IPL Bad Luck: ಉದ್ಯಮಿಗಳ ಪಾಲಿಗೆ ಐಪಿಎಲ್ ಐರನ್ ಲೆಗ್ ಅನ್ನೋ ಮಾತು ನಿಜವಾಗ್ತಿದ್ಯಾ?
ಕ್ರಿಕೆಟಿಗರ ಪಾಲಿಗೆ ಹಾಗೂ ಬಿಸಿಸಿಐ ಪಾಲಿಗೆ ಐಪಿಎಲ್ ಎನ್ನುವುದು ಚಿನ್ನದ ಮೊಟ್ಟೆ ಇಡುವ ಕೋಳಿ. ಆದರೆ, ಭಾರತದ ಉದ್ಯಮಿಗಳ ಪಾಲಿಗೆ ಐಪಿಎಲ್ ಎನ್ನುವುದು ಐರನ್ ಲೆಗ್. ಮೊದಲು ಇದು ನಂಬೋದು ಕಷ್ಟವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಭಾರತದ ಉದ್ಯಮಿಗಳ ಆತಂಕ ನಿಜ ಎನ್ನುವ ಅನುಮಾನಗಳು ಕಾಡುತ್ತಿವೆ.
ಬೆಂಗಳೂರು (ಫೆ.3): ವಿಜಯ್ ಮಲ್ಯ, ಎನ್.ಶ್ರೀನಿವಾಸನ್, ಟಿ.ವೆಂಕಟರಾಮನ್ ರೆಡ್ಡಿ..ಈಗ ಗೌತಮ್ ಅದಾನಿ. ದೇಶದ ಈ ಎಲ್ಲಾ ಉದ್ಯಮಿಗಳ ನಡುವೆ ಒಂದು ಸಾಮ್ಯತೆ ಇದೆ. ಈ ಎಲ್ಲರೂ ಒಂದು ಕಾಲದಲ್ಲಿ ಐಪಿಎಲ್ ತಂಡಗಳ ಮಾಲೀಕರಾಗಿದ್ದವರು ಹಾಗೂ ಅದರಿಂದಲೇ ಕುಖ್ಯಾತಿಗೆ ಒಳಗಾದವರು. ಇದಕ್ಕೆ ಇತ್ತೀಚೆಗೆ ಸೇರ್ಪಡೆಯಾದವರು ಅದಾನಿ ಸಮೂಹದ ಗೌತಮ್ ಅದಾನಿ. ಮಹಿಳಾ ಐಪಿಎಲ್‌ನಲ್ಲಿ ಟೀಮ್ ಖರೀದಿಸಿದ್ದ ಬೆನ್ನಲ್ಲೇ ಅದಾನಿಗೆ ಸಾಡೇಸಾತಿ ಬೆನ್ನೇರಿದೆ. ಹಿಂಡೆನ್‌ಬರ್ಗ್ ವರದಿಯ ಬೆನ್ನಲ್ಲಿಯೇ ಅದಾನಿ ಕಂಪನಿಯ ಷೇರುಗಳು ಹೇಳಹೆಸರಿಲ್ಲದಂತೆ ನೆಲಕಚ್ಚುತ್ತಿವೆ. ಅದರೊಂದಿಗೆ ಭಾರತದ ಉದ್ಯಮಿಗಳಿಗೆ ಪಾಲಿಗೆ ಐಪಿಎಲ್ ಐರನ್ ಲೆಗ್ ಎನ್ನುವ ಮಾತು ನಿಜವಾಗುತ್ತಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ನಿಮಗೆ ನೆನಪಿರಲಿ, ಹಿಂದೊಮ್ಮೆ ಮುಂಬೈನ ಪ್ರಖ್ಯಾತ ಉದ್ಯಮಿಯೊಬ್ಬರು ಇದೇ ವಿಚಾರವಾಗಿ ಮಾತನಾಡಿದ್ದರು. ಐಪಿಎಲ್ ತಂಡವನ್ನು ಖರೀದಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಉತ್ಸುಕರಾಗಿದ್ದ ಅವರು ಕೊನೆಗೆ ಗ್ಲಾಮರಸ್ ಲೀಗ್‌ನ 'ಬ್ಯಾಡ್‌ಲಕ್' ಕಂಡು ಸುಮ್ಮನಾಗಿದ್ದರು. ಟೀಮ್ ಮಾಲೀಕರಿಗೆ ಐಪಿಎಲ್ ದುರಾದೃಷ್ಟ ತರಲಿದೆ ಎನ್ನುವುದು ಅವರ ಯೋಚನೆಯಾಗಿತ್ತು. ಇಂದು ಅದಾನಿ ವಿಚಾರದಲ್ಲಿ ಆಗಿದ್ದು ನೋಡಿದರೆ, ಬಹುಶಃ ಅವರು ಹೇಳಿದ್ದು ಸರಿ ಇರಬಹುದು ಎನ್ನುವ ಯೋಚನೆ ಬರೋದಂತೂ ಸತ್ಯ,
