ಒಂದೇ ಒಂದು ರಿಪೋರ್ಟ್, 1.44 ಲಕ್ಷ ಕೋಟಿ ಕಳೆದುಕೊಂಡ ಗೌತಮ್ ಅದಾನಿ!
ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಅದಾನಿ ಗ್ರೂಪ್ ವಂಚನೆ ಮಾಡುತ್ತಿದೆ ಎಂದು ಹೇಳಿದ ಬಳಿಕ, ಗೌತಮ್ ಅದಾನಿ ಒಟ್ಟು 1.44 ಲಕ್ಷ ಕೋಟಿ ರೂಪಾಯಿ ನಷ್ಟ ಕಂಡಿದ್ದಾರೆ. ಇನ್ನು ಕಂಪನಿಯ ಎಲ್ಲಾ ಷೇರುಗಳೂ ಕುಸಿತ ಕಂಡಿರುವುದರಿಂದ ಹೂಡಿಕೆದಾರರ 2.75 ಲಕ್ಷ ಕೋಟಿ ಹಣ ಕರಗಿ ಹೋಗಿದೆ.
ಮುಂಬೈ (ಜ.27): ಕಂಪನಿಗಳ ಮೇಲಿನ ಸಾಲದ ವರದಿಯ ನಂತರ, ಅದಾನಿ ಸಮೂಹದ ಕಂಪನಿಗಳ ಷೇರುಗಳಲ್ಲಿ ದಾಖಲೆಯ ಮಟ್ಟದ ಕುಸಿತ ಕಂಡಿದೆ. ಶುಕ್ರವಾರ ಅದಾನಿ ಪೋರ್ಟ್ಸ್ ಷೇರುಗಳು 24% ನಷ್ಟು ಕುಸಿದವು ಮತ್ತು ಅದಾನಿ ಟ್ರಾನ್ಸ್‌ಮಿಷನ್‌ನ ಷೇರುಗಳು 20% ಕ್ಕಿಂತ ಹೆಚ್ಚು ಕುಸಿದವು. ಫೋರೆನ್ಸಿಕ್ ಹಣಕಾಸು ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಅದಾನಿ ಗ್ರೂಪ್ ಮೇಲೆ ವಂಚನೆ ಆರೋಪ ಮಾಡಿದ ಬೆನ್ನಲ್ಲಿಯೇ ಅದಾನಿ ಕಂಪನಿ ಷೇರುಗಳ ಕುಸಿತ ಆರಂಭಗೊಂಡಿತ್ತು. ಒಟ್ಟಾರೆ ಹಿಂಡೆನ್‌ಬರ್ಗ್ ವರದಿ ಅದಾನಿ ಸಮೂಹದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಬುಧವಾರದಿಂದ ಮೂರು ದಿನಗಳಲ್ಲಿ ಅದಾನಿ ಒಟ್ಟು ಮೌಲ್ಯದಲ್ಲಿ ಶೇ. 10ರಷ್ಟು ಇಳಿಕೆಯಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿ 1.44 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯವೂ ಕುಸಿದಿದ್ದು, ಹೂಡಿಕೆದಾರರು 2.75 ಲಕ್ಷ ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆಯ ಆರೋಪ ಮಾಡಿದ ಹಿಂಡೆನ್‌ಬರ್ಗ್: ಅದಾನಿ ಗ್ರೂಪ್‌ನ ಎಲ್ಲಾ 7 ಪ್ರಮುಖ ಲಿಸ್ಟೆಡ್ ಕಂಪನಿಗಳು (ಷೇರು ಮಾರುಕಟ್ಟೆಯಲ್ಲಿರುವಂಥ ಕಂಪನಿಗಳು) ಭಾರಿ ಪ್ರಮಾಣದ ಸಾಲವನ್ನು ಹೊಂದಿವೆ ಎಂದು ಫೋರೆನ್ಸಿಕ್ ಹಣಕಾಸು ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಎಲ್ಲಾ ಗುಂಪಿನ ಕಂಪನಿಗಳ ಷೇರುಗಳು ಸಹ 85% ಕ್ಕಿಂತ ಹೆಚ್ಚು ಮೌಲ್ಯಯುತವಾಗಿವೆ. ಅದಾನಿ ಗ್ರೂಪ್ ತನ್ನ ಷೇರುಗಳನ್ನು ಮ್ಯಾನಿಪುಲೇಟ್ ಮಾಡಿದೆ. ಲೆಕ್ಕಪತ್ರದಲ್ಲಿ ವಂಚನೆ ನಡೆದಿದೆ. ಅದಾನಿ ಗ್ರೂಪ್ ಹಲವಾರು ದಶಕಗಳಿಂದ ಮಾರುಕಟ್ಟೆ ಕುಶಲತೆ, ಲೆಕ್ಕಪತ್ರ ವಂಚನೆ ಮತ್ತು ಮನಿ ಲಾಂಡರಿಂಗ್‌ನಲ್ಲಿ ತೊಡಗಿಸಿಕೊಂಡಿದೆ ಎಂದು ಕಂಪನಿ ತನ್ನ ವರದಿಯಲ್ಲಿ ತಿಳಿಸಿದೆ.
