Women's IPL : ಅದಾನಿ ತೆಕ್ಕೆಗೆ ಅಹಮದಾಬಾದ್, ಬೆಂಗಳೂರು ತಂಡವನ್ನು ಖರೀದಿಸಿದ ಆರ್‌ಸಿಬಿ ಫ್ರಾಂಚೈಸಿ..!
ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಗೆ 5 ಫ್ರಾಂಚೈಸಿಗಳು ಅಂತಿಮ
ದಾಖಲೆಯ ಮೊತ್ತ ನೀಡಿ ಅಹಮದಾಬಾದ್ ಫ್ರಾಂಚೈಸಿ ಪಡೆದುಕೊಂಡ ಅದಾನಿ ಗ್ರೂಪ್
ಬೆಂಗಳೂರು ಫ್ರಾಂಚೈಸಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಆರ್‌ಸಿಬಿ
ಮುಂಬೈ(ಜ.25): ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಗೆ ಇದೀಗ ಭರ್ಜರಿ ಚಾಲನೆ ಸಿಕ್ಕಿದ್ದು, ಇದೀಗ ಐದು ಫ್ರಾಂಚೈಸಿಗಳು ತಮಗೆ ಬೇಕಾದ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಅಹಮದಾಬಾದ್, ಮುಂಬೈ, ಡೆಲ್ಲಿ, ಬೆಂಗಳೂರು ಹಾಗೂ ಲಖನೌ ತಂಡಗಳು ಕಣಕ್ಕಿಳಿಯಲಿವೆ. ಇನ್ನು ಅದಾನಿ ಗ್ರೂಪ್ ದಾಖಲೆಯ ಮೊತ್ತ ನೀಡಿ ಅಹಮದಾಬಾದ್ ಮಹಿಳಾ ಐಪಿಎಲ್ ಫ್ರಾಂಚೈಸಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಒಟ್ಟಾರೆ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ 4,669.99 ಕೋಟಿ ರುಪಾಯಿ ಬಿಸಿಸಿಐ ಪಾಲಾಗಿದೆ.
ಹೌದು, ಅದಾನಿ ಗ್ರೂಪ್, ದಾಖಲೆಯ 1,289 ಕೋಟಿ ರುಪಾಯಿ ಬಿಡ್ ಮಾಡಿ ಅಹಮದಾಬಾದ್ ಫ್ರಾಂಚೈಸಿಯ ಹಕ್ಕನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಳಿದ್ಯಾವ ಫ್ರಾಂಚೈಸಿಯು 1000 ಕೋಟಿಗೂ ಅಧಿಕ ಬಿಡ್ ಮಾಡಲಿಲ್ಲ. ಇನ್ನುಳಿದಂತೆ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 912.99 ಕೋಟಿ ರುಪಾಯಿ ನೀಡಿ ಮುಂಬೈ ಫ್ರಾಂಚೈಸಿಯನ್ನು ಪಡೆದುಕೊಂಡರೇ, ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 901 ಕೋಟಿ ರುಪಾಯಿ ನೀಡಿ ಬೆಂಗಳೂರು ಫ್ರಾಂಚೈಸಿಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಜೆಎಸ್‌ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 810 ಕೋಟಿ ರುಪಾಯಿ ನೀಡಿ ಡೆಲ್ಲಿ ಫ್ರಾಂಚೈಸಿಯನ್ನು ಹಾಗೂ ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 757 ಕೋಟಿ ರುಪಾಯಿ ನೀಡಿ ಲಖನೌ ಫ್ರಾಂಚೈಸಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಹಿಳಾ ಐಪಿಎಲ್‌ನ 5 ತಂಡಗಳ ಹರಾಜು ಇಂದು; ರೇಸ್‌ನಲ್ಲಿವೆ 17 ಸಂಸ್ಥೆಗಳು..!
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಈ ಟೂರ್ನಿಯನ್ನು ಮಹಿಳಾ ಪ್ರೀಮಿಯರ್ ಲೀಗ್(Women's Premier League) ಎಂದು ಹೆಸರಿಟ್ಟಿರುವುದಾಗಿ ಘೋಷಿಸಿದ್ದಾರೆ. ಇನ್ನು ಇದೇ ವೇಳೆ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆದ ಬಿಡ್, 2008ರ ಚೊಚ್ಚಲ ಐಪಿಎಲ್ ಬಿಡ್ ಗಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಿದ್ದಾರೆ.
2008ರ ಚೊಚ್ಚಲ ಐಪಿಎಲ್ ಟೂರ್ನಿಗೆ ಆದ ಬಿಡ್ಡಿಂಗ್ ದಾಖಲೆ ಅಳಿಸಿ ಹಾಕಿದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್. ಇದು ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿದೆ. ಒಟ್ಟಾರೆ 4669,99 ಕೋಟಿ ರುಪಾಯಿ ಬಿಡ್ ಮಾಡಿ ವಿಜೇತರಾದ ಎಲ್ಲರಿಗೂ ಅಭಿನಂದನೆಗಳು ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ಇದು ನಮ್ಮ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮಾತ್ರವಲ್ಲದೇ, ಒಟ್ಟಾರೆ ಕ್ರೀಡಾ ಕ್ಷೇತ್ರದಲ್ಲಿ ಭಾರೀ ಬದಲಾವಣೆ ತರಲಿದೆ. ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯು ಎಲ್ಲಾ ಅಗತ್ಯ ಮೂಲಸೌಕರ್ಯ ಅಭಿವೃದ್ದಿಗೆ ಸೂಕ್ತ ವಾತಾವರಣ ಕಲ್ಪಿಸಲಿದೆ. ಬಿಸಿಸಿಐ ಈ ಟೂರ್ನಿಯನ್ನು ವುಮೆನ್ಸ್ ಪ್ರೀಮಿಯರ್ ಲೀಗ್ ಎಂದು ಹೆಸರಿಟ್ಟಿದೆ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.