ಹೀಗೆ ಸುಮ್ಮನೆ ಯೋಚಿಸಿ ನೋಡಿ, ಐಪಿಎಲ್ ತಂಡದ ಮಾಲೀಕರಾದ ಬಳಿಕ ಇಂಡಿಯಾ ಸಿಮೆಂಟ್ಸ್ ಮಾಲೀಕ ಎನ್.ಶ್ರೀನಿವಾಸನ್‌ಗೆ ಇನ್ನಿಲ್ಲದಂತ ದುರಾದೃಷ್ಟ ಕಾಡಿತು. ಬಿಸಿಸಿಐ ಅಧ್ಯಕ್ಷ ಸ್ಥಾನ ಕಳೆದುಕೊಂಡರು, ಇಂಡಿಯಾ ಸಿಮೆಂಟ್ಸ್ ಕಂಪನಿ ಸಿಎಸ್‌ಕೆಯ ಮಾಲೀಕತ್ವ ಕಳೆದುಕೊಂಡಿತು. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್, ಜೀವಮಾನ ಪೂರ್ತಿ ಕ್ರಿಕೆಟ್ ಚಟುವಟಿಕೆಗಳಿಂದ ಬ್ಯಾನ್ ಆದರು. ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರಾಗಿದ್ದ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ತಂಡದಲ್ಲಿದ್ದ 11.6ರಷ್ಟು ಷೇರನ್ನು ಮಾರಾಟ ಮಾಡಿದ್ದಾರೆ. ಕುಂದ್ರಾ ಅವರನ್ನು ಜೀವಮಾನ ಪೂರ್ತಿ ಬ್ಯಾನ್ ಮಾಡಲಾಗಿದೆ. ಆರ್‌ಸಿಬಿ ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ಐಪಿಎಲ್ ತಂಡದ ಖರೀದಿ ಮಾಡಿದ ಬಳಿಕ ಯುಬಿ ಗ್ರೂಪ್ ಮೇಲಿನ ಅಧಿಕಾರ ಕಳೆದುಕೊಂಡರು. ಕಿಂಗ್‌ಫಿಶರ್ ಏರ್‌ಲೈನ್ಸ್ ಹೇಳ ಹೆಸರಿಲ್ಲದಂತೆ ಮುಚ್ಚಿಹೋಯಿತು. ಇಂದು ಮಲ್ಯ, ಯಾವಾಗ ಜೈಲಿಗೆ ಹೋಗೋದು ಅನ್ನೋ ದಿನವನ್ನು ಎಣಿಸುತ್ತಿದ್ದಾರೆ.
2010ರಲ್ಲಿ ಸಹರಾ ಗ್ರೂಪ್‌ನ ಸುಬ್ರತೋ ರಾಯ್ ದುಬಾರಿ ಮೊತ್ತಕ್ಕೆ ಪುಣೆ ಮಾಲೀಕರಾಗಿದ್ದರು. ಆದರೆ, ಅದರ ಬೆನ್ನಲ್ಲೇ ದುರಾದೃಷ್ಟ ವಕ್ಕರಿಸಿಕೊಂಡು ಜೈಲು ಪಾಲಾದರು. ಇಂದು ಜಾಮೀನಿಗೆ ನೀಡಲು ಹಣ ಕೂಡ ಇಲ್ಲದೇ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಮಾಲೀಕರಲ್ಲಿ ಒಬ್ಬರಾಗಿದ್ದ ಶಶಿ ತರೂರ್ ಹಾಗೂ ಸುನಂದಾ ಪುಷ್ಕರ್, ತಂಡ ಖರೀದಿ ಮಾಡಿದ ಬಳಿಕ ಕುಸಿತ ಕಂಡರು. ಶಶಿ ತರೂರ್ ಸಚಿವ ಸ್ಥಾನ ಕಳೆದುಕೊಂಡರೆ, ಸುನಂದಾ ಪುಷ್ಕರ್ ಜೀವವನ್ನೇ ಬಿಟ್ಟರು. ಶಶಿ ತರೂರ್ ಮೇಲೆ ಸುನಂದಾ ಪುಷ್ಕರ್ ಅವರನ್ನು ಕೊಲೆ ಮಾಡಿದ ಆರೋಪ ಕೇಳಿ ಬಂತು.