ಹಿಂಡೆನ್‌ಬರ್ಗ್ ವರದಿಯಿಂದ ಅದಾನಿ ಗ್ರೂಪ್ ಮೇಲೆ ಆದ ಪರಿಣಾಮ: ವರದಿ ಪ್ರಕಟವಾದ ಬಳಿಕ ಅದಾನಿ ಗ್ರೂಪ್‌ನ ಒಟ್ಟು ಮೌಲ್ಯ 97.5 ಬಿಲಿಯನ್ ಯುಎಸ್ ಡಾಲರ್ ಅಂದರೆ 7.76 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ರೂ 20,000 ಕೋಟಿ ಫಾಲೋ-ಆನ್ ಸಾರ್ವಜನಿಕ ಕೊಡುಗೆ (ಎಫ್‌ಪಿಒ) ಶುಕ್ರವಾರ ಪ್ರಾರಂಭವಾಯಿತು. ಪ್ರತಿ ಷೇರಿಗೆ 3,112 ರಿಂದ 3,276 ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಆದರೆ ಇಂದು ಕುಸಿತದಿಂದಾಗಿ ಅದಾನಿ ಎಂಟರ್ ಪ್ರೈಸಸ್ ನ ಪಾಲು 2,918 ರೂ.ಗೆ ಇಳಿದಿದೆ. ಅಂದರೆ ಶೇ.14ರಷ್ಟು ಕುಸಿತ ಕಂಡಿದೆ. ಅದಾನಿ ಸಮೂಹದ ಮಾಲೀಕ ಗೌತಮ್ ಅದಾನಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಜನವರಿ 25 ರಂದು ಅವರ ನಿವ್ವಳ ಮೌಲ್ಯ 9.20 ಲಕ್ಷ ಕೋಟಿ ರೂ.ಗಳಾಗಿದ್ದು, ಶುಕ್ರವಾರದ ವೇಳೆಗೆ 7.76 ಲಕ್ಷ ಕೋಟಿ ರೂ.ಗೆ ಇಳಿದಿದೆ.
ಅದಾನಿ ಸಮೂಹದ ಕಂಪನಿಗಳ ಷೇರುಗಳ ಕುಸಿತ: ಮಧ್ಯಾಹ್ನ 1 ಗಂಟೆಯ ವೇಳೆಗೆ ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ ಶೇ. 20, ಅದಾನಿ ಪೋರ್ಟ್ಸ್ ಶೇ.23.97, ಅದಾನಿ ವಿಲ್ಮಾರ್, ಅದಾನಿ ಪವರ್ ಶೇ.5, ಅದಾನಿ ಎಂಟರ್‌ಪ್ರೈಸಸ್ ಶೇ.15, ಅಂಬುಜಾ ಸಿಮೆಂಟ್ ಶೇ. 21.90, ಎಸಿಸಿ ಶೇ. 18.64 ಹಾಗೂ ಎನ್‌ಡಿಟಿವಿ ಶೇ. 4.99ರಷ್ಟು ಕುಸಿದೆ. ಇನ್ನು ಕಳೆದ ಐದು ದಿನಗಳಲ್ಲಿ ಅದಾನಿ ಪೋರ್ಟ್ಸ್ ಹಾಗೂ ಅಂಬುಜಾ ಸಿಮೆಂಟ್ ಷೇರುಗಳಲ್ಲಿ ಶೇ. 30ರಷ್ಟು ಕುಸಿತವಾಗಿದೆ.
