ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, ಸರಣಿ 2-2ರಲ್ಲಿ ಸಮಗೊಂಡಿದೆ. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್, ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಹೆಸರಲ್ಲಿದ್ದ ಬೃಹತ್ ವಿಶ್ವದಾಖಲೆಯನ್ನು ಮುರಿದಿದ್ದಾರೆ.

ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಐದನೇ ಟಿ20 ಪಂದ್ಯವು ಮಳೆಯಿಂದ ಅರ್ಧಕ್ಕೆ ರದ್ದಾದ ಹಿನ್ನೆಲೆಯಲ್ಲಿ ಸರಣಿಯು 2-2ರಲ್ಲಿ ಸಮಗೊಳ್ಳುವುದರೊಂದಿಗೆ ಮುಕ್ತಾಯವಾಯಿತು. ಬೆಂಗಳೂರಿನಲ್ಲಿ ಆಯೊಜನೆಗೊಂಡಿದ್ದ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಟಿ20 ಪಂದ್ಯವು ಮಳೆಯಿಂದ ಅರ್ಧಕ್ಕೆ ರದ್ದಾಯಿತು. ಮಳೆಯ ಹೊರತಾಗಿಯೂ ಟೀಂ ಇಂಡಿಯಾ ಬ್ಯಾಟರ್ ಇಶನ್ ಕಿಶನ್ ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದರು. ಇಶನ್ ಕಿಶನ್ ಕೇವಲ 10 ಎಸೆತಗಳಲ್ಲಿ 30 ರನ್ ಸಿಡಿಸಿದರು. ಇದರಲ್ಲಿ ಮೂರು ಬೌಂಡರಿ ಹಾಗೂ ಎರಡು ಮುಗಿಲೆತ್ತರದ ಸಿಕ್ಸರ್‌ಗಳು ಸೇರಿದ್ದವು. ಇನ್ನು ಇದೆಲ್ಲದರ ನಡುವೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರ ಹೆಸರಲ್ಲಿದ್ದ ಅಪರೂಪದ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾದರು.

ಪಂದ್ಯಕ್ಕೆ ಮಳೆ ಅಡ್ಡಿ:

ಭಾರತ ಹಾಗೂ ವೆಸ್ಟ್‌ ಇಂಡೀಸ್ ನಡುವಿನ ನಿರ್ಣಾಯಕ ಟಿ20 ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿತು. ಇದರ ಹೊರತಾಗಿಯೂ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ 7.4 ಓವರ್‌ಗಳಲ್ಲಿ 118 ರನ್‌ಗಳನ್ನು ಬಾರಿಸಿತು. ಇದಾದ ಬಳಿಕ ಮತ್ತೆ ಮಳೆ ಸುರಿಯಲಾರಂಭಿಸಿದ್ದರಿಂದ ಮ್ಯಾಚ್ ರೆಫ್ರಿ ಪಂದ್ಯ ರದ್ದಾಗಿದೆ ಎಂದು ಘೋಷಿಸಿದರು. ಇದರ ನಡುವೆ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್, ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿದ್ದ ವಿಶ್ವದಾಖಲೆ ಬ್ರೇಕ್ ಮಾಡಿದರು.

ಸೂರ್ಯಕುಮಾರ್ ಯಾದವ್ ವಿಶ್ವದಾಖಲೆ ಇಶಾನ್ ಕಿಶನ್ ಪಾಲು:

ಅಂದಹಾಗೆ ಇಶಾನ್ ಕಿಶನ್ ಕಳೆದೊಂದು ವರ್ಷದಲ್ಲಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಲಯದಲ್ಲಿದ್ದಾರೆ. ಇದೀಗ ಐಸಿಸಿ ಪೂರ್ಣ ಸದಸ್ಯ ಹೊಂದಿರ ರಾಷ್ಟ್ರಗಳ ಆಟಗಾರರ ಪೈಕಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್ ಎನ್ನುವ ವಿಶ್ವದಾಖಲೆಗೆ ಇಶಾನ್ ಕಿಶನ್ ಭಾಜನರಾಗಿದ್ದಾರೆ. ಇಶಾನ್ ಕಿಶನ್ ಇದೀಗ 2026ರ ಕ್ಯಾಲೆಂಡರ್ ವರ್ಷವೊಂದರಲ್ಲಿ ಒಟ್ಟು 177 ಬಾರಿ ಸೀಮಾ ರೇಖೆಯ ಹೊರಗೆ ಬಾರಿಸಿದ್ದಾರೆ. ಇದರಲ್ಲಿ 122 ಬೌಂಡರಿ ಹಾಗೂ 55 ಸಿಕ್ಸರ್‌ಗಳು ಸೇರಿವೆ. ಈ ಕ್ಯಾಲೆಂಡರ್ ವರ್ಷದಲ್ಲಿ ಕೇವಲ 34 ಟಿ20 ಪಂದ್ಯಗಳನ್ನಾಡಿರುವ ಇಶಾನ್ ಕಿಶನ್ ಒಟ್ಟು 1158 ರನ್ ಸಿಡಿಸಿದ್ದಾರೆ.

ಇನ್ನು ಇದಕ್ಕೂ ಮೊದಲು ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿಹೆಚ್ಚು ಬೌಂಡರಿ ಸಿಕ್ಸರ್ ಬಾರಿಸಿದ ದಾಖಲೆ ಟೀಂ ಇಂಡಿಯಾ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಹೆಸರಿನಲ್ಲಿತ್ತು. ಸೂರ್ಯಕುಮಾರ್ ಯಾದವ್ 2022ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟಾರೆ 174 ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದರಲ್ಲಿ 106 ಬೌಂಡರಿ ಹಾಗೂ 68 ಸಿಕ್ಸರ್‌ಗಳು ಸೇರಿವೆ. ಆ ವರ್ಷ ಸೂರ್ಯಕುಮಾರ್ ಯಾದವ್ ಭಾರತ ಪರ 31 ಟಿ20 ಪಂದ್ಯಗಳನ್ನಾಡಿ 1164 ರನ್ ಸಿಡಿಸಿದ್ದರು. ಇನ್ನು ಈ ಲಿಸ್ಟ್‌ನಲ್ಲಿ ಭಾರತದ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಈ ವರ್ಷ 34 ಟಿ20 ಪಂದ್ಯಗಳನ್ನಾಡಿದ್ದು, 956 ರನ್ ಬಾರಿಸಿದ್ದಾರೆ. ಒಟ್ಟಾರೆ ಈ ಕ್ಯಾಲೆಂಡರ್ ವರ್ಷದಲ್ಲಿ ಅಭಿಷೇಕ್ ಶರ್ಮಾ 162 ಬೌಂಡರಿ ಸಿಕ್ಸರ್‌ಗಳನ್ನು ಬಾರಿಸಿದ್ದು, ಇದರಲ್ಲಿ 92 ಬೌಂಡರಿ ಹಾಗೂ 70 ಸಿಕ್ಸರ್‌ಗಳು ಸೇರಿವೆ.