ಬರೋಬ್ಬರಿ 40 ವರ್ಷಗಳ ಬಳಿಕ, ಶ್ರೀನಗರದ ಶೇರ್ ಎ ಕಾಶ್ಮೀರ ಕ್ರೀಡಾಂಗಣವು ಇರಾನಿ ಕಪ್ ಫೈನಲ್‌ಗೆ ಆತಿಥ್ಯ ವಹಿಸುವ ಮೂಲಕ ಪ್ರಮುಖ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯವು ಹಾಲಿ ರಣಜಿ ಚಾಂಪಿಯನ್ ಜಮ್ಮು-ಕಾಶ್ಮೀರ ಮತ್ತು ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವೆ ನಡೆಯಲಿದೆ.
ಶ್ರೀನಗರ: ಬರೋಬ್ಬರಿ 40 ವರ್ಷಗಳ ಬಳಿಕ ಮತ್ತೊಮ್ಮೆ ಕಾಶ್ಮೀರ ಪ್ರಮುಖ ಕ್ರಿಕೆಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಬಾರಿ ಇರಾನಿ ಕಪ್ ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ರಣಜಿ ಚಾಂಪಿಯನ್ ಜಮ್ಮು-ಕಾಶ್ಮೀರ ಹಾಗೂ ರೆಸ್ಟ್ ಆಫ್ ಇಂಡಿಯಾ(ಶೇಷ ಭಾರತ) ತಂಡಗಳ ನಡುವಿನ ಫೈನಲ್ ಪಂದ್ಯ ಅ.1ರಿಂದ 5ರ ವರೆಗೆ ಶ್ರೀನಗರದ ಶೇರ್ ಎ ಕಾಶ್ಮೀರ ಕ್ರೀಡಾಂಗಣದಲ್ಲಿ ನಡೆಯಲಿದೆ.
1986ರಲ್ಲಿ ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಈ ಕ್ರೀಡಾಂಗಣದಲ್ಲಿ ಕೊನೆ ಬಾರಿ ಏಕದಿನ ಪಂದ್ಯ ನಡೆದಿತ್ತು. ಆ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಾಶ್ಮೀರ ಆತಿಥ್ಯ ವಹಿಸಿಲ್ಲ. ದೇಸಿ ಕ್ರಿಕೆಟ್ ಟೂರ್ನಿಯ ಪ್ರಮುಖ ಪಂದ್ಯಗಳೂ ಕಾಶ್ಮೀರದಲ್ಲಿ ನಡೆದಿರಲಿಲ್ಲ. ಆದರೆ ಈ ಬಾರಿ ರಣಜಿ ಟ್ರೋಫಿಯಲ್ಲಿ ಜಮ್ಮು-ಕಾಶ್ಮೀರ ಚಾಂಪಿಯನ್ ಆಗಿರುವುದರಿಂದ, ಅದರದೇ ತವರಿನಲ್ಲಿ ಇರಾನಿ ಕಪ್ ಫೈನಲ್ ಆಯೋಜನೆಗೊಳ್ಳಲಿದೆ. 2025-26ರ ರಣಜಿ ಫೈನಲ್‌ನಲ್ಲಿ ಜಮ್ಮು-ಕಾಶ್ಮೀರ ತಂಡ ಕರ್ನಾಟಕ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಣಿವೆ ನಾಡಿನಲ್ಲಿ ಮಹತ್ವದ ಕ್ರಿಕೆಟ್ ಟೂರ್ನಿ ಆಯೋಜನೆಗೊಳ್ಳುತ್ತಿರುವುದು ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ.
ಸೆ.13, 15, 17ರಂದು ದೆಹಲಿಯಲ್ಲಿ ಭಾರತ vs ಅಫ್ಘಾನಿಸ್ತಾನ ಟಿ20
ನವದೆಹಲಿ: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟಗೊಂಡಿದೆ. ಬುಧವಾರ ಬಿಸಿಸಿಐ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಜಂಟಿಯಾಗಿ ಈ ವೇಳಾಪಟ್ಟಿ ಪ್ರಕಟಿಸಿದವು. ಆಫ್ಘಾನಿಸ್ತಾನ ಆತಿಥ್ಯ ವಹಿಸಲಿರುವ ಈ ಸರಣಿಯ ಪಂದ್ಯಗಳು ಸೆ.13, 15 ಹಾಗೂ 17ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರೊಂದಿಗೆ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸರಣಿ ನಡೆಯುವ ಸಾಧ್ಯತೆ ಕಡಿಮೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಭಾರತ-ಬಾಂಗ್ಲಾ ಸರಣಿ ಸಾಧ್ಯತೆ ಇತ್ತಾದರೂ, ಈ ಸಮಯದಲ್ಲೇ ಆಫ್ಘನ್ ವಿರುದ್ಧ ಭಾರತ ಆಡಲಿರುವುದರಿಂದಾಗಿ ಬಾಂಗ್ಲಾ ಸರಣಿ ರದ್ದಾಗುವ ಸಾಧ್ಯತೆ ಹೆಚ್ಚು.
ಭಾರತ vs ಶ್ರೀಲಂಕಾ ಟೆಸ್ಟ್ ಸರಣಿಗೆ ರಹಾನೆ ಕಾಮೆಂಟ್ರಿ
ಮುಂಬೈ: ಇತ್ತೀಚೆಗಷ್ಟೇ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಅವರು ಶನಿವಾರದಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ನಡುವಿನ 2 ಟೆಸ್ಟ್ ಸರಣಿಗೆ ಕಾಮೆಂಟ್ರಿ ಮಾಡಲಿದ್ದಾರೆ. ಸೋನಿ ಸ್ಪೋರ್ಟ್ಸ್ ನೆಟ್ವರ್ಕ್‌ನ ಕಾಮೆಂಟ್ರಿ ತಂಡ ಕೂಡಿಕೊಳ್ಳಲಿರುವ ಅವರು ಇದೇ ಮೊದಲ ಬಾರಿ ಪಂದ್ಯವೊಂದರ ವೀಕ್ಷಕ ವಿವರಣೆಗಾರ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಈ ಬಗ್ಗೆ ರಹಾನೆ ಸಂತಸ ವ್ಯಕ್ತಪಡಿಸಿದ್ದು, ‘ಭಾರತದ ಶ್ರೀಲಂಕಾ ಪ್ರವಾಸಕ್ಕೆ ವೀಕ್ಷಕ ವಿವರಣೆಗಾರನಾಗಿ ಪಾದಾರ್ಪಣೆ ಮಾಡಲು ನಾನು ಉತ್ಸುಕನಾಗಿದ್ದೇನೆ. ಕ್ರಿಕೆಟ್ ಅನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಅವಕಾಶ ಸಿಕ್ಕಿರುವುದು ಸೌಭಾಗ್ಯ’ ಎಂದಿದ್ದಾರೆ.