ಐಪಿಎಲ್‌ನ ಆರಂಭಿಕ ಮಾಲೀಕರಲ್ಲಿ ಒಬ್ಬರಾಗಿದ್ದ ಟಿ.ವೆಂಕಟರಾಮನ್ ರೆಡ್ಡಿ ಭಾರೀ ಅಸೆಯೊಂದಿಗೆ ಡೆಕ್ಕನ್ ಚಾರ್ಜರ್ಸ್ ತಂಡ ಖರೀದಿ ಮಾಡಿದ್ದರು. ಅದರ ಬೆನ್ನಲ್ಲಿಯೇ ಡೆಕ್ಕನ್ ಕ್ರಾನಿಕಲ್ ಕಂಪನಿಯ ಮೇಲೆ ಮೋಸದ ಆರೋಪ ಬಂದಿತು. ಇಡೀ ತಂಡವನ್ನು ಮಾರಾಟ ಮಾಡಿ ವೆಂಕಟರಾಮನ್ ರೆಡ್ಡಿ ಅಜ್ಞಾತವಾಗಿ ಹೋದರು. ಇನ್ನು ಸನ್‌ರೈಸರ್ಸ್ ತಂಡವನ್ನು ಖರೀದಿ ಮಾಡಿದ ಬಳಿಕ ಮಾರನ್ ಸಹೋದರರಿಗೆ ಬಂದಷ್ಟು ಕಷ್ಟಗಳು ಮತ್ಯಾರಿಗೆ ಬಂದಿರುವ ಹಾಗಿಲ್ಲ. ಸ್ಪೈಸ್ ಜೆಟ್ ಕಂಪನಿಯನ್ನು ಕಳೆದುಕೊಂಡರೆ, ಸರ್ಕಾರದ ವಿರುದ್ಧ ದಿನವೂ ಒಂದಲ್ಲಾ ಒಂದು ರೀತಿಯಲ್ಲಿ ಸನ್ ಗ್ರೂಪ್ ಹೋರಾಟ ನಡೆಸುತ್ತಲೇ ಇದೆ. ಇನ್ನು ಮಾಲೀಕರ ವಿಚಾರ ಇಷ್ಟಾದರೆ, ಐಪಿಎಲ್‌ನ ಚೇರ್ಮನ್ ಆಗಿದ್ದ ಲಲಿತ್ ಮೋದಿ, ಐಪಿಎಲ್ ಆರಂಭವಾಗುವವರೆಗೂ ಉಚ್ಛ್ರಾಯ ಸ್ಥಿತಿಯಲ್ಲಿದ್ದರು. ಆದರೆ, ಲೀಗ್‌ನಲ್ಲಿ ತೊಡಗಿಕೊಂಡಿದ್ದೇ, ಅವರು ಸಂಪೂರ್ಣವಾಗಿ ಕುಸಿದು ಹೋದರು. ಈಗ ವಿದೇಶಕ್ಕೆ ಪಲಾಯನಗೈದು ಜೀವನ ನಡೆಸುತ್ತಿದ್ದಾರೆ. ಅಲ್ಲಿಯವರೆಗೂ ಲವ್‌ಬರ್ಡ್ಸ್‌ಗಳಾಗಿ ತಿರುಗಾಡುತ್ತಿದ್ದ ನೆಸ್ ವಾಡಿಯಾ ಹಾಗೂ ಪ್ರೀತಿ ಜಿಂಟಾ, ಐಪಿಎಲ್ ಮಾಲೀಕರಾದ ಬಳಿಕ ಹಾವು-ಮುಂಗುಸಿಯಂತಾದರು.
