ಹಾರ್ದಿಕ್ ಪಾಂಡ್ಯಾರ ಟೀಕೆಗೆ ಐಪಿಎಲ್ ಕಾಮೆಂಟ್ರಿ ಪ್ಯಾನೆಲ್‌ನಿಂದ ತೆಗೆದಿರುವುದಾಗಿ ಇರ್ಫಾನ್ ಪಠಾಣ್‌ ಹೇಳಿದ್ದಾರೆ. ಕೇವಲ 7 ಪಂದ್ಯಗಳ ಕಳಪೆ ಪ್ರದರ್ಶನದ ಬಗ್ಗೆ ಮಾತ್ರ ಟೀಕಿಸಿದ್ದಕ್ಕೆ ತೆಗೆದಿರುವುದು ಪಕ್ಷಪಾತ ಎಂದಿದ್ದಾರೆ. ಹಾರ್ದಿಕ್ ಜೊತೆ ಯಾವುದೇ ವೈಯಕ್ತಿಕ ದ್ವೇಷವಿಲ್ಲವೆಂದು ಸ್ಪಷ್ಟನೆ

ಬರೋಡ: ಭಾರತೀಯ ಆಟಗಾರರ ಬಗ್ಗೆ ಟೀಕೆ ಮಾಡಿದ್ದಕ್ಕೆ ಐಪಿಎಲ್ ಕಾಮೆಂಟ್ರಿ ಪ್ಯಾನೆಲ್‌ನಿಂದ ಇರ್ಫಾನ್ ಪಠಾಣ್‌ರನ್ನು ತೆಗೆದುಹಾಕಿದ್ದು ಚರ್ಚೆಗೆ ಗ್ರಾಸವಾಗಿತ್ತು. ನವೆಂಬರ್-ಡಿಸೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದಕ್ಕೆ ಪಠಾಣ್‌ರನ್ನು ತೆಗೆದಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಪಠಾಣ್‌ ಬೇರೆಯದ್ದೇ ಕಾರಣ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಾರನ್ನು ಟೀಕಿಸಿದ್ದಕ್ಕೆ ತನ್ನನ್ನು ಕಾಮೆಂಟ್ರಿ ಪ್ಯಾನೆಲ್‌ನಿಂದ ತೆಗೆದಿದ್ದಾರೆ ಎಂದು ಲಲ್ಲನ್‌ಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಪಠಾಣ್‌ ಹೇಳಿದ್ದಾರೆ. 14 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ರೂ 7 ಪಂದ್ಯಗಳ ಬಗ್ಗೆ ಮಾತ್ರ ಟೀಕೆ ಮಾಡಿದ್ದೆ. ಇದು ಹೇಗೆ ಪಕ್ಷಪಾತ ಅಂತ ಪಠಾಣ್‌ ಪ್ರಶ್ನಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಬರೋಡದವರಾದ್ದರಿಂದ ಹಾರ್ದಿಕ್ ಪಾಂಡ್ಯ ಮತ್ತು ಯುವ ಆಟಗಾರರನ್ನು ತಾನು ಮತ್ತು ಯೂಸುಫ್ ಪಠಾಣ್‌ ಸದಾ ಬೆಂಬಲಿಸಿದ್ದೇವೆ ಎಂದಿದ್ದಾರೆ.

ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ - ಎಲ್ಲರನ್ನೂ ಬೆಂಬಲಿಸಿದ್ದೇವೆ. 2012ರಲ್ಲಿ ಹೈದರಾಬಾದ್‌ನ ಮಾರ್ಗದರ್ಶಕರಾಗಿದ್ದ ವಿ.ವಿ.ಎಸ್. ಲಕ್ಷ್ಮಣ್‌ಗೆ ಹಾರ್ದಿಕ್‌ರನ್ನು ಐಪಿಎಲ್‌ಗೆ ಆಯ್ಕೆ ಮಾಡಲು ಹೇಳಿದ್ದೆ. ಆಗ ನನ್ನ ಮಾತು ಕೇಳದಿದ್ದಕ್ಕೆ ಈಗಲೂ ಲಕ್ಷ್ಮಣ್ ಬೇಸರ ಪಡುತ್ತಾರೆ. ಆಗ ಹಾರ್ದಿಕ್‌ರನ್ನು ಆಯ್ಕೆ ಮಾಡಿದ್ರೆ ಈಗ ಹೈದರಾಬಾದ್ ಆಟಗಾರರಾಗ್ತಿದ್ರು ಎಂದು ಇರ್ಫಾನ್ ಪಠಾಣ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

