ಐಪಿಎಲ್ ಹರಾಜಿನ ನಂತರ, ಆರ್. ಅಶ್ವಿನ್ ನಾಲ್ಕು ಬಲಿಷ್ಠ ತಂಡಗಳನ್ನು ಹೆಸರಿಸಿದ್ದಾರೆ. ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅನ್ನು ಆಯ್ಕೆ ಮಾಡಿರುವ ಅವರು, ಅಚ್ಚರಿಯ ರೀತಿಯಲ್ಲಿ ತಮ್ಮ ಮಾಜಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಕೈಬಿಟ್ಟಿದ್ದಾರೆ.

ಚೆನ್ನೈ: ಐಪಿಎಲ್ ಆಟಗಾರರ ಹರಾಜಿನ ನಂತರ, ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಆಟಗಾರ ಆರ್. ಅಶ್ವಿನ್ ನಾಲ್ಕು ಬಲಿಷ್ಠ ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಅಶ್ವಿನ್ ತಮ್ಮ ಮಾಜಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಪಟ್ಟಿಯಲ್ಲಿ ಸೇರಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಐಪಿಎಲ್ ಹರಾಜಿಗೂ ಮುನ್ನವೇ ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದ ಮುಂಬೈ ಇಂಡಿಯನ್ಸ್ ಅತ್ಯಂತ ಬಲಿಷ್ಠ ತಂಡ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

1. ಮುಂಬೈ ಇಂಡಿಯನ್ಸ್

ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದ ಮುಂಬೈ, ಹರಾಜಿನಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಹರಾಜಿಗೂ ಮುನ್ನ ಟ್ರೇಡ್ ಮೂಲಕ ಶೆರ್ಫೇನ್ ರುದರ್‌ಫೋರ್ಡ್, ಮಯಾಂಕ್ ಮಾರ್ಕಂಡೆ ಮತ್ತು ಶಾರ್ದೂಲ್ ಠಾಕೂರ್ ಅವರನ್ನೂ ತಂಡಕ್ಕೆ ಕರೆತಂದಿತ್ತು. ಹರಾಜಿನಲ್ಲಿ ಡಿ ಕಾಕ್ ಜೊತೆಗೆ ಡ್ಯಾನಿಶ್ ಮಲೇವಾರ್, ಮೊಹಮ್ಮದ್ ಇಶಾರ್, ಅಥರ್ವ ಅಂಕೋಲೇಕರ್ ಮತ್ತು ಮಯಾಂಕ್ ರಾವತ್ ಅವರನ್ನು ಖರೀದಿಸಿತ್ತು. ಅಂದಹಾಗೆ ಮುಂಬೈ ಇಂಡಿಯನ್ಸ್ ತಂಡವು ಐದು ಬಾರಿ ಐಪಿಎಲ್ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡಗಳ ಪೈಕಿ ಒಂದು ಎನಿಸಿಕೊಂಡಿದೆ. ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಅತ್ಯಂತ ಬಲಿಷ್ಠ ತಂಡಗಳ ಪೈಕಿ ಒಂದಾಗಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

2. ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಹರಾಜಿನ ನಂತರ ಅಶ್ವಿನ್ ಆಯ್ಕೆ ಮಾಡಿದ ಎರಡನೇ ಅತ್ಯಂತ ಬಲಿಷ್ಠ ತಂಡವೆಂದರೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆರ್‌ಸಿಬಿ ಕೂಡ ಹರಾಜಿಗೂ ಮುನ್ನ ತನ್ನ ಪ್ರಮುಖ ತಂಡವನ್ನು ಉಳಿಸಿಕೊಂಡು, ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಮತ್ತು ಜೇಕಬ್ ಡಫಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆರ್‌ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ ಅವರಂತಹ ತಾರಾ ಬ್ಯಾಟರ್‌ಗಳಿದ್ದಾರೆ. ಇದರ ಜತೆಗೆ ಇದೀಗ ಕೇವಲ 7 ಕೋಟಿ ರುಪಾಯಿಗೆ ವೆಂಕಟೇಶ್ ಅಯ್ಯರ್ ಅವರನ್ನು ಸೇರಿಸಿಕೊಂಡಿದ. ವಿಶ್ವಶ್ರೇಷ್ಠ ಮ್ಯಾಚ್‌ ಫಿನಿಶರ್‌ಗಳಾದ ಟಿಮ್ ಡೇವಿಡ್ ಹಾಗೂ ರೊಮ್ಯಾರಿಯೋ ಶೆಫರ್ಡ್ ಅವರ ಬಲ ಆರ್‌ಸಿಬಿಗಿದೆ. ಇನ್ನು ಬೌಲಿಂಗ್‌ನಲ್ಲಿ ಜೋಶ್ ಹೇಜಲ್‌ವುಡ್ ಹಾಗೂ ಭುವನೇಶ್ವರ್ ಕುಮಾರ್ ಯಾವುದೇ ಕ್ಷಣದಲ್ಲಿ ಬೇಕಾದರೂ ಪಂದ್ಯದ ಗತಿ ಬದಲಿಸುವ ಕ್ಷಮತೆ ಹೊಂದಿದ್ದಾರೆ.

ಕಳೆದ ವರ್ಷದ ರನ್ನರ್ ಅಪ್ ಪಂಜಾಬ್ ಕಿಂಗ್ಸ್, ಅಶ್ವಿನ್ ಪ್ರಕಾರ ಮೂರನೇ ಬಲಿಷ್ಠ ತಂಡವಾಗಿದೆ. ಪಂಜಾಬ್ ಕೂಡ ಹರಾಜಿಗೂ ಮುನ್ನ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿತ್ತು. ಅಶ್ವಿನ್ ಪ್ರಕಾರ ನಾಲ್ಕನೇ ಅತ್ಯುತ್ತಮ ತಂಡ ರಾಜಸ್ಥಾನ್ ರಾಯಲ್ಸ್. ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡ್ ಮೂಲಕ ಬಿಟ್ಟುಕೊಟ್ಟರೂ, ರಾಜಸ್ಥಾನ್ ತಂಡ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಅಲ್ಲದೆ, ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು 7.2 ಕೋಟಿಗೆ ಹರಾಜಿನಲ್ಲಿ ಖರೀದಿಸಿತ್ತು. ರಾಜಸ್ಥಾನ್ ಹರಾಜಿನಲ್ಲಿ ಹಲವಾರು ದೇಶೀಯ ಆಟಗಾರರನ್ನು ಸಹ ತಂಡಕ್ಕೆ ಸೇರಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೈಬಿಟ್ಟ ಅಶ್ವಿನ್:

ಇನ್ನು ಅಶ್ವಿನ್ ಅಚ್ಚರಿಯ ರೀತಿಯಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೈಬಿಟ್ಟಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿಯು ಅನ್‌ಕ್ಯಾಪ್ಡ್‌ ಆಟಗಾರರಾದ ಪ್ರಶಾಂತ್ ವೀರ್ ಹಾಗೂ ಕಾರ್ತಿಕ್ ಶರ್ಮಾಗೆ ತಲಾ 14.2 ಕೋಟಿ ನೀಡಿ ಖರೀದಿಸಿದೆ. ಸಿಎಸ್‌ಕೆ ಈ ಬಾರಿ ಸಾಕಷ್ಟು ಯುವ ಆಟಗಾರರಿಗೆ ಮಣೆ ಹಾಕಿದೆ. ಹೀಗಿದ್ದೂ ಸಿಎಸ್‌ಕೆ ಈ ಬಾರಿ ಬಲಿಷ್ಠವಾಗಿಲ್ಲ ಎನ್ನುವುದು ಅಶ್ವಿನ್ ಅಭಿಪ್ರಾಯವಿದ್ದಂತಿದೆ.