ಆರ್ಸಿಬಿ ತಂಡದ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನಡುವೆ ಉತ್ತಮ ಸ್ನೇಹವಿದೆ. ಆದರೆ ಮೊದಲ ಭೇಟಿಯಲ್ಲಿ ಕೊಹ್ಲಿ ಓರ್ವ ಅಹಂಕಾರಿ ಹಾಗೂ ಗರ್ವಿಷ್ಠರಾಗಿದ್ದರು ಎಂದು ಎಬಿಡಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ವಯಸ್ಸಾದಂತೆ ಕೊಹ್ಲಿ ಪ್ರಬುದ್ಧರಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರು: ಕ್ರಿಕೆಟ್ ಜಗತ್ತಿನಲ್ಲಿ ಕೆಲವೇ ಕೆಲವು ಆಟಗಾರರು ಮಾತ್ರ ವಿರಾಟ್ ಕೊಹ್ಲಿ ಜತೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಅಂತವರ ಪೈಕಿ ಆರ್ಸಿಬಿ ಆಪತ್ಬಾಂಧವ, ಆಧುನಿಕ ಕ್ರಿಕೆಟ್ನ ಸೂಪರ್ ಸ್ಟಾರ್ ಬ್ಯಾಟರ್ ಎಂದೇ ಗುರುತಿಸಿಕೊಂಡಿರುವ ಎಬಿ ಡಿವಿಲಿಯರ್ಸ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಮೊದಲ ಸಲ ಮೈದಾನಕ್ಕಿಳಿದಾಗಲೇ ಆತ್ಮೀಯ ಗೆಳೆಯರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್, ಆರ್ಸಿಬಿ ತಂಡದಲ್ಲಿ ಜತೆಯಾದ ಬಳಿಕವಂತೂ ಅವರ ಸ್ನೇಹ ಮತ್ತಷ್ಟು ಗಾಢವಾಯಿತು. ಕಳೆದೊಂದುವರೆ ದಶಕಗಳಿಂದಲೂ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಒಬ್ಬರನ್ನೊಬ್ಬರು ಗೌರವಿಸುತ್ತಲೇ ಬಂದಿದ್ದಾರೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಓರ್ವ ಅಹಂಕಾರಿ ಹಾಗೂ ಸೊಕ್ಕಿನಿಂದ ಕೂಡಿದ್ದ ವ್ಯಕ್ತಿಯಾಗಿದ್ದರು ಎನ್ನುವ ಎಬಿಡಿ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೇ ಹುಟ್ಟುಹಾಕಿದೆ.
ಕೊಹ್ಲಿ ಬಗ್ಗೆ ಎಬಿಡಿ ಅಚ್ಚರಿ ಹೇಳಿಕೆ:
ಪ್ರಖರ್ ಗುಪ್ತಾ ಎನ್ನುವರ ಜತೆಗಿನ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿ ಮಾತನಾಡಿದ ಎಬಿ ಡಿವಿಲಿಯರ್ಸ್, 'ನಾನು ಮೊದಲ ಸಲ ವಿರಾಟ್ ಕೊಹ್ಲಿಯನ್ನು ಭೇಟಿಯಾದಾಗ ಅವರು ಅಹಂಕಾರಿ ಹಾಗೂ ಗರ್ವಿಷ್ಠರಾಗಿದ್ದರು. ಬಹುಶಃ ಈಗ ಕೇಳಿದರೂ ಕೊಹ್ಲಿ ನನ್ನ ಮಾತನ್ನು ಒಪ್ಪಬಹುದು ಎಂದು ಎಬಿಡಿ ಹೇಳಿದ್ದಾರೆ.
