ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸೋಲಿನ ಬಳಿಕ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಾರ್ಮ್ನಲ್ಲಿದ್ದ ವೈಭವ್ ಸೂರ್ಯವಂಶಿ ಬದಲು ಇಶಾನ್ ಕಿಶನ್ಗೆ ಅವಕಾಶ ನೀಡಿದ್ದೇ ಸೋಲಿಗೆ ಕಾರಣ ಎಂಬ ಟೀಕೆಗಳು ಕೇಳಿಬಂದಿವೆ. ಇದಕ್ಕೆ ಗಂಭೀರ್, ಜನಪ್ರಿಯ ನಿರ್ಧಾರಗಳಿಗಿಂತ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ತಮ್ಮ ಕೆಲಸ ಎಂದು ತಿರುಗೇಟು ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯವಾಗಿ ಸೋಲನ್ನ ಕಂಡಿದೆ. ಬೆನ್ನಲ್ಲೇ ಟೀಂ ಇಂಡಿಯಾ ಅಭಿಮಾನಿಗಳು ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋಚ್ ಗಂಭೀರ್ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳದ ಕಾರಣ ತಂಡಕ್ಕೆ ಸೋಲು ಆಗಿದೆ ಎನ್ನುತ್ತಿದ್ದಾರೆ.
ಅಭಿಮಾನಿಗಳ ಆಕ್ರೋಶ ಏನು?
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯವನ್ನು ಆಡಿದ ವಿಕೆಟ್ ಕೀಪರ್ ಇಶಾನ್ ಕಿಶನ್ ಗಾಯದಿಂದ ಎರಡನೇ ಮತ್ತು ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿತ್ತು. ಮೂರನೇ ಟಿ-20 ಪಂದ್ಯದಲ್ಲಿ ಸೂರ್ಯವಂಶಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು.
ಆದರೆ ನಾಲ್ಕನೇ ಪಂದ್ಯದಲ್ಲಿ ಹಿರಿಯ ಆಟಗಾರ ಇಶಾನ್ ಕಿಶನ್ ಆಗಮನ ಹಿನ್ನೆಲೆಯಲ್ಲಿ ಅವರನ್ನು ಬೆಂಚ್ನಲ್ಲಿ ಕೂರಿಸಲಾಯಿತು. ಇಶಾನ್ ಕಿಶನ್, ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದರು. ಅಷ್ಟೇ ಅಲ್ಲ, ಟೀಂ ಇಂಡಿಯಾ ನಾಲ್ಕನೇ ಟಿ-20 ಪಂದ್ಯದಲ್ಲಿ ಸೋಲನ್ನ ಕಂಡಿತು. ಇನ್ನು ಐದನೇ ಟಿ-20 ಪಂದ್ಯದಲ್ಲಿ ಇಶಾನ್ ಕಿಶನ್ 61 ರನ್ಗಳ ಕಾಣಿಕೆ ನೀಡಿದ್ದರೂ, ತಂಡವು ಸೋಲನ್ನು ಕಂಡಿದೆ. ಹೀಗಾಗಿ ತಂಡದಲ್ಲಿ ವೈಭವ್ ಸೂರ್ಯವಂಶಿ ಇದ್ದಿದ್ದರೆ.. ಗೆಲುವು ಪಕ್ಕಾ ಅನ್ನೋದು ಹಲವು ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ. ಅದೇ ಕಾರಣಕ್ಕೆ ಕೋಚ್ ಗೌತಮ್ ಗಂಭೀರ್ ವಿರುದ್ಧ ಹರಿಹಾಯುತ್ತಿದ್ದಾರೆ.
ಇದೀಗ ಈ ಎಲ್ಲಾ ಟೀಕೆಗಳಿಗೆ ಕೋಚ್ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ. ಮೊದಲನೇಯದು ಎಲ್ಲರನ್ನೂ ಖುಷಿ ಪಡಿಸೋದು ನನ್ನ ಕೆಲಸ ಅಲ್ಲ. ನನ್ನ ಕೆಲಸ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು. ಜನಪ್ರಿಯ ನಿರ್ಧಾರಗಳನ್ನ ತೆಗೆದುಕೊಳ್ಳುವುದಲ್ಲ. ನಾನು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅಲ್ಲಿದ್ದೇನೆ. ನಾವು ಇಲ್ಲಿ ಜನಪ್ರಿಯ ನಿರ್ಧಾರಗಳನ್ನ ತೆಗೆದುಕೊಳ್ಳುವುದು ತುಂಬಾನೇ ಸುಲಭ. ನನಗೆ ಬೇಕಾಗಿರೋದು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು.
ಜೊತೆಗೆ ಡ್ರೆಸ್ಸಿಂಗ್ ರೂಮ್ನಲ್ಲಿ ಸಾಕಷ್ಟು ಭದ್ರತೆ ಇದೆ ಅನ್ನೋದನ್ನು ಖಚಿತಪಡಿಸುವುದು. ನೀವು ಹೇಳಿದಂತೆ ನಮ್ಮ ತಂಡದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ದೀರ್ಘಕಾಲದವರೆಗೆ ಸ್ಥಿರ ಪ್ರದರ್ಶನ ನೀಡೋರು ಮಾತ್ರ, ಯಾವುದೇ ಸಂಶಯವಿಲ್ಲದೇ ದೀರ್ಘಕಾಲ ಆಡಿಯೇ ಆಡುತ್ತಾರೆ. ಅದನ್ನು ನಾನು ನಂಬುತ್ತೇನೆ.
ನೀವು ನಿಮ್ಮ ದೇಶಕ್ಕಾಗಿ ಆಡುವಾಗ.. ಯಾವುದೇ ಆತ್ಮತೃಪ್ತಿ ಇಲ್ಲಿ ಇರುವುದಿಲ್ಲ. ನಾವೆಲ್ಲರೂ ಇದು ಅಂತಾರಾಷ್ಟ್ರೀಯ ಪಂದ್ಯ ಎಂಬುದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಗುತ್ತದೆ. ನಾನು ಪ್ರತಿಯೊಂದು ಪಂದ್ಯವನ್ನೂ ವಿಭಿನ್ನ ರೀತಿಯಲ್ಲಿ ನೋಡುತ್ತೇನೆ. ಅಲ್ಲಿ ಏನಾದರೂ ಕಲಿಯಲು ಅವಕಾಶ ಸಿಕ್ಕಿಯೇ ಸಿಗುತ್ತದೆ. ನನ್ನ ಸಿದ್ಧಾಂತದಲ್ಲಿ ಯಾವುದೇ ಸತ್ತ ರಬ್ಬರ್ಗಳಿಲ್ಲ ಎಂದು ಕಿಡಿಕಾರಿದ್ದಾರೆ.