2025ರ ಐಪಿಎಲ್ ಕಾಮೆಂಟ್ರಿ ಪ್ಯಾನೆಲ್‌ನಿಂದ ಹೊರಬಿದ್ದರೂ ಇರ್ಫಾನ್ ಪಠಾಣ್, ತಮ್ಮದೇ ಯೂಟ್ಯೂಬ್ ಚಾನೆಲ್ ಓಪನ್ ಮಾಡುವ ಮೂಲಕ ತಮ್ಮದೇ ಮಾತಿನ ಶೈಲಿಯಲ್ಲಿ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. ಇರ್ಫಾನ್ ಪಠಾಣ್ ಅವರ ಯೂಟ್ಯೂಬ್ ಚಾನೆಲ್‌ಗೆ 7.26 ಲಕ್ಷ ಸಬ್‌ಸ್ಕ್ರೈಬರ್ ಇದ್ದು, ಇದುವರೆಗೂ 315 ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.

2024ರ ಐಪಿಎಲ್‌ನಲ್ಲಿ ಮುಂಬೈ ನಾಯಕರಾಗಿ ಹಾರ್ದಿಕ್‌ರನ್ನು ಪ್ರೇಕ್ಷಕರು ಟೀಕಿಸಿದಾಗ ನಾನು ಪಾಂಡ್ಯ ಅವರನ್ನು ಬೆಂಬಲಿಸಿದ್ದೆ. ಟೀಕೆಗಳು ಎಲ್ಲಾ ಆಟಗಾರರ ವೃತ್ತಿಜೀವನದ ಭಾಗ. ಸಚಿನ್ ತೆಂಡುಲ್ಕರ್, ಸುನಿಲ್ ಗವಾಸ್ಕರ್ - ಎಲ್ಲರೂ ಟೀಕೆಗೆ ಒಳಗಾಗಿದ್ದಾರೆ. ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ. ವೈಯಕ್ತಿಕ ಟೀಕೆಗಳಿಗೆ ಯಾವಾಗಲೂ ಒಂದು ಮಿತಿ ಇಡುವವನು ನಾನು ಎಂದಿದ್ದಾರೆ ಇರ್ಫಾನ್ ಪಠಾಣ್.

ಇನ್ನು ಇದೇ ವೇಳೆ ಇರ್ಫಾನ್ ಪಠಾಣ್ ತಾವು 2009ರಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಶ್ರೀಲಂಕಾ ಎದುರಿನ ಸರಣಿಯಲ್ಲಿ ಸಹೋದರ ಯೂಸುಫ್ ಪಠಾಣ್ ಅವರ ಜತೆಗೂಡಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಇರ್ಫಾನ್ ಪಠಾಣ್ ಕೇವಲ 28 ಎಸೆತಗಳನ್ನು ಎದುರಿಸಿ ಸ್ಪೋಟಕ 60 ರನ್ ಸಿಡಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಇದು ಪಠಾಣ್ ಸಹೋದರರ ಅತ್ಯುತ್ತಮ ಜತೆಯಾಟ ಎನಿಸಿಕೊಂಡಿತ್ತು. ಇದರ ಹೊರತಾಗಿಯೂ ಪಠಾಣ್ ಕಿವೀಸ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದಕ್ಕೆ ಕಾರಣವಾಗಿದ್ದು, ಭಾರತ ತಂಡದ ನಾಯಕ ಧೋನಿ. ನಾನು ಬೌಲಿಂಗ್ ಆಲ್ರೌಂಡರ್ ಆಗಿದ್ದೆ, ಆಗ ಭಾರತ ಬ್ಯಾಟಿಂಗ್ ಆಲ್ರೌಂಡರ್ ಎದುರು ನೋಡುತ್ತಿತ್ತು. ಹೀಗಾಗಿ ನನ್ನನ್ನು ಕೈಬಿಟ್ಟು ಯೂಸುಫ್ ಪಠಾಣ್‌ಗೆ ತಂಡದಲ್ಲಿ ಅವಕಾಶ ಸಿಕ್ಕಿತು ಎಂದು ಪಠಾಣ್ ಹೇಳಿದ್ದಾರೆ.

ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಬೆನ್ನಲ್ಲೇ ಇರ್ಫಾನ್ ಪಠಾಣ್‌ಗೆ ಭಾರತ ತಂಡದಲ್ಲಿ ಅವಕಾಶಗಳು ಕಡಿಮೆಯಾದವು. ಪರಿಣಾಮ ಬರೋಡ ಮೂಲದ ಬೌಲಿಂಗ್ ಆಲ್ರೌಂಡರ್ ಇರ್ಫಾನ್ ಪಠಾಣ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.