ಕೊಹ್ಲಿ ಬಗ್ಗೆ ನೀವ್ಯಾಕೆ ಹಾಗೆ ಅಂದುಕೊಂಡಿರಿ ಸರಿಯಾಗಿ ವಿವರಿಸಿಎ ಎಂದು ಪ್ರಖರ್ ಗುಪ್ತಾ ಅವರು ಕೇಳಿದಾಗ, ಕೊಹ್ಲಿ ತಮ್ಮಲ್ಲಿ ಅಪಾರ ಮಟ್ಟದ ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತಿದ್ದ ಕಾರಣದಿಂದಲೇ ಅವರಲ್ಲಿ ಆ ಅಹಂಕಾರ ಉಂಟಾಗಿತ್ತು ಎಂದು ಎಬಿಡಿ ವಿವರಿಸಿದ್ದಾರೆ. ಅವರಲ್ಲಿ ಆತ್ಮವಿಶ್ವಾಸದ ಮಟ್ಟ ಬಹಳ ಹೆಚ್ಚಿದೆ ಮತ್ತು ಅವರು ಯಾವಾಗಲೂ ಇದೇ ರೀತಿಯಲ್ಲಿ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಕೆಲವೊಮ್ಮೆ ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನನ್ನ ವಿಷಯದಲ್ಲೂ ಹೀಗೆಯೇ ಆಗಿತ್ತು; ಅವರು ನನಗೆ ಮೊದಲು ಭೇಟಿಯಾದಾಗ ಅತಿಯಾದ ಆತ್ಮವಿಶ್ವಾಸ ಹೊಂದಿರುವವರಂತೆ ಕಂಡರು ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಕೊಹ್ಲಿ ಮೊದಲ ಭೇಟಿಯನ್ನು ಮೆಲುಕು ಹಾಕಿದ್ದಾರೆ.
ಅಂದರೆ, ಇದು ನನ್ನ ಮೊದಲ ಅನಿಸಿಕೆಯಾಗಿತ್ತು. ಆತ ಕೂಡ ಇದನ್ನು ಒಪ್ಪಿಕೊಳ್ಳುತ್ತಾನೆ ಎಂದು ನನಗನ್ನಿಸುತ್ತದೆ. 19, 20, 21ನೇ ವಯಸ್ಸಿನಲ್ಲಿಯೇ ಆತ ಬಹಳ ಆತ್ಮವಿಶ್ವಾಸವುಳ್ಳ ಯುವಕನಾಗಿದ್ದ. ಅದು ಆರಂಭದ ದಿನಗಳು. ದೊಡ್ಡ ಯಶಸ್ಸನ್ನು ಸಾಧಿಸಲು ಇದೂ ಕೂಡ ಅಗತ್ಯವಾಗಿದೆ. ನಿಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಿಮಗೆ ನಿಜವಾಗಿಯೂ ನಂಬಿಕೆ ಇರಬೇಕು; ಕಾಲಕ್ರಮೇಣ ಅದನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ನೀವು ಕಲಿತುಕೊಳ್ಳುತ್ತೀರಿ ಎಂದು ಎಬಿಡಿ ಹೇಳಿದ್ದಾರೆ.
ಈಗ ಕೊಹ್ಲಿ ಸಮತೋಲಿತ ಆಟಗಾರನಾಗಿದ್ದಾರೆ:
ಅವನು ವಯಸ್ಸಾದಂತೆ ಮತ್ತು ಒಬ್ಬ ವ್ಯಕ್ತಿಯಾಗಿ ಹಾಗೂ ಕ್ರಿಕೆಟ್ ಆಟಗಾರನಾಗಿ ಹೆಚ್ಚು ಸಮತೋಲಿತನಾದಂತೆ, ಆ ಭಾವನೆ ಮಾಯವಾಯಿತು. ಅವನು ಚಿಕ್ಕವನಿದ್ದಾಗ ತಾನು ಏನೆಂದು ಸಾಬೀತುಪಡಿಸಬೇಕಾದ ಅಗತ್ಯ ಹೆಚ್ಚಿತ್ತು ಎಂದು ನನಗನ್ನಿಸುತ್ತದೆ; ಕಾಲಕ್ರಮೇಣ ಆ ಅಗತ್ಯವೂ ಇಲ್ಲದಂತಾಯಿತು. ಹಾಗೆಯೇ, ಜನರ ಮುಂದೆ ಅತಿಯಾದ ಆತ್ಮವಿಶ್ವಾಸವನ್ನು ಪ್ರದರ್ಶಿಸಬೇಕೆಂಬ ಭಾವನೆಯೂ ಬದಲಾಯಿತು. ಈಗ ವಿರಾಟ್ ಕೊಹ್ಲಿ ಹೆಚ್ಚು ಪ್ರಬುದ್ಧರಾಗಿದ್ದಾರೆ ಎಂದು ಮಿಸ್ಟರ್ 360 ಖ್ಯಾತಿಯ ಎಬಿಡಿ ಹೇಳಿದ್ದಾರೆ.


