ಲಿ ನಡೆಯಿತು. ನಾವು ಆ ಪಂದ್ಯದಲ್ಲಿ 110 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದೆವು. ಮತ್ತೊಂದೆಡೆ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಇದರಿಂದಾಗಿ ನಾವು ಆ ಪಂದ್ಯದಲ್ಲಿ ಸೋತೆವು. ನಾನು ಅನಿಲ್ ಕುಂಬ್ಳೆ ಅವರ ಎಸೆತದಲ್ಲಿ ವೇಗವಾಗಿ ರನ್ ಗಳಿಸಲು ಹೋಗಿ ಎಲ್‌ಬಿಡಬ್ಲ್ಯೂ ಆಗಿ ಪೆವಿಲಿಯನ್‌ಗೆ ಮರಳಿದೆ.
ನಾನು ಡ್ರೆಸ್ಸಿಂಗ್ ರೂಮ್‌ನಲ್ಲಿ ನಿಂತಿದ್ದಾಗ, ಧೋನಿ ಅಲ್ಲಿಯೇ ಇದ್ದ ನೀರಿನ ಬಾಟಲಿಯನ್ನು ಒದ್ದರು. ಅದು ಮೇಲಕ್ಕೆ ಹಾರಿ ಕೆಳಗೆ ಬಿತ್ತು. ಆಗ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಧೋನಿ ಆ ಕೆಲಸ ಬಿಟ್ಟು ಒಂದು ಮಾತೂ ಆಡಲಿಲ್ಲ. ಅವರ ಕೋಪ ನಮಗೆ ಅರ್ಥವಾಯಿತು. ಅದು ಅವರ ಶೈಲಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ..
ಮಹೇಂದ್ರ ಸಿಂಗ್ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದು, 2025ರ ಐಪಿಎಲ್ ಟೂರ್ನಿಯು ಧೋನಿ ಆಡಲಿರುವ ಕಟ್ಟಕಡೆಯ ಐಪಿಎಲ್ ಟೂರ್ನಿ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.