ಇರ್ಫಾನ್ ಪಠಾಣ್ 2025ರ ಐಪಿಎಲ್‌ಗೆ ಬಲಿಷ್ಠ 12 ಆಟಗಾರರ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ, ಸಾಯಿ ಸುದರ್ಶನ್ ಸೇರಿದಂತೆ ಮೂವರು ಆರ್‌ಸಿಬಿ ಆಟಗಾರರಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು:18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು 11 ವರ್ಷಗಳ ಬಳಿಕ ಮೊದಲ ಸಲ ಫೈನಲ್‌ಗೇರಿದ್ದ ಪಂಜಾಬ್ ಕಿಂಗ್ಸ್ ತಂಡದ ಟ್ರೋಫಿ ಗೆಲ್ಲುವ ಕನಸು ಮತ್ತೆ ನುಚ್ಚುನೂರಾಗಿದೆ. ಇನ್ನು ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ 2025ನೇ ಸಾಲಿನ ಬಲಿಷ್ಠ 12 ಆಟಗಾರರನ್ನೊಳಗೊಂಡ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಪಠಾಣ್ ಆಯ್ಕೆ ಮಾಡಿದ ತಂಡದಲ್ಲಿ ಮೂವರು ಆರ್‌ಸಿಬಿ ಆಟಗಾರರಿಗೆ ಸ್ಥಾನ ನೀಡಲಾಗಿದೆ.
ಇರ್ಫಾನ್ ಪಠಾಣ್ ಆಯ್ಕೆ ಮಾಡಿದ ತಂಡದಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ಸಾಯಿ ಸುದರ್ಶನ್ ಅವರಿಗೆ ಸ್ಥಾನ ನೀಡಿದ್ದಾರೆ. ಸಾಯಿ ಸುದರ್ಶನ್ ಟೂರ್ನಿಯಲ್ಲಿ 759 ರನ್ ಸಿಡಿಸಿ ಆರೆಂಜ್ ಕ್ಯಾಪ್ ಜಯಿಸಿದರೆ, ವಿರಾಟ್ ಕೊಹ್ಲಿ 15 ಪಂದ್ಯಗಳನ್ನಾಡಿ 657 ರನ್ ಬಾರಿಸುವ ಮೂಲಕ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಇದಾದ ಬಳಿಕ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಹಾಗೂ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡಿದ್ದಾರೆ. ಗುಜರಾತ್ ಟೈಟಾನ್ಸ್ ಪ್ಲೇ ಆಫ್‌ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ಟೂರ್ನಿಯುದ್ದಕ್ಕೂ ನಾಯಕನಾಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಇರ್ಫಾನ್ ಪಠಾಣ್ ಕೂಡಾ 2025ರ ಬಲಿಷ್ಠ ಐಪಿಎಲ್ ತಂಡಕ್ಕೂ ಶ್ರೇಯಸ್ ಅಯ್ಯರ್‌ಗೆ ನಾಯಕ ಪಟ್ಟ ಕಟ್ಟಿದ್ದಾರೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಹೆನ್ರಿಚ್ ಕ್ಲಾಸೇನ್ ಹಾಗೂ ನಮನ್ ಧೀರ್‌ಗೆ ಸ್ಥಾನ ನೀಡಿದ್ದಾರೆ. ಮುಂಬೈ ಇಂಡಿಯನ್ಸ್‌ನ ಸೂರ್ಯ 16 ಪಂದ್ಯಗಳನ್ನಾಡಿ 717 ರನ್ ಸಿಡಿಸುವ ಮೂಲಕ ಟೂರ್ನಿಯ ಮೌಲ್ಯಯುತ ಆಟಗಾರನಾಗಿ ಹೊರಹೊಮ್ಮಿದರು. ಇನ್ನು ಸನ್‌ರೈಸರ್ಸ್‌ನ ಕ್ಲಾಸೆನ್ 487 ರನ್ ಸಿಡಿಸಿದ್ದರು. ಇನ್ನು ನಮನ್ ಧೀರ್ 16 ಪಂದ್ಯಗಳ 12 ಇನ್ನಿಂಗ್ಸ್‌ನಿಂದ 252 ರನ್ ಸಿಡಿಸಿದ್ದರು.
ಇನ್ನುಳಿದಂತೆ ಬರೋಡ ಮೂಲದ ಎಡಗೈ ಸ್ಪಿನ್ನರ್ ಕೃನಾಲ್ ಪಾಂಡ್ಯ, ಆರ್‌ಸಿಬಿ ಪರ 109 ರನ್ ಹಾಗೂ 17 ವಿಕೆಟ್ ಕಬಳಿಸಿದ್ದರು. ಫೈನಲ್‌ನಲ್ಲಿ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು. ಬೌಲಿಂಗ್ ವಿಭಾಗದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನೂರ್ ಅಹಮದ್(24 ವಿಕೆಟ್), ಆರ್‌ಸಿಬಿಯ ಮಾರಕ ವೇಗಿ ಜೋಶ್ ಹೇಜಲ್‌ವುಡ್(22 ವಿಕೆಟ್), ಜಸ್ಪ್ರೀತ್ ಬುಮ್ರಾ(18 ವಿಕೆಟ್) ಹಾಗೂ ಪರ್ಪಲ್ ಕ್ಯಾಪ್ ವಿಜೇತ ಪ್ರಸಿದ್ಧ್ ಕೃಷ್ಣ(25 ವಿಕೆಟ್) ಸ್ಥಾನ ಪಡೆದಿದ್ದಾರೆ.
ಇರ್ಫಾನ್ ಆಯ್ಕೆ ಮಾಡಿದ ಬಲಿಷ್ಠ ತಂಡದಲ್ಲಿ ಆರ್‌ಸಿಬಿಯ ಮೂವರು ಆಟಗಾರರಾದ ವಿರಾಟ್ ಕೊಹ್ಲಿ, ಕೃನಾಲ್ ಪಾಂಡ್ಯ ಹಾಗೂ ಜೋಶ್ ಹೇಜಲ್‌ವುಡ್ ಸ್ಥಾನ ಪಡೆದಿದ್ದಾರೆ. ಆದರೆ ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್ ಸರದಾರ ಶುಭ್‌ಮನ್ ಗಿಲ್, ಮುಂಬೈ ಇಂಡಿಯನ್ಸ್ ಮಾರಕ ವೇಗಿ ಟ್ರೆಂಟ್ ಬೌಲ್ಟ್ ಸ್ಥಾನ ಪಡೆಯಲು ವಿಫಲವಾಗಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಇರ್ಫಾನ್ ಪಠಾಣ್ ಆಯ್ಕೆ ಮಾಡಿದ 2025ರ ಬಲಿಷ್ಠ ಐಪಿಎಲ್ ತಂಡ ಹೀಗಿದೆ ನೋಡಿ:
ವಿರಾಟ್ ಕೊಹ್ಲಿ, ಸಾಯಿ ಸುದರ್ಶನ್, ಜೋಸ್ ಬಟ್ಲರ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹೆನ್ರಿಚ್ ಕ್ಲಾಸೆನ್, ನಮನ್ ಧೀರ್, ಕೃನಾಲ್ ಪಾಂಡ್ಯ, ನೂರ್ ಅಹಮದ್, ಜಸ್ಪ್ರೀತ್ ಬುಮ್ರಾ, ಜೋಶ್ ಹೇಜಲ್‌ವುಡ್, ಪ್ರಸಿದ್ದ್ ಕೃಷ್ಣ.