Women's IPL : ಅದಾನಿ ತೆಕ್ಕೆಗೆ ಅಹಮದಾಬಾದ್, ಬೆಂಗಳೂರು ತಂಡವನ್ನು ಖರೀದಿಸಿದ ಆರ್‌ಸಿಬಿ ಫ್ರಾಂಚೈಸಿ..!
ಬಿಸಿಸಿಐಗೂ ಶುರುವಾಯ್ತು ಸಂಕಷ್ಟ: ಇನ್ನು ಐಪಿಎಲ್ ಆರಂಭಿಕ ಬಳಿಕ ಬಿಸಿಸಿಐಗೂ ಕೂಡ ದುರಾದೃಷ್ಟ ಬೆನ್ನೇರಿತು. ಆಂತರಿಕ ಒಳಜಗಳಗಳಿಂದಾಗಿ ಬಿಸಿಸಿಐ ಕಿತ್ತಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಆಡಳಿತಾಧಿಕಾರಿ ಸಮಿತಿ ನೇಮಿಸಿ ಇಡೀ ಬಿಸಿಸಿಐನ ವ್ಯವಹಾರದ ರೀತಿಯನ್ನೇ ಬದಲಾಯಿಸಿಬಿಟ್ಟಿತ್ತು.
ಒಂದೇ ಒಂದು ರಿಪೋರ್ಟ್, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್ ಅದಾನಿ!
ಅದಾನಿಗೂ ಶುರುವಾಯ್ತು ದುರಾದೃಷ್ಟ: ಅದಾನಿ ಗ್ರೂಪ್ ಜನವರಿ ಕೊನೆಯ ಹಂತದಲ್ಲಿ ದಾಖಲೆಯ 1289 ರೂಪಾಯಿಗೆ ಮಹಿಳಾ ಐಪಿಎಲ್‌ನಲ್ಲಿ ಅಹಮದಾಬಾದ್ ಫ್ರಾಂಚೈಸಿ ಖರೀದಿ ಮಾಡಿತ್ತು. ತಂಡವನ್ನು ಖರೀದಿ ಮಾಡಿದ ದಿನದಿಂದಲೂ ಕಂಪನಿ ಒಂದಲ್ಲಾ ಒಂದು ಸಂಕಷ್ಟದಲ್ಲಿ ಮುಳುಗಿದ್ದು, ಸದ್ಯ ಇಡೀ ಅದಾನಿ ಸಾಮ್ರಾಜ್ಯವೇ ಮುಳುಗಿ ಹೋಗುವ ಅಪಾಯದಲ್ಲಿದೆ.
ಹಾಗಂತ ಈ ಟ್ರೆಂಡ್‌ನಿಂದ ತಪ್ಪಿ ಹೋದವರು ಇಲ್ಲ ಅಂತಲ್ಲ. ಐಪಿಎಲ್ ತಂಡ ಖರೀದಿಗೆ ಪ್ರತ್ಯೇಕ ಕ್ರೀಡಾ ವಿಭಾಗವನ್ನು ಸ್ಥಾಪನೆ ಮಾಡಿದವರು ಯಶಸ್ಸು ಕಂಡಿದ್ದಾರೆ. ಅದಕ್ಕೆ ಉದಾಹರಣೆ, ಮುಂಬೈ ಇಂಡಿಯನ್ಸ್ ಮಾಲೀಕರಾದ ಅಂಬಾನಿ ಗ್ರೂಪ್, ಕೆಕೆಆರ್ ಮಾಲೀಕರಾದ ಶಾರುಖ್ ಖಾನ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರಾದ ಜಿಎಂಆರ್ ಹಾಗೂ ಜಿಂದಾಲ್ ಈ ಟ್ರೆಂಡ್‌ನಿಂದ ತಪ್ಪಿ ಹೋಗಿದ್ದಾರೆ. ಈ ಮೂರೂ ಕಂಪನಿಗಳು ಐಪಿಎಲ್ ತಂಡಗಳಿಗಾಗಿ ಕಂಪನಿಯಲ್ಲೇ ಪ್ರತ್ಯೇಕ ಕ್ರೀಡಾ ವಿಭಾಗವನ್ನು ಹೊಂದಿದೆ.