ಅದಾನಿ ಬದುಕಿನ ರೋಚಕ ಕತೆ: ಸ್ಕೂಟರ್ ಬಳಸ್ತಿದ್ದ, ಕಿಡ್ನಾಪ್ ಆಗಿದ್ದ ಉದ್ಯಮಿ
ಈ ನಡುವೆ ಅದಾನಿ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಜುಗ್ಶಿಂದರ್ ಸಿಂಗ್ ಈ ವರದಿಯನ್ನು ಅಧಾರರಹಿತ ಎಂದು ಕರೆದಿದ್ದಾರೆ. ವರದಿಯು ಸತ್ಯ ರಹಿತ ಎಂದು ಬಣ್ಣಿಸಿದ ಅವರು, ಮಾಡಿರುವ ಆರೋಪಗಳು ಆಧಾರ ರಹಿತವಾಗಿವೆ. ಈ ವರದಿಯು ದುರುದ್ದೇಶಪೂರಿತ ಉದ್ದೇಶದಿಂದ ಪ್ರೇರೇಪಿಸಲ್ಪಟ್ಟಿದೆ. ಹಿಂಡೆನ್‌ಬರ್ಗ್ ಸಂಶೋಧನೆಯು ನಮ್ಮನ್ನು ಸಂಪರ್ಕಿಸಲು ಅಥವಾ ಮೆಟ್ರಿಕ್‌ಗಳನ್ನು ಪರಿಶೀಲಿಸಲು ಪ್ರಯತ್ನಿಸಲಿಲ್ಲ. ಈ ವರದಿಯು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಹೇಳಿದ್ದಾರೆ. ಷೇರು ಮಾರಾಟಕ್ಕೆ ಹಾನಿಯಾದರೆ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಂಪನಿ ಪರಿಗಣಿಸುತ್ತಿದೆ.
Forbes 100 Richest Indians: ಅದಾನಿ, ಅಂಬಾನಿ, ಧಮಾನಿ ಭಾರತದ ಟಾಪ್ 3 ಶ್ರೀಮಂತರು: ಕರ್ನಾಟಕದ 10 ಮಂದಿಗೆ ಸ್ಥಾನ
ಕಾನೂನು ಕ್ರಮಕ್ಕೆ ಸಂಬಂಧಿಸಿದಂತೆ, ಹಿಂಡೆನ್‌ಬರ್ಗ್ ಕೂಡ ಪ್ರತಿಕ್ರಿಯಿಸಿದ್ದು ತನ್ನ ವರದಿಗೆ ಬದ್ಧವಾಗಿರುವುದಾಗಿ ಹೇಳಿದೆ. ಮತ್ತು ಅದಾನಿ ಗ್ರೂಪ್‌ನ ಯಾವುದೇ ಕಾನೂನು ಕ್ರಮವನ್ನು ಸ್ವಾಗತಿಸುವುದಾಗಿ ತಿಳಿಸಿದೆ. ಅದಾನಿ ಗ್ರೂಪ್ ಈ ವಿಚಾರದಲ್ಲಿ ಗಂಭೀರವಾಗಿದ್ದರೆ, ಅವರು ಅಮೆರಿಕದಲ್ಲಿ ಕೂಡ ದಾವೆ ಹೂಡಲಿ. ಕಾನೂನು ಪ್ರಕ್ರಿಯೆಯಲ್ಲಿ ಕೋರಲಾದ ದಾಖಲೆಗಳ ದೀರ್ಘ ಪಟ್ಟಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದೆ.